ಆಸೀಸ್ ವಿರುದ್ಧ ಅಭ್ಯಾಸ ಪಂದ್ಯದಲ್ಲೂ ಜಯ, ಟಿ20 ವಿಶ್ವಕಪ್‌ಗೆ ಭಾರತ ಭರ್ಜರಿ ಸಿದ್ಧತೆ

ind vs aus web
Published on

ದುಬೈ: ಹಂಗಾಮಿ ನಾಯಕ ರೋಹಿತ್ ಶರ್ಮ (60*ರನ್, 41 ಎಸೆತ, 5 ಬೌಂಡರಿ, 3 ಸಿಕ್ಸರ್) ಭರ್ಜರಿ ಬ್ಯಾಟಿಂಗ್ ನಿರ್ವಹಣೆಯೊಂದಿಗೆ ಭಾರತ ತಂಡ ಸತತ 2ನೇ ಅಭ್ಯಾಸದಲ್ಲೂ ಸುಲಭ ಗೆಲುವು ದಾಖಲಿಸಿ ಟಿ20 ವಿಶ್ವಕಪ್‌ಗೆ ಭರ್ಜರಿ ಸಿದ್ಧತೆ ನಡೆಸಿದೆ. ಆಸ್ಟ್ರೇಲಿಯಾ ವಿರುದ್ಧ ಬುಧವಾರ ನಡೆದ 2ನೇ ಹಾಗೂ ಅಂತಿಮ ಅಭ್ಯಾಸ ಪಂದ್ಯದಲ್ಲಿ ಟೀಮ್ ಇಂಡಿಯಾ 8 ವಿಕೆಟ್‌ಗಳಿಂದ ಜಯಿಸಿತು. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಗೆದ್ದಿದ್ದ ಭಾರತ ತಂಡ, ಅಕ್ಟೋಬರ್ 24ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸುವ ಮೂಲಕ ಟೂರ್ನಿಯ ಸೂಪರ್-12 ಹಂತದಲ್ಲಿ ಅಭಿಯಾನ ಆರಂಭಿಸಲಿದೆ.

ಐಸಿಸಿ ಅಕಾಡೆಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಆಸೀಸ್, 5 ವಿಕೆಟ್‌ಗೆ 152 ರನ್ ಪೇರಿಸಿತು. ಪ್ರತಿಯಾಗಿ ಭಾರತ ತಂಡ 17.5 ಓವರ್‌ಗಳಲ್ಲಿ 2 ವಿಕೆಟ್‌ಗೆ 153 ರನ್ ಗಳಿಸಿ ಜಯಿಸಿತು.

ಲಯ ಕಂಡುಕೊಂಡ ಹಿಟ್‌ಮ್ಯಾನ್
ರೋಹಿತ್ ಶರ್ಮ ಮೊದಲ ವಿಕೆಟ್‌ಗೆ ಕೆಎಲ್ ರಾಹುಲ್ (39) ಜತೆ 68 ರನ್ ಸೇರಿಸುವ ಮೂಲಕ ಸ್ಪರ್ಧಾತ್ಮಕ ಮೊತ್ತದ ಚೇಸಿಂಗ್‌ಗೆ ಭದ್ರ ಬುನಾದಿ ಹಾಕಿಕೊಟ್ಟರು. ಅಗರ್ ಎಸೆತದಲ್ಲಿ ರಾಹುಲ್ ಔಟಾದ ಬಳಿಕ ಸೂರ್ಯಕುಮಾರ್ (38*) ಜತೆ 2ನೇ ವಿಕೆಟ್‌ಗೆ ಅರ್ಧಶತಕದ ಜತೆಯಾಟವಾಡಿದರು. ಜಯದಿಂದ 26 ರನ್ ದೂರವಿದ್ದಾಗ ರೋಹಿತ್ ಇತರರಿಗೂ ಬ್ಯಾಟಿಂಗ್ ಅಭ್ಯಾಸಕ್ಕೆ ಅನುಕೂಲ ಮಾಡಿಕೊಡುವ ಸಲುವಾಗಿ ಸ್ವಯಂ ನಿವೃತ್ತಿ ಹೊಂದಿದರು. ಬಳಿಕ ಸೂರ್ಯ ಜತೆಗೂಡಿ ಹಾರ್ದಿಕ್ ಪಾಂಡ್ಯ (14*) 13 ಎಸೆತ ಬಾಕಿ ಇರುವಂತೆಯೇ ಗೆಲುವು ತಂದರು. ಕೊನೇ 3 ಓವರ್‌ಗಳಲ್ಲಿ 14 ರನ್ ಬೇಕಿದ್ದಾಗ ಹಾರ್ದಿಕ್, ಕೇನ್ ರಿಚರ್ಡ್‌ಸನ್‌ರ ಐದೇ ಎಸೆತಗಳಲ್ಲಿ ಈ ರನ್ ಕಸಿದರು.

