ನನಗೂ 5 ಕೋಟಿ ರೂ. ಬೇಡ! ಹಿಟ್​ಮ್ಯಾನ್​ ರೋಹಿತ್​ ದೊಡ್ಡ ಗುಣಕ್ಕೆ ತಲೆಬಾಗಿದ ಅಭಿಮಾನಿಗಳು

Rohit Sharma
Published on

ನವದೆಹಲಿ: ಅಮೆರಿಕ-ವೆಸ್ಟ್​ಇಂಡೀಸ್ ಜಂಟಿಯಾಗಿ ಆಯೋಜನೆ ಮಾಡಿದ್ದ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಟೀಮ್​​ ಇಂಡಿಯಾ ಭರ್ಜರಿ ಪ್ರದರ್ಶನದೊಂದಿಗೆ ಒಂದೇ ಒಂದು ಪಂದ್ಯವನ್ನು ಸೋಲದೆ ಟ್ರೋಫಿ ಎತ್ತಿಹಿಡಿದಿದ್ದು ಎಲ್ಲರಿಗೂ ತಿಳಿದಿದೆ. 2007ರಲ್ಲಿ ನಡೆದ ಚೊಚ್ಚಲ ಟಿ20 ವಿಶ್ವಕಪ್ ಗೆದ್ದ ಭಾರತ, 17 ವರ್ಷಗಳ ಬಳಿಕ ಅದೇ ಸ್ವರೂಪದಲ್ಲಿ ಮತ್ತೊಮ್ಮೆ ಟ್ರೋಫಿಗೆ ಮುತ್ತಿಟ್ಟಿದೆ. ಈ ಮೆಗಾ ಟೂರ್ನಿಯ ಆರಂಭದಿಂದಲೂ ಎದುರಾಳಿಗಳನ್ನು ಭಯಭೀತರನ್ನಾಗಿಸಿದ್ದ ರೋಹಿತ್ ಶರ್ಮ ಪಡೆ, ಕೊನೆಯವರೆಗೂ ಅದೇ ಆಕ್ರಮಣವನ್ನು ಮುಂದುವರಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಬಲಿಷ್ಠ ತಂಡಗಳಾದ ಪಾಕಿಸ್ತಾನ, ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ತಂಡಗಳನ್ನು ಸೋಲಿಸಿ ಕಪ್ ಎತ್ತಿದ್ದಾರೆ. ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಟೀಮ್​ ಇಂಡಿಯಾ ಜಯಗಳಿಸಿದ ದೃಶ್ಯ ಅಭಿಮಾನಿಗಳ ಕಣ್ಣಲ್ಲಿ ಇನ್ನೂ ಹಸಿರಾಗಿಯೇ ಇದೆ.

ವಿಶ್ವಕಪ್‌ನೊಂದಿಗೆ ತವರಿಗೆ ಮರಳಿದ ರೋಹಿತ್ ಪಡೆ, ಮೊದಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು. ಆ ಬಳಿಕ ಮುಂಬೈನಲ್ಲಿ ನಡೆದ ವಿಜಯೋತ್ಸವ ಪರೇಡ್‌ನಲ್ಲಿ ಭಾಗವಹಿಸಿದ್ದರು. ಬಳಿಕ ವಾಂಖೆಡೆ ಸ್ಟೇಡಿಯಂನಲ್ಲಿ ಅಭಿಮಾನಿಗಳೊಂದಿಗೆ ವಿಜಯೋತ್ಸವ ಆಚರಿಸಿದರು. ಇನ್ನು ಬಿಸಿಸಿಐ ಟೀಮ್​ ಇಂಡಿಯಾಗೆ 125 ಕೋಟಿ ರೂ. ಬಹುಮಾನ ಘೋಷನೆ ಮಾಡಿರುವುದು ಗೊತ್ತೇ ಇದೆ. ಇದರಲ್ಲಿ ತಂಡದ 15 ಆಟಗಾರರಿಗೆ ತಲಾ 5 ಕೋಟಿ ರೂ. ನೀಡಲಾಗಿದೆ. ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೂ ಆಟಗಾರರಿಗೆ ಸರಿಸಮನಾಗಿ 5 ಕೋಟಿ ರೂ. ಘೋಷಣೆ ಮಾಡಲಾಗಿದೆ. ಉಳಿದಂತೆ ಕೋಚಿಂಗ್ ಸಿಬ್ಬಂದಿಗೆ 2.5 ಕೋಟಿ ರೂ. ಮತ್ತು ಉಳಿದ ಸಿಬ್ಬಂದಿಗೆ 2 ಕೋಟಿ ರೂ. ನೀಡಲಾಗಿದೆ. ಆದರೆ, ಈ ವಿಚಾರದಲ್ಲಿ ರೋಹಿತ್ ನಡೆ ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಬಿಸಿಸಿಐ ನೀಡಿದ ಬಹುಮಾನದ ಹಣದಲ್ಲಿ ಸಹಾಯಕ ಸಿಬ್ಬಂದಿ ಕಡಿಮೆ ಮೊತ್ತ ಪಡೆದಿರುವ ಬಗ್ಗೆ ರೋಹಿತ್ ಅದೇ ದಿನ ಅಸಮಾಧಾನ ವ್ಯಕ್ತಪಡಿಸಿದರು. ತಂಡದ ಯಶಸ್ಸಿಗೆ ಶ್ರಮಿಸಿದ ಸಿಬ್ಬಂದಿಗೆ ಕಡಿಮೆ ಮೊತ್ತ ಏಕೆ ಎಂದು ಪ್ರಶ್ನಿಸಿದರು. ಇದಲ್ಲದೆ, ತಮಗೆ ಬಂದಿರುವ 5 ಕೋಟಿ ರೂಪಾಯಿಯನ್ನು ಬಿಟ್ಟುಕೊಡುವುದಾಗಿ ಹೇಳಿದರು ಎಂದು ಟೀಮ್​ ಇಂಡಿಯಾದ ಸಹಾಯಕ ಸಿಬ್ಬಂದಿಯೊಬ್ಬರು ಈ ವಿಷಯವನ್ನು ತಿಳಿಸಿದ್ದಾರೆ.

ಇದೀಗ ರೋಹಿತ್ ಅವರ ಹೃದಯ ವಿಶಾಲತೆಯನ್ನು ಕಂಡು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ದ್ರಾವಿಡ್ ಕೂಡ ತಮ್ಮ ಬೋನಸ್ ಅನ್ನು ಅರ್ಧಕ್ಕೆ ಇಳಿಸಿ ಸಹಾಯಕ ಸಿಬ್ಬಂದಿಗೆ ಸರಿಸಮನಾದ ಬಹುಮಾನ ಸಾಕು ಎಂದು ಹೇಳಿದ್ದಾರೆ. ಬಹುಮಾನ ಮೊತ್ತದ ವಿಚಾರದಲ್ಲಿ ರೋಹಿತ್ ಮತ್ತು ದ್ರಾವಿಡ್ ನಡೆದುಕೊಂಡ ರೀತಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net