

ದುಬೈ: ಎಂಟು ವರ್ಷಗಳ ಬಳಿಕ ಪುನರಾರಂಭಗೊಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಟೂರ್ನಿಯಲ್ಲಿ ಭಾರತ ತಂಡ ಅಜೇಯವಾಗಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ನಾಯಕ ರೋಹಿತ್ ಶರ್ಮ (76 ರನ್, 83 ಎಸೆತ, 7 ಬೌಂಡರಿ, 3 ಸಿಕ್ಸರ್) ಬಿರುಸಿನ ಆಟ ಹಾಗೂ ನಾಲ್ವರು ಸ್ಪಿನ್ನರ್‌ಗಳ ಬಿಗಿ ಬೌಲಿಂಗ್ ದಾಳಿಯ ನೆರವಿನಿಂದ ಭಾರತ ತಂಡ ೈನಲ್‌ನಲ್ಲಿ ನ್ಯೂಜಿಲೆಂಡ್ ಎದುರು 4 ವಿಕೆಟ್‌ಗಳ ರೋಚಕ ಗೆಲುವು ಒಲಿಸಿಕೊಂಡಿದೆ. ಇದರೊಂದಿಗೆ ರೋಹಿತ್ ಶರ್ಮ ಸಾರಥ್ಯದಲ್ಲಿ 12 ವರ್ಷಗಳ ಬಳಿಕ ಭಾರತ ತಂಡ ‘ಮಿನಿ ವಿಶ್ವಕಪ್’ ಗೆದ್ದುಕೊಂಡಿದೆ. ಒಟ್ಟಾರೆ ಮೂರನೇ ಬಾರಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ, ಈ ಸಾಧನೆ ಮಾಡಿದ ಮೊದಲ ತಂಡ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಮುಖ್ಯ ಕೋಚ್ ಗೌತಮ್ ಗಂಭೀರ್ ಹಾಗೂ ರೋಹಿತ್ ಶರ್ಮ ಕಾಂಬಿನೇಷನ್‌ನಲ್ಲಿ ಗೆದ್ದ ಮೊದಲ ಐಸಿಸಿ ಟೂರ್ನಿ ಇದಾಗಿದೆ.
ದುಬೈ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪ್ರಶಸ್ತಿ ಕಾದಾಟದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಭಾರತೀಯ ಸ್ಪಿನ್ನರ್‌ಗಳ ಕಡಿವಾಣದ ನಡುವೆ ಬ್ಯಾಟರ್ ಡೆರಿಲ್ ಮಿಚೆಲ್ (63 ರನ್, 101 ಎಸೆತ, 3 ಬೌಂಡರಿ) ಹಾಗೂ ಮಿಚೆಲ್ ಬ್ರೇಸ್‌ವೆಲ್ (53* ರನ್, 40 ಎಸೆತ, 3 ಬೌಂಡರಿ, 2 ಸಿಕ್ಸರ್) ಅರ್ಧಶತಕಗಳ ನೆರವಿನಿಂದ ನ್ಯೂಜಿಲೆಂಡ್ 7 ವಿಕೆಟ್‌ಗೆ 251 ರನ್‌ಗಳ ಪೈಪೋಟಿಯುತ ಮೊತ್ತ ಕಲೆಹಾಕಿತು.
ಪ್ರತಿಯಾಗಿ ರೋಹಿತ್ ಶರ್ಮ ಹಾಗೂ ಶುಭಮಾನ್ ಗಿಲ್ (31) ಒದಗಿಸಿದ ಬಿರುಸಿನ ಆರಂಭದ ನಡುವೆಯೂ 17 ರನ್‌ಗಳ ಅಂತರದಲ್ಲಿ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆಗ ಶ್ರೇಯಸ್ ಅಯ್ಯರ್ (48 ರನ್, 62 ಎಸೆತ, 2 ಬೌಂಡರಿ, 2 ಸಿಕ್ಸರ್) ಹಾಗೂ ಆಲ್ರೌಂಡರ್ ಅಕ್ಷರ್ ಪಟೇಲ್ (29) ಚೇಸಿಂಗ್ ಜೀವಂತವಿಟ್ಟರು. ಕೊನೆಯಲ್ಲಿ ಕನ್ನಡಿಗ ಕೆಎಲ್ ರಾಹುಲ್ (34* ರನ್, 33 ಎಸೆತ, 1 ಬೌಂಡರಿ, 1 ಸಿಕ್ಸರ್) ಉಪಯುಕ್ತ ಆಟದ ನೆರವಿನಿಂದ 49 ಓವರ್‌ಗಳಲ್ಲಿ 6 ವಿಕೆಟ್‌ಗೆ 254 ಭಾರತಕ್ಕೆ ಗೆಲುವು ತಂದುಕೊಟ್ಟರು. ಕೊನೆಯವರೆಗೂ ಪಂದ್ಯದಲ್ಲಿ ಹೋರಾಡಿದ ನ್ಯೂಜಿಲೆಂಡ್ ರನ್ನರ್ ಅಪ್‌ಗೆ ಸಮಾಧಾನ ಕಂಡಿದೆ.
ರೋ-ಹಿಟ್!
