ಏಕದಿನ ಸ್ವರೂಪಕ್ಕೂ ನಿವೃತ್ತಿ ಘೋಷಿಸ್ತಾರಾ? ಚಾಂಪಿಯನ್ಸ್​ ಆದ ಬೆನ್ನಲ್ಲೇ ಹಿಟ್​ಮ್ಯಾನ್ ಹೇಳಿಕೆ ವೈರಲ್​! Rohit Sharma ​

Rohit Sharma ​
Published on

Rohit Sharma : ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ನಂತರ ಟೀಮ್ ಇಂಡಿಯಾದ ಪ್ರಮುಖ ಆಟಗಾರರು ನಿವೃತ್ತಿ ಘೋಷಿಸಲಿದ್ದಾರೆ ಎಂಬ ಊಹಾಪೋಹಗಳು ಕೇಳಿಬರುತ್ತಿತ್ತು. ಅದರಲ್ಲೂ ಪ್ರಮುಖವಾಗಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ ಏಕದಿನ ಪಂದ್ಯಗಳಿಗೆ ವಿದಾಯ ಹೇಳಲಿದ್ದಾರೆ ಎಂಬ ಊಹಾಪೋಹಗಳು ಹರಡಿದ್ದವು.

ಕಳೆದ ವರ್ಷ ಟಿ20 ವಿಶ್ವಕಪ್ ಗೆದ್ದ ನಂತರ ರೋಹಿತ್​ ಶರ್ಮ ಅವರು ಅಂತಾರಾಷ್ಟ್ರೀಯ ಟಿ20 ಸ್ವರೂಪಕ್ಕೆ ವಿದಾಯ ಹೇಳಿದಂತೆ, ಚಾಂಪಿಯನ್ಸ್ ಟ್ರೋಫಿಯ ನಂತರ ಏಕದಿನ ಪಂದ್ಯಗಳಿಗೆ ವಿದಾಯ ಹೇಳಲಿದ್ದಾರೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ, ರೋಹಿತ್ ಸ್ವತಃ ಈ ವದಂತಿಗಳಿಗೆ ಪೂರ್ಣ ವಿರಾಮ ಹಾಕಿದ್ದಾರೆ. ಹಿಟ್‌ಮ್ಯಾನ್ ತಮ್ಮ ನಿವೃತ್ತಿಯ ಊಹಾಪೋಹಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಸದ್ಯಕ್ಕೆ ಏಕದಿನ ಪಂದ್ಯಗಳಿಂದ ನಿವೃತ್ತಿ ಹೊಂದುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೋಹಿತ್, ಏಕದಿನ ಪಂದ್ಯಗಳಲ್ಲಿ ಮುಂದುವರಿಯುವುದಾಗಿ ಸ್ಪಷ್ಟಪಡಿಸಿದರು. ತಮ್ಮ ಭವಿಷ್ಯದ ಬಗ್ಗೆ ಯಾವುದೇ ಯೋಜನೆಗಳಿಲ್ಲ ಮತ್ತು ಆದ್ದರಿಂದ ತಮ್ಮ ನಿವೃತ್ತಿಯ ಬಗ್ಗೆ ಯಾವುದೇ ಪ್ರಚಾರ ಮಾಡದಂತೆ ಮಾಧ್ಯಮಗಳನ್ನು ಕೇಳಿಕೊಂಡರು. ರೋಹಿತ್ ಈ ಮಾತು ಹೇಳಿದ ನಂತರ, ಇಡೀ ಸಭಾಂಗಣ ಚಪ್ಪಾಳೆಯಿಂದ ತುಂಬಿತು. ಹಿಟ್‌ಮ್ಯಾನ್‌ನ ನಿರ್ಧಾರದಿಂದ ಅಭಿಮಾನಿಗಳು ಸಂತೋಷಪಟ್ಟಿದ್ದಾರೆ.

