

ನವದೆಹಲಿ: ಗಾಯದಿಂದ ಚೇತರಿಸಿಕೊಂಡು ಟೀಮ್ ಇಂಡಿಯಾಗೆ ಮರಳಿರುವ ಸೀಮಿತ ಓವರ್ ತಂಡದ ಉಪನಾಯಕ ಹಾಗೂ ಸ್ಟಾರ್ ಬ್ಯಾಟ್ಸ್‌ಮನ್ ರೋಹಿತ್ ಶರ್ಮ ಅವರನ್ನು ಶುಕ್ರವಾರ ಭಾರತ ಟೆಸ್ಟ್ ತಂಡಕ್ಕೂ ಉಪನಾಯಕರನ್ನಾಗಿ ನೇಮಿಸಲಾಗಿದೆ. ಇದರೊಂದಿಗೆ ಗುರುವಾರದಿಂದ ಸಿಡ್ನಿಯಲ್ಲಿ ನಡೆಯಲಿರುವ 3ನೇ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮ ಕಣಕ್ಕಿಳಿಯುವುದು ಕೂಡ ಬಹುತೇಕ ಖಚಿತಗೊಂಡಿದೆ. ಕಳೆದ ಕೆಲ ವರ್ಷಗಳಿಂದ ಏಕದಿನ, ಟಿ20 ತಂಡಗಳ ಉಪನಾಯಕರಾಗಿರುವ ರೋಹಿತ್, ಟೆಸ್ಟ್ ಕ್ರಿಕೆಟ್ ತಂಡದಲ್ಲಿ ಮೊದಲ ಬಾರಿಗೆ ಈ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಮೊದಲ ಟೆಸ್ಟ್ ಮುಕ್ತಾಯಗೊಂಡ ಬಳಿಕ ನಾಯಕ ವಿರಾಟ್ ಕೊಹ್ಲಿ ಪಿತೃತ್ವ ರಜೆ ಮೇಲೆ ಭಾರತಕ್ಕೆ ವಾಪಸಾದ ಹಿನ್ನೆಲೆಯಲ್ಲಿ ಅಜಿಂಕ್ಯ ರಹಾನೆ ತಂಡವನ್ನು ಮುನ್ನಡೆಸುತ್ತಿದ್ದಾರೆ.
ರೋಹಿತ್ ಶರ್ಮ ಆಡಲು ಸಂಪೂರ್ಣ ಫಿಟ್ ಆಗಿ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡರೆ ಅವರನ್ನೇ ಉಪನಾಯಕನಾಗಿ ಮಾಡಲು ತಂಡದ ಆಡಳಿತ ಮಂಡಳಿ ಈ ಮೊದಲೇ ನಿರ್ಧರಿಸಿತ್ತು ಎನ್ನಲಾಗಿದೆ. ಕೊಹ್ಲಿ ಅನುಪಸ್ಥಿತಿಯಲ್ಲಿ ಅಜಿಂಕ್ಯ ರಹಾನೆ ತಂಡ ಮುನ್ನಡೆಸಿದರೆ, ಉಪನಾಯಕ ಯಾರಾಗಬಹುದು ಎಂದು ಚರ್ಚೆಗೆ ಗ್ರಾಸವಾಗಿತ್ತು. ರೋಹಿತ್ ಆಗಮನದವರೆಗೂ ಪೂಜಾರಗೆ ಈ ಪಟ್ಟ ಕಟ್ಟಲು ಆಡಳಿತ ಮಂಡಳಿ ನಿರ್ಧರಿಸಿತ್ತು ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮುಂಬೈ ಇಂಡಿಯನ್ಸ್ ನಾಯಕರಾಗಿ 5 ಬಾರಿ ಐಪಿಎಲ್ ಪ್ರಶಸ್ತಿ ಗೆದ್ದ ದಾಖಲೆ ಹೊಂದಿರುವ ರೋಹಿತ್ ಶರ್ಮ, ಕೊಹ್ಲಿ ಅನುಪಸ್ಥಿತಿಯಲ್ಲಿ ಈಗಾಗಲೆ ಹಲವು ಏಕದಿನ, ಟಿ20 ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ತಂಡದ ನಾಯಕತ್ವ ಗುಂಪಿನಲ್ಲಿ ರೋಹಿತ್ ಕೂಡ ಪ್ರಮುಖರು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ. ಭಾರತದಿಂದ ತೆರಳಿದ ಬಳಿಕ ಸಿಡ್ನಿಯಲ್ಲಿ 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಕಳೆದ ರೋಹಿತ್, ಬುಧವಾರವಷ್ಟೇ ಮೆಲ್ಬೋರ್ನ್‌ನಲ್ಲಿ ತಂಡ ಕೂಡಿಕೊಂಡರು. ಗುರುವಾರ-ಶುಕ್ರವಾರ ಅಭ್ಯಾಸವನ್ನೂ ನಡೆಸಿ ಸಿಡ್ನಿ ಟೆಸ್ಟ್‌ಗೆ ಸಿದ್ಧತೆ ಆರಂಭಿಸಿದ್ದಾರೆ.
