ಸೆಮಿಸ್​ಗೂ ಮುನ್ನ ಟೀಮ್ ಇಂಡಿಯಾದಲ್ಲಿ ಬದಲಾವಣೆ: ಈ ಸ್ಟಾರ್​ ಆಟಗಾರನನ್ನು ಕೈಬಿಡುವುದು ಖಚಿತ!​

Team India
Published on

ನವದೆಹಲಿ: ಟೀಮ್ ಇಂಡಿಯಾ ಇಂದು (ಜೂನ್​ 27) ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯವನ್ನು ಆಡಲಿದೆ. ಗಯಾನಾ ಮೈದಾನದಲ್ಲಿ ರೋಹಿತ್ ಸೇನೆ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. 2022ರ ಟಿ20 ವಿಶ್ವಕಪ್‌ನ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಟೀಮ್​ ಇಂಡಿಯಾ ಹೀನಾಯ ಸೋಲು ಕಂಡಿದ್ದು ಗೊತ್ತೇ ಇದೆ. ಆ ಸೋಲಿಗೆ ಈ ಪಂದ್ಯದಲ್ಲಿ ಸೇಡು ತೀರಿಸಿಕೊಳ್ಳಲು ರೋಹಿತ್ ಪಡೆ ಕಾಯುತ್ತಿದೆ.

ಈ ಸೆಮಿಫೈನಲ್ ಪಂದ್ಯವನ್ನು ಗೆದ್ದು ದಕ್ಷಿಣ ಆಫ್ರಿಕಾ ವಿರುದ್ಧದ ಪ್ರಶಸ್ತಿ ಹೋರಾಟಕ್ಕೆ ಸಜ್ಜಾಗಬೇಕಾದರೆ ನಾಯಕ ರೋಹಿತ್ ಶರ್ಮ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕೂಡ ಸೆಮಿಸ್‌ನಲ್ಲಿ ಬಲಿಷ್ಠ ತಂಡದೊಂದಿಗೆ ಕಣಕ್ಕೆ ಇಳಿಯುವ ಸಂಕಲ್ಪ ತೊಟ್ಟಂತಿದೆ. ಅದಕ್ಕಾಗಿ ಪ್ಲೇಯಿಂಗ್ ಇಲೆವೆನ್​ನಲ್ಲಿ ಬದಲಾವಣೆ ಮಾಡುವ ನಿರೀಕ್ಷೆ ಇದೆ ಎಂದು ವರದಿಯಾಗಿದೆ.

ಆಕ್ರಮಣಕಾರಿ ಯುವ ಆಟಗಾರನನ್ನು ತಂಡಕ್ಕೆ ತೆಗೆದುಕೊಳ್ಳುವ ನಿರೀಕ್ಷೆ ಇದೆ. ಸದ್ಯ ತಂಡದಲ್ಲಿರುವ ಕಳಪೆ ಆಟಗಾರನೆಂದರೆ ಅದು ರವೀಂದ್ರ ಜಡೇಜಾ. ಈ ವಿಶ್ವಕಪ್ ಟೂರ್ನಿಯಲ್ಲಿ ಜಡೇಜಾ ತಂಡಕ್ಕೆ ಉಪಯುಕ್ತವಾಗಿಲ್ಲ. ಈ ಟೂರ್ನಿಯಲ್ಲಿ ಐರ್ಲೆಂಡ್ ವಿರುದ್ಧ ಟೀಮ್​ ಇಂಡಿಯಾ ಆಡಿದ ಮೊದಲ ಪಂದ್ಯದಲ್ಲಿ ಜಡೇಜಾ ಬ್ಯಾಟಿಂಗ್ ಅವಕಾಶ ಸಿಗಲಿಲ್ಲ. ಆದರೆ, ಒಂದು ಓವರ್ ಬೌಲ್ ಮಾಡಿ 7 ರನ್ ನೀಡಿ ಒಂದೂ ವಿಕೆಟ್ ಪಡೆಯಲಿಲ್ಲ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಜಡೇಜಾ ಡಕೌಟ್​ ಆದರು. ಅಲ್ಲದೆ, ಎರಡು ಓವರ್ ಬೌಲ್ ಮಾಡಿದ ಅವರು ಒಂದೇ ಒಂದು ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ.