ಆದಾಗ್ಯೂ, ಭಾರತ ತಂಡ ಏನಾದರೂ ಚಾಂಪಿಯನ್ಸ್ ಟ್ರೋಫಿಯನ್ನು ಕಳೆದುಕೊಂಡರೆ ರೋಹಿತ್ ನಿರ್ಗಮಿಸುವುದು ಖಚಿತ, ಆದರೆ ಟ್ರೋಫಿ ಗೆದ್ದರೆ, ರೋಹಿತ್ ಆಟವನ್ನೇ ಮುಂದುವರಿಸುತ್ತಾರೆ ಎಂದು ಅನೇಕ ಮಾಧ್ಯಮ ವರದಿಗಳು ಈ ಹಿಂದೆಯೇ ಬಹಿರಂಗಪಡಿಸಿದ್ದವು. ಇದೀಗ ಟ್ರೋಫಿ ಜಯಿಸಿದ್ದು, ರೋಹಿತ್​ ವೃತ್ತಿ ಜೀವನಕ್ಕೆ ಮತ್ತೊಂದು ಬೂಸ್ಟ್​ ಸಿಕ್ಕಿದೆ.

ಈ ಚಾಂಪಿಯನ್ಸ್ ಟ್ರೋಫಿ ಗೆಲುವಿಗೂ ಮುನ್ನ ರೋಹಿತ್ ಮೇಲೆ ತುಂಬಾ ಒತ್ತಡವಿತ್ತು. ನ್ಯೂಜಿಲೆಂಡ್ ವಿರುದ್ಧದ ತವರಿನಲ್ಲಿ ಟೆಸ್ಟ್ ಸರಣಿ ಸೋಲು ಮತ್ತು ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೆಸ್ಟ್ ಸರಣಿ ಸೋಲು ರೋಹಿತ್ ಅವರ ನಾಯಕತ್ವದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿತು. ಅಂದಿನಿಂದ, ಅವರ ನಿವೃತ್ತಿಯ ವರದಿಗಳು ನಿರಂತರವಾಗಿ ಬರುತ್ತಿದ್ದವು. ಇದೇ ಸಂದರ್ಭದಲ್ಲಿ ರೋಹಿತ್ ನಾಯಕತ್ವದಲ್ಲಿ, ಭಾರತ ಭಾನುವಾರ ಚಾಂಪಿಯನ್ಸ್ ಟ್ರೋಫಿ -2025 ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಟೀಮ್ ಇಂಡಿಯಾ ಚಾಂಪಿಯನ್ಸ್​ ಟ್ರೋಫಿ ಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿ ಮೂರನೇ ಬಾರಿಗೆ ಟ್ರೋಫಿಯನ್ನು ಗೆದ್ದು ಪಂದ್ಯಾವಳಿಯಲ್ಲಿ ಅತ್ಯಂತ ಯಶಸ್ವಿ ತಂಡವಾಯಿತು. ನಾಯಕನಾಗಿ ಇದು ರೋಹಿತ್ ಅವರ ಎರಡನೇ ಐಸಿಸಿ ಟ್ರೋಫಿಯಾಗಿದೆ. ಇದರೊಂದಿಗೆ, ಹಿಟ್​ಮ್ಯಾನ್ ಒಂದಕ್ಕಿಂತ ಹೆಚ್ಚು ಐಸಿಸಿ ಟ್ರೋಫಿಗಳನ್ನು ಗೆದ್ದ ಎರಡನೇ ಭಾರತೀಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರವಾಗುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಈ ಮೂಲಕ ಇನ್ನಷ್ಟು ದಿನ ಏಕದಿನ ಪಂದ್ಯಗಳನ್ನಾಡಲು ಸಮರ್ಥನಾಗಿದ್ದೇನೆ ಎಂಬ ಸಂದೇಶವನ್ನು ಸಹ ರೋಹಿತ್​ ರವಾನಿಸಿದ್ದಾರೆ.