33 ವರ್ಷದ ರೋಹಿತ್ ಇದುವರೆಗೆ 32 ಟೆಸ್ಟ್ ಪಂದ್ಯಗಳನ್ನಾಡಿದ್ದು, ಸರಾಸರಿ 46ರಂತೆ 2,141 ರನ್ ಕಲೆಹಾಕಿದ್ದಾರೆ. ಜತೆಗೆ 6 ಶತಕ ಸಿಡಿಸಿದ್ದು, 2019ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 212 ರನ್ ಗಳಿಸಿರುವುದು ಗರಿಷ್ಠ ಮೊತ್ತವಾಗಿದೆ. ಭಾರತ ತಂಡ ಜನವರಿ 5ರಂದು ಮೆಲ್ಬೋರ್ನ್‌ನಿಂದ ಸಿಡ್ನಿಗೆ ಪ್ರಯಾಣ ಬೆಳೆಸಲಿದೆ. 4 ಪಂದ್ಯಗಳ ಟೆಸ್ಟ್ ಸರಣಿಯ 2 ಪಂದ್ಯಗಳ ಅಂತ್ಯಕ್ಕೆ ಭಾರತ ಹಾಗೂ ಆಸ್ಟ್ರೇಲಿಯಾ 1-1 ರಿಂದ ಸಮಬಲ ಸಾಧಿಸಿವೆ. ಜನವರಿ 15 ರಿಂದ ಬ್ರಿಸ್ಬೇನ್‌ನಲ್ಲಿ 4ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ನಡೆಯಲಿದೆ.
*3 ಟೆಸ್ಟ್‌ಗೆ 3 ಉಪನಾಯಕ!
ರೋಹಿತ್‌ಗೆ ಉಪನಾಯಕತ್ವ ವಹಿಸುವುದರೊಂದಿಗೆ ಹಾಲಿ ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೊದಲ 3 ಟೆಸ್ಟ್‌ಗಳಲ್ಲಿ ಭಾರತ ತಂಡ ಪ್ರತ್ಯೇಕ ಮೂವರು ಆಟಗಾರರನ್ನು ಉಪನಾಯಕರನ್ನಾಗಿ ಆಡಿಸಿದಂತಾಗುತ್ತದೆ. ಅಡಿಲೇಡ್‌ನಲ್ಲಿ ನಡೆದ ಅಹರ್ನಿಶಿ ಪಂದ್ಯಕ್ಕೆ ಅಜಿಂಕ್ಯ ರಹಾನೆ, ಮೆಲ್ಬೋರ್ನ್‌ನಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್‌ಗೆ ಚೇತೇಶ್ವರ ಪೂಜಾರ ಉಪನಾಯಕನಾಗಿದ್ದರು.
*ಮತ್ತೆ ಮುಂಬೈ ಪ್ರಾಬಲ್ಯ
ಸುದೀರ್ಘ ಸಮಯದ ಬಳಿಕ ಟೀಮ್ ಇಂಡಿಯಾದಲ್ಲಿ ಮುಂಬೈ ಪ್ರಾಬಲ್ಯ ಮರಳಿದೆ. ಈಗಾಗಲೆ ನಾಯಕ (ಅಜಿಂಕ್ಯ ರಹಾನೆ) ಮತ್ತು ಮುಖ್ಯ ಕೋಚ್ (ರವಿಶಾಸಿ) ಮುಂಬೈನವರೇ ಆಗಿದ್ದರೆ, ಇದೀಗ ಉಪನಾಯಕ ಕೂಡ ಮುಂಬೈನವರೇ ಆಗಿದ್ದಾರೆ. ವೇಗಿ ಶಾರ್ದೂಲ್ ಠಾಕೂರ್ ಸಿಡ್ನಿಯಲ್ಲಿ ಆಡಿದರೆ, ಭಾರತ ಪರ ಮೂವರು ಮುಂಬೈ ಆಟಗಾರರು ಕಣಕ್ಕಿಳಿದಂತಾಗುತ್ತದೆ.
