

ಮೆಲ್ಬೋರ್ನ್: ಸಿಡ್ನಿಯಲ್ಲಿ 14 ದಿನಗಳ ಕ್ವಾರಂಟೈನ್ ಮುಗಿಸಿ ಮೆಲ್ಬೋರ್ನ್‌ನಲ್ಲಿ ಭಾರತ ತಂಡವನ್ನು ಕೂಡಿಕೊಂಡಿರುವ ಸ್ಟಾರ್ ಬ್ಯಾಟ್ಸ್‌ಮನ್ ರೋಹಿತ್ ಶರ್ಮ ಗುರುವಾರ ಎಂಸಿಜಿ ಮೈದಾನದಲ್ಲಿ ಅಭ್ಯಾಸ ಆರಂಭಿಸಿದರು.
ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಮೇಲ್ವಿಚಾರಣೆಯಲ್ಲಿ ಅವರು ಮೊದಲ ಅಭ್ಯಾಸ ಅವಧಿಯಲ್ಲಿ ಪಾಲ್ಗೊಂಡರು. ಜನವರಿ 7ರಿಂದ ಸಿಡ್ನಿಯಲ್ಲಿ ನಡೆಯಲಿರುವ 3ನೇ ಟೆಸ್ಟ್ ಪಂದ್ಯದಲ್ಲಿ ಅವರು ಕಣಕ್ಕಿಳಿಯುವ ನಿರೀಕ್ಷೆ ಇಡಲಾಗಿದೆ.
ರೋಹಿತ್ ಕ್ಯಾಚಿಂಗ್ ಅಭ್ಯಾಸ ನಡೆಸುತ್ತಿರುವ 2 ಚಿತ್ರಗಳನ್ನು ಬಿಸಿಸಿಐ ಟ್ವಿಟರ್‌ನಲ್ಲಿ ಪ್ರಕಟಿಸಿದ್ದು, ‘ಇಂಜಿನ್ ಈಗಷ್ಟೇ ಆರಂಭಗೊಂಡಿದೆ. ಮುಂದೇನು ಎದುರಾಗಲಿದೆ ಎಂಬುದರ ಕಿರು ಚಿತ್ರಣ ಇಲ್ಲಿದೆ’ ಎಂದು ಬರೆದುಕೊಂಡಿದೆ. ಭಾರತ ತಂಡದ ಇತರ ಆಟಗಾರರು ಗುರುವಾರ ವಿಶ್ರಾಂತಿಗೆ ಮೊರೆ ಹೋಗಿದ್ದರು.
ಕನ್ನಡಿಗ ರಾಘವೇಂದ್ರ ಸಹಿತ ಮೂವರು ಥ್ರೋಡೌನ್ ತಜ್ಞರು ರೋಹಿತ್ ಬ್ಯಾಟಿಂಗ್ ಅಭ್ಯಾಸಕ್ಕೆ ನೆರವಾದರು. ಫಿಟ್ನೆಸ್ ಸಮಸ್ಯೆಯಿಂದಾಗಿ ರೋಹಿತ್ ಐಪಿಎಲ್ ಫೈನಲ್ ಬಳಿಕ ಯಾವುದೇ ಪಂದ್ಯವಾಡಿಲ್ಲ. 3ನೇ ಟೆಸ್ಟ್‌ಗೆ ಮುನ್ನ ಅವರು ಫಿಟ್ನೆಸ್ ಪರೀಕ್ಷೆ ಎದುರಿಸುವ ನಿರೀಕ್ಷೆ ಇದೆ.