ಚೇಸಿಂಗ್‌ನಲ್ಲಿ ಕಿವೀಸ್ ಬೌಲರ್‌ಗಳ ಬೆಂಡೆತ್ತಿದ ರೋಹಿತ್ ಶರ್ಮ ಭಾರತಕ್ಕೆ ಭರ್ಜರಿ ಆರಂಭ ಒದಗಿಸಿದರು. ರೋಹಿತ್ ಹಾಗೂ ಶುಭಮಾನ್ ಮೊದಲ ವಿಕೆಟ್‌ಗೆ 112 ಎಸೆತಗಳಲ್ಲಿ 105 ರನ್ ಕಸಿದರು. ಅಬ್ಬರದ ಬ್ಯಾಟಿಂಗ್ ನಡೆಸಿದ ರೋಹಿತ್ ಕಿವೀಸ್ ವೇಗಿಗಳನ್ನು ತಬ್ಬಿಬ್ಬುಗೊಳಿಸಿದರು. ರೋಹಿತ್ ನಿರ್ಭೀತಿಯ ಆಟಕ್ಕೆ ಶುಭಮಾನ್ ತಾಳ್ಮೆಯ ಆಟದೊಂದಿಗೆ ಸೂಕ್ತ ಬೆಂಬಲ ಒದಗಿಸಿತು. 10 ಓವರ್‌ಗಳಲ್ಲಿ ಭಾರತ 60 ರನ್‌ಗಳಿಸಿದರೆ, ರೋಹಿತ್ 41 ಎಸೆತಗಳಲ್ಲಿ 58ನೇ ಏಕದಿನ ಅರ್ಧಶತಕ ಬಾರಿಸಿದರು. ನಂತರ ಕಿವೀಸ್ ಸ್ಪಿನ್ನರ್‌ಗಳಿ ತಿರುಗೇಟು ನೀಡುವ ಮೂಲಕ ಪಂದ್ಯಕ್ಕೆ ತಿರುವು ನೀಡಿದರು.19ನೇ ಓವರ್‌ನಲ್ಲಿ ಗ್ಲೆನ್ ಫಿಲಿಪ್ಸ್ ಪಡೆದ ಅದ್ಭುತ ಕ್ಯಾಚ್‌ಗೆ ಗಿಲ್ ಔಟಾದರು, ಮರು ಓವರ್‌ನಲ್ಲಿ ವಿರಾಟ್ ಕೊಹ್ಲಿ (1) ಎಲ್‌ಬಿ ಆಗಿ ಪೆವಿಲಿಯನ್ ಸೇರಿದರು. ಇದರೊಂದಿಗೆ ಭಾರತದ ಚೇಸಿಂಗ್ ನಿಧಾನಗೊಂಡಿತು. 27ನೇ ಓವರ್‌ನಲ್ಲಿ ರಚಿನ್ ರವೀಂದ್ರ ಎಸೆತದಲ್ಲಿ ಮುನ್ನುಗ್ಗಿ ಬಾರಿಸಲು ಹೋಗಿ ಸ್ಟಂಪ್ ಆದರು. ಇದು ಭಾರತ ಪಾಳಯದಲ್ಲಿ ಆತಂಕ ಮೂಡಿಸಿತು.
ಭಾರತ ಸಂಘಟಿತ ಬ್ಯಾಟಿಂಗ್
ಕಿವೀಸ್ ಸ್ಪಿನ್ನರ್‌ಗಳು ಭಾರತದ ಗೆಲುವನ್ನು ವಿಳಂಬಗೊಳಿಸಿದರು. ಆಗ ಶ್ರೇಯಸ್ ಅಯ್ಯರ್ ಹಾಗೂ ಅಕ್ಷರ್ ಪಟೇಲ್ ಸಮಯೋಚಿತ ಜತೆಯಾಟ ಚೇಸಿಂಗ್‌ಗೆ ಬಲ ತುಂಬಿದರು. ಇವರಿಬ್ಬರು 4ನೇ ವಿಕೆಟ್‌ಗೆ 75 ಎಸೆತಗಳಲ್ಲಿ 61 ರನ್ ಸೇರಿಸಿದರು. 72 ಎಸೆತಗಳಲ್ಲಿ 69 ರನ್ ಬೇಕಿದ್ದಾಗ ಶ್ರೇಯಸ್ ವಿಕೆಟ್ ಪಡೆದ ಸ್ಯಾಂಟ್ನರ್ ಕಿವೀಸ್ ಹೋರಾಟ ಜೀವಂತವಿರಿಸಿದರು. ನಂತರ ಅಕ್ಷರ್ ಪಟೇಲ್ ಹಾಗೂ ರಾಹುಲ್ 17 ಎಸೆತಗಳಲ್ಲಿ 20 ರನ್‌ಗಳಿಸಿದರು. ಅಕ್ಷರ್ ಪಟೇಲ್ ಔಟಾದ ಬಳಿಕ ಜತೆಗೂಡಿದ ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯ ಭಾರತವನ್ನು ಪ್ರಶಸ್ತಿ ಸನಿಹ ಕೊಂಡೊಯ್ಯದರು. ಇವರಿಬ್ಬರು 6ನೇ ವಿಕೆಟ್‌ಗೆ 36 ಎಸೆತಗಳಲ್ಲಿ 38 ರನ್ ಕಸಿದರು. 2 ರನ್ ಬೇಕಿದ್ದಾಗ ಬೌಂಡರಿ ಸಿಡಿಸಿದ ರವೀಂದ್ರ ಜಡೇಜಾ (9*) ಗೆಲುವು ಸಾರಿದರು.