

ಮುಂಬೈ: ಅನುಭವಿ ಬ್ಯಾಟರ್ ರೋಹಿತ್ ಶರ್ಮ ಮುಂದಿನ ವರ್ಷದ ಐಪಿಎಲ್ನಲ್ಲಿ ಮತ್ತೆ ಮುಂಬೈ ಇಂಡಿಯನ್ಸ್ ತಂಡದ ನಾಯಕನ ಪಟ್ಟಕ್ಕೇರಲಿದ್ದಾರೆ ಎಂಬ ವರದಿಯ ನಡುವೆ ದೇಶೀಯ ಕ್ರಿಕೆಟ್ನಲ್ಲಿ ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯಲ್ಲಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಮತ್ತಷ್ಟು ಸಂಭ್ರಮ ತಂದಿದೆ.
ವಿಜಯ್ ಹಜಾರೆ ಟ್ರೋಫಿಯಲ್ಲಿ ಮುಂಬೈ ಪರ ಆಡಲು ಲಭ್ಯನಿದ್ದೇನೆ ಎಂದು 39 ವರ್ಷದ ರೋಹಿತ್ ಶರ್ಮ ಮುಂಬೈ ಕ್ರಿಕೆಟ್ ಸಂಸ್ಥೆಗೆ (ಎಂಸಿಎ) ತಿಳಿಸಿದ್ದಾರೆ. ಶ್ರೀಲಂಕಾ ವಿರುದ್ಧ ತವರಿನ ಏಕದಿನ ಸರಣಿಯಲ್ಲಿ ಆಡಿದ ಬಳಿಕ ರೋಹಿತ್ ಮುಂಬೈ ಪರ ಕಣಕ್ಕಿಳಿಯಲಿದ್ದಾರೆ ಎನ್ನಲಾಗಿದೆ.
ಲಂಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿ ಡಿಸೆಂಬರ್ 13ರಿಂದ 19ರವರೆಗೆ ನಡೆಯಲಿದ್ದರೆ, ವಿಜಯ್ ಹಜಾರೆ ಟ್ರೋಫಿಯ ಲೀಗ್ ಹಂತ ಡಿಸೆಂಬರ್ 14ರಿಂದ 29ರವರೆಗೆ ನಡೆಯಲಿದೆ. ಹೀಗಾಗಿ ರೋಹಿತ್ ಆರಂಭಿಕ 2&3 ಲೀಗ್ ಪಂದ್ಯಗಳ ಬಳಿಕ ಮುಂಬೈ ತಂಡವನ್ನು ಕೂಡಿಕೊಳ್ಳುವ ನಿರೀಕ್ಷೆ ಇದೆ.
ವಿಜಯ್ ಹಜಾರೆ ಟ್ರೋಫಿಯ ನಾಕೌಟ್ ಹಂತ 2027ರ ಜನವರಿ 2ರಿಂದ 8ರವರೆಗೆ ನಡೆಯಲಿದೆ. ಆದರೆ ಮುಂಬೈ ತಂಡ ನಾಕೌಟ್ ಹಂತಕ್ಕೇರಿದರೂ ರೋಹಿತ್ ಲಭ್ಯರಾಗುವುದಿಲ್ಲ. ಯಾಕೆಂದರೆ ಜನವರಿ 3ರಿಂದ ಭಾರತ ತಂಡ ತವರಿನಲ್ಲಿ ಜಿಂಬಾಬ್ವೆ ವಿರುದ್ಧ 3 ಪಂದ್ಯಗಳ ಏಕದಿನ ಸರಣಿ ಆಡಲಿದೆ.
ರೋಹಿತ್ ಕಳೆದ ವರ್ಷವೂ ವಿಜಯ್ ಹಜಾರೆ ಟ್ರೋಫಿಯಲ್ಲಿ ಮುಂಬೈ ಪರ ಆಡಿದ್ದರು. ಜೈಪುರದಲ್ಲಿ 2 ಪಂದ್ಯಗಳನ್ನು ಆಡಿದ್ದ ಅವರು, ಸಿಕ್ಕಿಂ ವಿರುದ್ಧ 94 ಎಸೆತಗಳಲ್ಲಿ 155 ರನ್ ಸಿಡಿಸಿದ್ದರೆ, 2 ದಿನಗಳ ಬಳಿಕ ಉತ್ತರಾಖಂಡ ವಿರುದ್ಧ ಗೋಲ್ಡನ್ ಡಕ್ಗೆ ಔಟಾಗಿದ್ದರು. ಅದಕ್ಕೆ ಮುನ್ನ 2018ರಲ್ಲಿ ಕೊನೆಯದಾಗಿ ಅವರು ಈ ಟೂರ್ನಿಯಲ್ಲಿ ಆಡಿದ್ದರು.