ಅಮೆರಿಕ ವಿರುದ್ಧದ ಪಂದ್ಯದಲ್ಲಿ ಜಡೇಜಾ ಬ್ಯಾಟಿಂಗ್‌ಗೆ ಬರಲಿಲ್ಲ ಮತ್ತು ಬೌಲಿಂಗ್​ನಲ್ಲೂ ಕಮಾಲ್​ ಮಾಡಲಿಲ್ಲ. ಹೀಗಾಗಿ ತಂಡದಲ್ಲಿ ಜಡೇಜಾ ನಿಷ್ಪ್ರಯೋಜಕರಾಗಿದ್ದಾರೆ. ಕೆನಡಾ ವಿರುದ್ಧದ ಲೀಗ್ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಸೂಪರ್ 8ರಲ್ಲಿ ಅಫ್ಘಾನಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್​ನಲ್ಲಿ 7 ರನ್, ಬೌಲಿಂಗ್​ನಲ್ಲಿ 3 ಓವರು ಮಾಡಿ 20 ರನ್ ನೀಡಿ ಒಂದು ವಿಕೆಟ್ ಪಡೆದಿದ್ದರು. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಜಡೇಜಾ ಬ್ಯಾಟಿಂಗ್‌ಗೆ ಬರಲಿಲ್ಲ, ಆದರೆ, 3 ಓವರ್‌ ಬೌಲಿಂಗ್​ 24 ರನ್ ನೀಡಿ ಒಂದೇ ಒಂದು ವಿಕೆಟ್ ಪಡೆಯಲಿಲ್ಲ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಅವರು ಬ್ಯಾಟಿಂಗ್‌ನಲ್ಲಿ 9 ರನ್‌ಗಳೊಂದಿಗೆ ಔಟಾಗದೆ ಉಳಿದರು. ಬೌಲಿಂಗ್​ನಲ್ಲಿ ಕೇವಲ ಒಂದೇ ಓವರ್​ನಲ್ಲಿ 17 ರನ್ ನೀಡಿ ದುಬಾರಿಯಾದರು.

ಈ ಟೂರ್ನಿಯಲ್ಲಿ ಜಡೇಜಾ ಅತ್ಯಂತ ಕಳಪೆ ಫಾರ್ಮ್‌ನಲ್ಲಿದ್ದಾರೆ. ಹಿರಿಯ ಆಲ್ ರೌಂಡರ್ ಆಗಿ ತಂಡದಲ್ಲಿ ಸ್ಥಾನ ಪಡೆದಿರುವ ಜಡೇಜಾ ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಎಳ್ಳಷ್ಟೂ ಮಿಂಚುತ್ತಿಲ್ಲ. ಇದುವರೆಗೆ 6 ಪಂದ್ಯಗಳನ್ನಾಡಿರುವ ಜಡೇಜಾ ಒಂದು ವಿಕೆಟ್ ಪಡೆದು ಕೇವಲ 22 ರನ್ ಗಳಿಸಿದ್ದಾರೆ. ತಂಡಕ್ಕೆ ಹೊರೆಯಾಗಿರುವ ಜಡೇಜಾ ಅವರನ್ನು ಹೊರತುಪಡಿಸಿ ಸಂಜು ಸ್ಯಾಮ್ಸನ್ ಅವರನ್ನು ರೋಹಿತ್ ತೆಗೆದುಕೊಳ್ಳಲು ಬಯಸಿದ್ದಾರೆ ಎಂದು ವರದಿಯಾಗಿದೆ.

ಅಕ್ಷರ್​ ಪಟೇಲ್​ ಮತ್ತು ಕುಲದೀಪ್​ ಯಾದವ್​ಗೆ ಹೋಲಿಕೆ ಮಾಡಿದರೆ ಜಡೇಜಾ ಕೊಂಚ ಹಿಂದುಳಿದಿದ್ದಾರೆ. ಜಡೇಜಾಗಿಂತ ಅಕ್ಷರ್​ ಪಟೇಲ್​ ಮತ್ತು ಕುಲದೀಪ್​ ಯಾದವ್​ಗೆ ಹೆಚ್ಚು ಅವಕಾಶ ನೀಡಬೇಕು ಎಂದು ಟೀಮ್​ ಇಂಡಿಯಾದ ಮಾಜಿ ಆಟಗಾರ ಸಂಜಯ್​ ಮಂಜ್ರೇಕರ್​ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net