ಮುಂಬೈನಲ್ಲಿ ರೋಹಿತ್​ ರಿಟೇನ್​? ಹಾರ್ದಿಕ್​, ಬುಮ್ರಾ, ಸೂರ್ಯಕುಮಾರ್​ ಉಳಿಸಿಕೊಳ್ಳುವ ನಿರೀಕ್ಷೆ

web mum
Published on

ಮುಂಬೈ: ಕಳೆದ ವರ್ಷ ನಾಯಕತ್ವದಿಂದ ತೆಗೆದುಹಾಕಿದ ಬಳಿಕ ರೋಹಿತ್​ ಶರ್ಮ ಅಸಮಾಧಾನಗೊಂಡಿದ್ದಾರೆ ಎಂಬ ವರದಿಗಳ ನಡುವೆ ಅವರು ಮುಂಬೈ ಇಂಡಿಯನ್ಸ್​ ತಂಡದಲ್ಲೇ ರಿಟೇನ್​ ಆಗುವ ಸಾಧ್ಯತೆ ಹೆಚ್ಚಾಗಿದೆ. ಅವರೊಂದಿಗೆ ಹಾರ್ದಿಕ್​ ಪಾಂಡ್ಯ, ಜಸ್​ಪ್ರೀತ್​ ಬುಮ್ರಾ ಮತ್ತು ಸೂರ್ಯಕುಮಾರ್​ ಯಾದವ್​ ಕೂಡ ಮುಂಬೈನಲ್ಲೇ ಉಳಿದುಕೊಳ್ಳಲಿದ್ದಾರೆ ಎನ್ನಲಾಗಿದೆ.

ಈ ನಾಲ್ವರು ಆಟಗಾರರ ರಿಟೇನ್​ಗೆ ಮುಂಬೈ ತಂಡ ಎಷ್ಟು ಸಂಭಾವನೆ ನೀಡಲಿದೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ ನಾಲ್ವರು ಆಟಗಾರರನ್ನು ಉಳಿಸಿಕೊಂಡರೆ ಮುಂಬೈ ತಂಡ ಒಟ್ಟು 120 ಕೋಟಿ ರೂ. ಬಜೆಟ್​ ಪೈಕಿ 61 ಕೋಟಿ ರೂ. ಮೊತ್ತವನ್ನು ಹಂಚಿಕೆ ಮಾಡಬಹುದಾಗಿದೆ. ನಂತರ ವಿಕೆಟ್​ ಕೀಪರ್​&ಬ್ಯಾಟರ್​ ಇಶಾನ್​ ಕಿಶನ್​ ಮತ್ತು ಆಸ್ಟ್ರೆಲಿಯಾದ ಟಿಮ್​ ಡೇವಿಡ್​ರನ್ನು ಹರಾಜಿನಲ್ಲಿ ರೈಟ್​ ಟು ಮ್ಯಾಚ್​ ಮೂಲಕ ಉಳಿಸಿಕೊಳ್ಳಲಿದೆ ಎನ್ನಲಾಗಿದೆ.

ಬಿಸಿಸಿಐ 5 ಆಟಗಾರರ ರಿಟೇನ್​ಗೆ ಕ್ರಮವಾಗಿ 18,14, 11, 18, 14 ಕೋಟಿ ರೂ. ಅಂದರೆ ಒಟ್ಟು 75 ಕೋಟಿ ರೂ. ವ್ಯಯಿಸಬೇಕು ಎಂದಿದೆ. ಜತೆಗೆ 3 ಆಟಗಾರರ ರಿಟೇನ್​ಗೆ ಒಟ್ಟು 43 ಕೋಟಿ ರೂ. ಮತ್ತು 4 ಆಟಗಾರರ ರಿಟೇನ್​ಗೆ 61 ಕೋಟಿ ರೂ. ವ್ಯಯಿಸಬೇಕಿದ್ದು, ಇದನ್ನು ಆಟಗಾರರಿಗೆ ಹೇಗೆ ಬೇಕಾದರೂ ಹಂಚಿಕೆ ಮಾಡಬಹುದು ಎನ್ನಲಾಗಿದೆ.

ರಾಜಸ್ಥಾನ ರಾಯಲ್ಸ್​ ತಂಡ ಸಂಜು ಸ್ಯಾಮ್ಸನ್​, ಯಶಸ್ವಿ ಜೈಸ್ವಾಲ್​ ಮತ್ತು ರಿಯಾನ್​ ಪರಾಗ್​ ರಿಟೇನ್​ ಮಾಡಿಕೊಳ್ಳಲು ಬಯಸಿದೆ. ಲಖನೌ ಸೂಪರ್​ಜೈಂಟ್ಸ್​ ತಂಡ ಆಯುಷ್​ ಬಡೋನಿ, ಮೊಹ್ಸಿನ್​ ಖಾನ್​ ಮತ್ತು ನಿಕೋಲಸ್​ ಪೂರನ್​ ರಿಟೇನ್​ಗೆ ನಿರ್ಧರಿಸಿದೆ. ಆದರೆ ಕನ್ನಡಿಗ ಕೆಎಲ್​ ರಾಹುಲ್​ ರಿಟೇನ್​ ಬಗ್ಗೆ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ ಎನ್ನಲಾಗಿದೆ. ಪಂಜಾಬ್​ ಕಿಂಗ್ಸ್​ ತಂಡ ಅರ್ಷದೀಪ್​ ಸಿಂಗ್​, ಶಶಾಂಕ್​ ಸಿಂಗ್​ ಮತ್ತು ಆಶುತೋಷ್​ ಶರ್ಮ ರಿಟೇನ್​ ಮಾಡಿಕೊಳ್ಳಲು ಬಯಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net