

ಮೆಲ್ಬೋರ್ನ್: ಭಾರತದ ಅಗ್ರ ಡಬಲ್ಸ್ ಆಟಗಾರ, ಕನ್ನಡಿಗ ರೋಹನ್ ಬೋಪಣ್ಣ ತನ್ನ 43ನೇ ವಯಸ್ಸಿನಲ್ಲಿ ಗ್ರಾಂಡ್ ಸ್ಲಾಂ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಮೊಟ್ಟಮೊದಲ ಬಾರಿ ಚಾಂಪಿಯನ್ ಆಗುವ ಮೂಲಕ ಒಂದೇ ವಾರದ ಅವಧಿಯಲ್ಲಿ ತ್ರಿವಳಿ ಸಾಧನೆಯೊಂದಿಗೆ ಹೊಸ ಇತಿಹಾಸ ರಚಿಸಿದ್ದಾರೆ. ಎಟಿಪಿ ಡಬಲ್ಸ್ ರ‌್ಯಾಂಕಿಂಗ್‌ನಲ್ಲಿ ವಿಶ್ವ ನಂ.1 ಪಟ್ಟ, ಪದ್ಮಶ್ರೀ ಪ್ರಶಸ್ತಿ ಗೌರವದ ಬಳಿಕ ಕೊಡಗಿನ ವೀರ ರೋಹನ್ ಬೋಪಣ್ಣ, ಆತಿಥೇಯ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜತೆಗೂಡಿ ವರ್ಷದ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿ ಆಸ್ಟ್ರೇಲಿಯನ್ ಓಪನ್ ಪುರುಷರ ಡಬಲ್ಸ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಇಂಡೋ-ಆಸೀಸ್ ಜೋಡಿಗೆ ಇದು ಮೊದಲ ಗ್ರಾಂಡ್ ಸ್ಲಾಂ ಟ್ರೋಫಿ ಆಗಿದ್ದು, ಈ ಸಾಧನೆ ಮಾಡಿದ ಹಿರಿಯ ಆಟಗಾರ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಬೋಪಣ್ಣ ಪಾತ್ರರಾಗಿದ್ದಾರೆ. 2013ರ ಬಳಿಕ ಗ್ರಾಂಡ್ ಸ್ಲಾಂನಲ್ಲಿ ಪುರುಷರ ಡಬಲ್ಸ್ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಆಟಗಾರ ಎಂಬ ದಾಖಲೆಯೂ ಅವರದಾಗಿದೆ.
ಶನಿವಾರ ನಡೆದ ೈನಲ್ ಪಂದ್ಯದಲ್ಲಿ ಎರಡನೇ ಶ್ರೇಯಾಂಕಿತ ರೋಹನ್ ಬೋಪಣ್ಣ- ಮ್ಯಾಥ್ಯೂ ಎಬ್ಡೆನ್ ಜೋಡಿ 7-6, 7-5 ನೇರಸೆಟ್‌ಗಳಿಂದ ಇಟಲಿಯ ಸಿಮೋನ್ ಬೊಲೆಲ್ಲಿ- ಆಂಡ್ರಿಯಾ ವವಾಸ್ಸೋರಿ ವಿರುದ್ಧ ಒಂದು ಗಂಟೆ 39 ನಿಮಿಷಗಳ ಹೋರಾಟದಲ್ಲಿ ಗೆಲುವು ಒಲಿಸಿಕೊಂಡಿತು. ಟೈ ಬ್ರೇಕರ್‌ಗೆ ಸಾಗಿದ ಮೊದಲ ಸೆಟ್‌ನಲ್ಲಿ ಮೇಲುಗೈ ಸಾಧಿಸಿದ ಬೋಪಣ್ಣ-ಎಬ್ಡೆನ್ ಜೋಡಿ ಎರಡನೇ ಸೆಟ್‌ನಲ್ಲಿ ಪ್ರತಿರೋಧ ಎದುರಿಸಿದರೂ ಜಯ ದಾಖಲಿಸಿತು. 2023ರಲ್ಲಿ ಮೆಲ್ಬೋರ್ನ್ ಪಾರ್ಕ್‌ನಲ್ಲಿ ಮಿಶ್ರ ಡಬಲ್ಸ್ ವಿಭಾಗದಲ್ಲಿ ಸಾನಿಯಾ ಮಿರ್ಜಾ ಜತೆಗೂಡಿ ರನ್ನರ್ ಅಪ್ ಆಗಿದ್ದ ಬೋಪಣ್ಣ ಈ ಬಾರಿ ಪ್ರಶಸ್ತಿ ಜಯಿಸಿದ್ದಾರೆ.
ಸೋಮವಾರ ಬಿಡುಗಡೆಯಾಗಲಿರುವ ನೂತನ ಎಟಿಪಿ ರ‌್ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೇರಲಿರುವ ರೋಹನ್ ಬೋಪಣ್ಣ ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆದ್ದ ಹಿರಿಯ ಆಟಗಾರ ಎನಿಸಿಕೊಳ್ಳುವ ಮೂಲಕ ನೆದರ್ಲೆಂಡ್‌ನ ಜೀನ್-ಜೂಲಿಯನ್ ರೋಜೆ (40 ವರ್ಷ) ಸಾಧನೆಯನ್ನು ಹಿಮ್ಮೆಟ್ಟಿಸಿದರು. ಜೀನ್-ಜೂಲಿಯನ್ ರೋಜೆ 2022ರ ್ರೆಂಚ್ ಓಪನ್ ಟೂರ್ನಿಯ ಪುರುಷರ ಡಬಲ್ಸ್‌ನಲ್ಲಿ ಈ ಸಾಧನೆ ಮಾಡಿದ್ದರು.
2017ರ ್ರೆಂಚ್ ಓಪನ್ ಮಿಶ್ರ ಡಬಲ್ಸ್‌ನಲ್ಲಿ ಕೆನಡದ ಗೇಬ್ರಿಯೆಲಾ ಡಬ್ರೋವ್ಸ್ಕಿ ