

ಧರ್ಮಶಾಲಾ: ರೋಹಿತ್ ಶರ್ಮ ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ 5ನೇ ಹಾಗೂ ಕೊನೇ ಟೆಸ್ಟ್ನಲ್ಲಿ ಶತಕ ಸಿಡಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಭಾರತದ ಪರ 3ನೇ ಸರ್ವಾಧಿಕ 48 ಶತಕ ಸಿಡಿಸಿದ ರಾಹುಲ್ ದ್ರಾವಿಡ್ ಸಾಧನೆಯನ್ನು ಸರಿಗಟ್ಟಿದರು.
ಸಚಿನ್ ತೆಂಡುಲ್ಕರ್ (100) ಮತ್ತು ವಿರಾಟ್ ಕೊಹ್ಲಿ (80) ಮೊದಲೆರಡು ಸ್ಥಾನದಲ್ಲಿದ್ದಾರೆ. ಟೀಮ್ ಇಂಡಿಯಾದ ಹಾಲಿ ಮುಖ್ಯ ಕೋಚ್ ದ್ರಾವಿಡ್ ಟೆಸ್ಟ್ನಲ್ಲಿ 36, ಏಕದಿನದಲ್ಲಿ 12 ಶತಕ ಸಿಡಿಸಿದ್ದರೆ, ರೋಹಿತ್ ಟೆಸ್ಟ್ನಲ್ಲಿ 12, ಏಕದಿನದಲ್ಲಿ 31 ಮತ್ತು ಟಿ20ಯಲ್ಲಿ 5 ಶತಕ ಸಿಡಿಸಿದ್ದಾರೆ.
ಇನ್ನು 36 ವರ್ಷದ ರೋಹಿತ್ ಶರ್ಮ 30ನೇ ವಯಸ್ಸಿನ ಬಳಿಕ ಭಾರತ ಪರ ಸರ್ವಾಧಿಕ 35 ಶತಕ ಸಿಡಿಸಿದ ಸಚಿನ್ ತೆಂಡುಲ್ಕರ್ ದಾಖಲೆ ಸರಿಗಟ್ಟಿದರು. ದ್ರಾವಿಡ್ 26 ಶತಕ ಸಿಡಿಸಿರುವುದು ನಂತರದ ಗರಿಷ್ಠ. ಕುಮಾರ ಸಂಗಕ್ಕರ 30ರ ನಂತರ 43 ಶತಕ ಸಿಡಿಸಿರುವುದು ವಿಶ್ವದಾಖಲೆಯಾಗಿದೆ.