ಎಂಟು ವರ್ಷಗಳ ಬಳಿಕ ಪುನರಾರಂಭಗೊಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಟೂರ್ನಿಯಲ್ಲಿ ಭಾರತ ತಂಡ ಅಜೇಯವಾಗಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ನಾಯಕ ರೋಹಿತ್ ಶರ್ಮ (76 ರನ್, 83 ಎಸೆತ, 7 ಬೌಂಡರಿ, 3 ಸಿಕ್ಸರ್) ಬಿರುಸಿನ ಆಟ ಹಾಗೂ ನಾಲ್ವರು ಸ್ಪಿನ್ನರ್‌ಗಳ ಬಿಗಿ ಬೌಲಿಂಗ್ ದಾಳಿಯ ನೆರವಿನಿಂದ ಭಾರತ ತಂಡ ಫೈನಲ್‌ನಲ್ಲಿ ನ್ಯೂಜಿಲೆಂಡ್ ಎದುರು 4 ವಿಕೆಟ್‌ಗಳ ರೋಚಕ ಗೆಲುವು ಒಲಿಸಿಕೊಂಡಿದೆ. ಇದರೊಂದಿಗೆ ರೋಹಿತ್ ಶರ್ಮ ಸಾರಥ್ಯದಲ್ಲಿ 12 ವರ್ಷಗಳ ಬಳಿಕ ಭಾರತ ತಂಡ ‘ಮಿನಿ ವಿಶ್ವಕಪ್’ ಗೆದ್ದುಕೊಂಡಿದೆ. ಒಟ್ಟಾರೆ ಮೂರನೇ ಬಾರಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ, ಈ ಸಾಧನೆ ಮಾಡಿದ ಮೊದಲ ತಂಡ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಮುಖ್ಯ ಕೋಚ್ ಗೌತಮ್ ಗಂಭೀರ್ ಹಾಗೂ ರೋಹಿತ್ ಶರ್ಮ ಕಾಂಬಿನೇಷನ್‌ನಲ್ಲಿ ಗೆದ್ದ ಮೊದಲ ಐಸಿಸಿ ಟೂರ್ನಿ ಇದಾಗಿದೆ.

ದುಬೈ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪ್ರಶಸ್ತಿ ಕಾದಾಟದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಭಾರತೀಯ ಸ್ಪಿನ್ನರ್‌ಗಳ ಕಡಿವಾಣದ ನಡುವೆ ಬ್ಯಾಟರ್ ಡೆರಿಲ್ ಮಿಚೆಲ್ (63 ರನ್, 101 ಎಸೆತ, 3 ಬೌಂಡರಿ) ಹಾಗೂ ಮಿಚೆಲ್ ಬ್ರೇಸ್‌ವೆಲ್ (53* ರನ್, 40 ಎಸೆತ, 3 ಬೌಂಡರಿ, 2 ಸಿಕ್ಸರ್) ಅರ್ಧಶತಕಗಳ ನೆರವಿನಿಂದ ನ್ಯೂಜಿಲೆಂಡ್ 7 ವಿಕೆಟ್‌ಗೆ 251 ರನ್‌ಗಳ ಪೈಪೋಟಿಯುತ ಮೊತ್ತ ಕಲೆಹಾಕಿತು. ಪ್ರತಿಯಾಗಿ ರೋಹಿತ್ ಶರ್ಮ ಹಾಗೂ ಶುಭಮಾನ್ ಗಿಲ್ (31) ಒದಗಿಸಿದ ಬಿರುಸಿನ ಆರಂಭದ ನಡುವೆಯೂ 17 ರನ್‌ಗಳ ಅಂತರದಲ್ಲಿ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆಗ ಶ್ರೇಯಸ್ ಅಯ್ಯರ್ (48 ರನ್, 62 ಎಸೆತ, 2 ಬೌಂಡರಿ, 2 ಸಿಕ್ಸರ್) ಹಾಗೂ ಆಲ್ರೌಂಡರ್ ಅಕ್ಷರ್ ಪಟೇಲ್ (29) ಚೇಸಿಂಗ್ ಜೀವಂತವಿಟ್ಟರು. ಕೊನೆಯಲ್ಲಿ ಕನ್ನಡಿಗ ಕೆಎಲ್ ರಾಹುಲ್ (34* ರನ್, 33 ಎಸೆತ, 1 ಬೌಂಡರಿ, 1 ಸಿಕ್ಸರ್) ಉಪಯುಕ್ತ ಆಟದ ನೆರವಿನಿಂದ 49 ಓವರ್‌ಗಳಲ್ಲಿ 6 ವಿಕೆಟ್‌ಗೆ 254 ಭಾರತಕ್ಕೆ ಗೆಲುವು ತಂದುಕೊಟ್ಟರು. ಕೊನೆಯವರೆಗೂ ಪಂದ್ಯದಲ್ಲಿ ಹೋರಾಡಿದ ನ್ಯೂಜಿಲೆಂಡ್ ರನ್ನರ್ ಅಪ್‌ಗೆ ಸಮಾಧಾನ ಕಂಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net