

Rohit Sharma:ಪ್ರಸಕ್ತ ದುಬೈ ಮತ್ತು ಪಾಕಿಸ್ತಾನ ಕ್ರೀಡಾಂಗಣಗಳಲ್ಲಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಫೈನಲ್ ಹಂತವನ್ನು ತಲುಪಿರುವ ರೋಹಿತ್ ಶರ್ಮ ಪಡೆ, ಅಂತಿಮ ಹಣಾಹಣಿಯಲ್ಲಿ ನ್ಯೂಜಿಲೆಂಡ್ ಎದುರು ಗೆಲುವಿಗಾಗಿ ಸೆಣಸಲಿದೆ. ಈ ಪಂದ್ಯ ಇದೇ ಭಾನುವಾರ ದುಬೈನಲ್ಲಿ ನಡೆಯಲಿದ್ದು, ಯಾರ ಮುಡಿಗೆ 2025ರ ಚಾಂಪಿಯನ್ಸ್ ಟ್ರೋಫಿ ಸೇರಲಿದೆ ಎಂಬ ಪ್ರಶ್ನೆ ಸದ್ಯ ಕ್ರಿಕೆಟ್ ಅಭಿಮಾನಿಗಳನ್ನು ಬೆಂಬಿಡದೆ ಕಾಡುತ್ತಿದೆ.
ಟೂರ್ನಿಯಲ್ಲಿ ಆಡಿದ ನಾಲ್ಕು ಪಂದ್ಯಗಳನ್ನು ಗೆದ್ದು ಬೀಗಿರುವ ಟೀಮ್ ಇಂಡಿಯಾ, ಫೈನಲ್ ಪಂದ್ಯದಲ್ಲಿ ಕಿವೀಸ್ ವಿರುದ್ಧ ಭಾರೀ ಪೈಪೋಟಿ ಕೊಡಲು ಸಜ್ಜಾಗಿದೆ. ಚಾಂಪಿಯನ್ಸ್ ಟ್ರೋಫಿ ಕೊನೆಯ ಹಂತವನ್ನು ತಲುಪಿದ ಬೆನ್ನಲ್ಲೇ ಕ್ಯಾಪ್ಟನ್ ರೋಹಿತ್ ಶರ್ಮ ಅವರ ನಿವೃತ್ತಿ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಈ ವಿಚಾರ ಸದ್ಯ ಬಿಸಿಸಿಐ ಅಂಗಳದಲ್ಲಿದ್ದು, ತಮ್ಮ ನಿವೃತ್ತಿ ಬಗ್ಗೆ ರೋಹಿತ್ ಏನು ಹೇಳಲಿದ್ದಾರೆ ಎಂಬುದನ್ನು ಫೈನಲ್ ಮುಗಿದ ಬಳಿಕ ಅವರಿಂದಲೇ ತಿಳಿಯಬೇಕು ಎಂದು ಬಿಸಿಸಿಐ ತಿಳಿಸಿದೆ.
ವರದಿಗಳ ಪ್ರಕಾರ, ಭವಿಷ್ಯದ ಟೀಮ್ ಇಂಡಿಯಾ ನಾಯಕ ಯಾರು? ರೋಹಿತ್ ಶರ್ಮ ನಾಯಕತ್ವದ ನಿಲುವಿನ ಬಗ್ಗೆ ಮುಂದಿನ ಎರಡು ವಾರಗಳಲ್ಲಿ ದೃಢವಾಗಿ ನಿರ್ಧರಿಸಲಾಗುವುದು. ಮುಂಬರುವ ಎರಡು ವರ್ಷಗಳ ಕಾಲ ಯಾರು ಭಾರತ ತಂಡವನ್ನು ಕ್ಯಾಪ್ಟನ್ ಆಗಿ ಮುನ್ನಡೆಸಲಿದ್ದಾರೆ ಎಂಬುದನ್ನು ಶೀಘ್ರದಲ್ಲಿ ನಿರ್ಧರಿಸಲಾಗುವುದು. ರೋಹಿತ್ ಇನ್ನೂ ಕೆಲವು ವರ್ಷಗಳ ಕಾಲ ಭಾರತ ಪರ ಆಡಲು ಬಯಸುತ್ತಾರೆ. ಚಾಂಪಿಯನ್ಸ್ ಟ್ರೋಫಿಯ ಮುಕ್ತಾಯದ ನಂತರ ತಮ್ಮ ನಿರ್ಧಾರವೇನು ಎಂದು ಬಹಿರಂಗಪಡಿಸುವಂತೆ ಅವರಿಗೆ ಈಗಾಗಲೇ ಸೂಚಿಸಲಾಗಿದೆ. ನಿವೃತ್ತಿ ಅವರ ಆಯ್ಕೆ, ಆದರೆ ನಾಯಕತ್ವವಲ್ಲ ಬಿಸಿಸಿಐ ಮೂಲಗಳು ತಿಳಿಸಿವೆ.
ಇನ್ನು ಕುತೂಹಲಕಾರಿ ಸಂಗತಿ ಎಂದರೆ, ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಗೆದ್ದ ನಂತರ ಟೀಮ್ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ಮತ್ತು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ನಾಯಕ ರೋಹಿತ್ ಜತೆಗೆ ಕೆಲ ಕಾಲ ಚರ್ಚೆ ನಡೆಸಿದ್ದಾರೆ. ಭವಿಷ್ಯದ ಒಪ್ಪಂದಗಳ ಕುರಿತು ಅವರೊಡೆನೆ ಚರ್ಚಿಸಿರುವುದಾಗಿ ವರದಿಗಳು ಉಲ್ಲೇಖಿಸಿವೆ,(ಏಜೆನ್ಸೀಸ್).