*ಖಾತರಿಯಾಗದ ಆರಂಭಿಕ ಸ್ಥಾನ..!
ಇದೀಗ ರೋಹಿತ್ ಶರ್ಮ ಉಪನಾಯಕನಾಗಿ ಆಯ್ಕೆಯಾಗಿರುವುದರಿಂದ ಸಿಡ್ನಿ ಟೆಸ್ಟ್‌ನಲ್ಲಿ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಆದರೆ, ಇನಿಂಗ್ಸ್ ಆರಂಭಿಸುವರೇ ಅಥವಾ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಯುವುದರ ಬಗ್ಗೆ ಇನ್ನು ಖಾತ್ರಿಯಾಗಿಲ್ಲ. ಒಂದು ವೇಳೆ ಇನಿಂಗ್ಸ್ ಆರಂಭಿಸಿದರೆ ಕನ್ನಡಿಗ ಮಯಾಂಕ್ ಅಗರ್ವಾಲ್ ಅಥವಾ ಮಧ್ಯಮ ಕ್ರಮಾಂಕದಲ್ಲಿ ಆಡಿದರೆ ಹನುಮ ವಿಹಾರಿ ಹೊರಗುಳಿಯಬೇಕಾಗುತ್ತದೆ. ಗುರುವಾರದಿಂದ ರೋಹಿತ್ ಶರ್ಮ ಅಭ್ಯಾಸ ಆರಂಭಿಸಿದ್ದಾರೆ. ಹೊಸ ವರ್ಷಾಚರಣೆಗೆ ಬಿಡುವಿನಲ್ಲಿರುವ ಟೀಮ್ ಇಂಡಿಯಾ ಶನಿವಾರದಿಂದ ಅಭ್ಯಾಸ ಆರಂಭಿಸಲಿದೆ.
*ಬದಲಾವಣೆಗೆ ಮಿಶ್ರ ಪ್ರತಿಕ್ರಿಯೆ
ರೋಹಿತ್ ತಂಡ ಕೂಡಿಕೊಂಡ 48 ಗಂಟೆಗಳಲ್ಲೇ ಉಪನಾಯಕತ್ವವನ್ನೂ ವಹಿಸಿರುವ ಟೀಮ್ ಮ್ಯಾನೇಜ್‌ಮೆಂಟ್ ನಡೆಗೆ ಕ್ರಿಕೆಟ್ ಪ್ರೇಮಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಅರ್ಹವಾಗಿಯೇ ಜವಾಬ್ದಾರಿ ವಹಿಸಲಾಗಿದೆ ಎಂದಿದ್ದರೆ, ಇನ್ನು ಕೆಲವರು ಈ ಬದಲಾವಣೆ ಬೇಕಿತ್ತಾ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದಾರೆ. ರೋಹಿತ್ ನಾಯಕತ್ವ ಅನುಭವ ತಂಡಕ್ಕೆ ಲಾಭ ತರಲಿದೆ ಎಂದು ಕೆಲವರು ಹೇಳಿದ್ದರೆ, ಮತ್ತೆ ಕೆಲವರು, ವಿದೇಶಿ ಟೆಸ್ಟ್‌ಗಳಲ್ಲಿ ಇನ್ನೂ ಸಾಮರ್ಥ್ಯ ನಿರೂಪಿಸದಿರುವ ರೋಹಿತ್‌ಗೆ ಪಟ್ಟ ನೀಡುವಲ್ಲಿ ಮುಂಬೈ ಲಾಬಿ ಕೆಲಸ ಮಾಡಿದೆ ಎಂದು ದೂರಿದ್ದಾರೆ. ಟೆಸ್ಟ್ ತಂಡದ ಹಿರಿಯ ಆಟಗಾರರಾದ ಪೂಜಾರ, ಆರ್. ಅಶ್ವಿನ್‌ರನ್ನು ಕಡೆಗಣಿಸಿದ್ದಕ್ಕೆ ಕಿಡಿಕಾರಿದ್ದಾರೆ.