ಬಾರ್ಡರ್-ಗಾವಸ್ಕರ್ ಟ್ರೋಫಿ ಸರಣಿಯ ಮೊದಲ ಟೆಸ್ಟ್‌ಗೆ ನಾಯಕ ರೋಹಿತ್ ಅಲಭ್ಯ!

New Project
Published on

ಮುಂಬೈ: ನ.22ರಂದು ಆರಂಭವಾಗಲಿರುವ ಬಾರ್ಡರ್-ಗಾವಸ್ಕರ್ ಟ್ರೋಫಿ ಸರಣಿಯ ಮೊದಲ ಪಂದ್ಯಕ್ಕೆ ನಾಯಕ ರೋಹಿತ್ ಶರ್ಮ ಅಲಭ್ಯರಾಗಲಿದ್ದಾರೆ. ಮನೆಗೆ ಶುಕ್ರವಾರ ಹೊಸ ಅತಿಥಿಯ ಆಗಮನದ ಬೆನ್ನಲ್ಲೇ,ರೋಹಿತ್ ಶರ್ಮ ಸರಣಿಯ ಆರಂಭಿಕ ಪಂದ್ಯಕ್ಕೆ ಲಭ್ಯತೆಯ ಬಗ್ಗೆ ಬಿಸಿಸಿಐ ಮತ್ತು ಆಯ್ಕೆಗಾರರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

‘ಕುಟುಂಬ: ಇಲ್ಲಿ ನಾವು ಈಗ ನಾಲ್ವರು’ಎಂದು ಶನಿವಾರ ಸಾಮಾಜಿಕ ಜಾಲತಾಣದಲಿ ್ಲಪೋಸ್ಟ್ ಹಾಕುವ ಮೂಲಕ ಎರಡನೇ ಮಗು ಜನಿಸಿರುವ ಖುಷಿಯ ವಿಚಾರವನ್ನು ಹಂಚಿಕೊಂಡಿರುವ ರೋಹಿತ್, ಎರಡನೇ ಮಗುವಿನ ನಿರೀಕ್ಷೆಯಲ್ಲಿ ಭಾರತ ಟೆಸ್ಟ್ ತಂಡದ ಜತೆಗೆ ಆಸೀಸ್‌ಗೆ ತೆರಳದೆ ತವರಿನಲ್ಲಿ ಉಳಿದು ಅಭ್ಯಾಸ ಆರಂಭಿಸಿದ್ದರು. ಪ್ರಸ್ತುತ ಮೊದಲ ಟೆಸ್ಟ್ ಆರಂಭಕ್ಕೆ ಇನ್ನು ಐದು ದಿನ ಬಾಕಿಯಿದ್ದು, ರೋಹಿತ್ ತಂಡ ಸೇರ್ಪಡೆಯ ಬಗ್ಗೆ ಅಧಿಕೃತ ಮಾಹಿತಿಯಿಲ್ಲ. ಆದರೆ ನ.17 ಅಥವಾ 18 ರಂದು ರೋಹಿತ್ ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸುವ ಸಾಧ್ಯತೆಗಳಿವೆ ಎನ್ನಲಾಗಿದ್ದು, ಮೊದಲ ಪಂದ್ಯದಲ್ಲಿ ಕಣಕ್ಕಿಳಿಯುವ ಬಗ್ಗೆ ರೋಹಿತ್ ನಿರ್ಧಾರವೇ ಅಂತಿಮವಾಗಿದೆ. ಆದರೆ ಎರಡನೇ ಟೆಸ್ಟ್‌ಗೆ ಲಭ್ಯವಾಗಲಿದ್ದಾರೆ.

ರಾಹುಲ್ ಹಾಗೂ ಅಭಿಮನ್ಯು ಈಶ್ವರನ್ ಆರಂಭಿಕರಾಗಿ ಯಶಸ್ವಿ ಜೈಸ್ವಾಲ್ ಜತೆಗೆ ಇನಿಂಗ್ಸ್ ಆರಂಭಿಸಿದ ಅನುಭವ ಹೊಂದಿಲ್ಲ. ಜತೆಗೆ ಕೆಎಲ್ ರಾಹುಲ್ ಹಾಗೂ ಶುಭಮಾನ್ ಗಿಲ್‌ಗೆ ಗಾಯದ ಸಮಸ್ಯೆ ಎದುರಾಗಿರುವ ನಡುವೆ ರೋಹಿತ್ ಸೇರ್ಪಡೆ ಭಾರತ ತಂಡದ ಮಾನಸಿಕ ಬಲ ಹೆಚ್ಚಿಸಲಿದೆ. ಮುಂಬೈನ ಸ್ಥಳೀಯ ಆಸ್ಪತ್ರೆಯಲ್ಲಿ ರೋಹಿತ್ ಅವರ ಪತ್ನಿ ರಿತಿಕಾ ಶುಕ್ರವಾರ ರಾತ್ರಿ ಗಂಡು ಮಗುವಿಗೆ ಜನ್ಮ ನೀಡಿದ್ದು, 2015ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ರೋಹಿತ್-ರಿತಿಕಾ ದಂಪತಿಗೆ ಈಗಾಗಲೆ ಐದು ವರ್ಷದ ಸಮೈರಾ ಎಂಬ ಮಗಳಿದ್ದಾಳೆ. ಟಿ20 ನಾಯಕ ಸೂರ್ಯಕುಮಾರ್ ಹಾಗೂ ಮುಂಬೈ ಇಂಡಿಯನ್ಸ್ ಸಹ ಆಟಗಾರನಾಗಿರುವ ತಿಲಕ್ ವರ್ಮ,ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಸೇರಿ ಹಲವು ತಾರೆಯರು ರೋಹಿತ್‌ಗೆ ಶುಭಾಶಯ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net