ಆಸೀಸ್‌ಗೆ ಅಶ್ವಿನ್ ಆಘಾತ
ಪಂದ್ಯದ 2ನೇ ಓವರ್‌ನಿಂದಲೇ ದಾಳಿಗಿಳಿದ ಅನುಭವಿ ಸ್ಪಿನ್ನರ್ ಆರ್. ಅಶ್ವಿನ್ (8ಕ್ಕೆ 2) ಸತತ 2 ಎಸೆತಗಳಲ್ಲಿ ಡೇವಿಡ್ ವಾರ್ನರ್ (1) ಮತ್ತು ಮಿಚೆಲ್ ಮಾರ್ಷ್ (0) ವಿಕೆಟ್ ಕಬಳಿಸಿ ಆಸೀಸ್‌ಗೆ ಆಘಾತ ನೀಡಿದರು. ಬೆನ್ನಲ್ಲೇ ನಾಯಕ ಆರನ್ ಫಿಂಚ್ (8) ಜಡೇಜಾ ಸ್ಪಿನ್ ಬಲೆಗೆ ಬಿದ್ದರು. ಬಳಿಕ ಸ್ಟೀವನ್ ಸ್ಮಿತ್ (57), ಗ್ಲೆನ್ ಮ್ಯಾಕ್ಸ್‌ವೆಲ್ (37) ಮತ್ತು ಮಾರ್ಕಸ್ ಸ್ಟೋಯಿನಿಸ್ (41*) ಹೋರಾಟದಿಂದ ಆಸೀಸ್ 150ರ ಗಡಿ ದಾಟುವಲ್ಲಿ ಸಫಲವಾಯಿತು. ಸ್ಲಾಗ್ ಓವರ್‌ಗಳಲ್ಲಿ ಪರದಾಡಿದ ಭಾರತದ ಬೌಲರ್‌ಗಳು ಕೊನೇ 6 ಓವರ್‌ಗಳಲ್ಲಿ 66 ರನ್ ಬಿಟ್ಟುಕೊಟ್ಟರು.

ರೋಹಿತ್ ಶರ್ಮ ಸಾರಥ್ಯ
ಆಸೀಸ್ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಉಪನಾಯಕ ರೋಹಿತ್ ಶರ್ಮ ಭಾರತ ತಂಡವನ್ನು ಮುನ್ನಡೆಸಿದರು. ಕೊಹ್ಲಿ ಪಂದ್ಯದಿಂದ ವಿಶ್ರಾಂತಿ ಪಡೆದಿದ್ದರು ಮತ್ತು 12ರ ಬಳಗದಲ್ಲಿ ಅವರ ಹೆಸರಿರಲಿಲ್ಲ. ಆದರೂ ಅವರು ಬೌಲಿಂಗ್ ಮಾಡಿದರು. ವೇಗಿಗಳಾದ ಜಸ್‌ಪ್ರೀತ್ ಬುಮ್ರಾ ಮತ್ತು ಮೊಹಮದ್ ಶಮಿಗೂ ವಿಶ್ರಾಂತಿ ನೀಡಲಾಗಿತ್ತು.

ಆಸ್ಟ್ರೇಲಿಯಾ: 5 ವಿಕೆಟ್‌ಗೆ 152 (ವಾರ್ನರ್ 1, ಫಿಂಚ್ 8, ಸ್ಮಿತ್ 57, ಮ್ಯಾಕ್ಸ್‌ವೆಲ್ 37, ಸ್ಟೋಯಿನಿಸ್ 41*, ಅಶ್ವಿನ್ 8ಕ್ಕೆ 2, ಜಡೇಜಾ 35ಕ್ಕೆ 1, ಭುವನೇಶ್ವರ್ 27ಕ್ಕೆ 1, ರಾಹುಲ್ ಚಹರ್ 17ಕ್ಕೆ 1). ಭಾರತ: 17.5 ಓವರ್‌ಗಳಲ್ಲಿ 2 ವಿಕೆಟ್‌ಗೆ 153 (ರೋಹಿತ್ 60, ರಾಹುಲ್ 39, ಸೂರ್ಯಕುಮಾರ್ 38*, ಹಾರ್ದಿಕ್ 14*, ಅಗರ್ 14ಕ್ಕೆ 1).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net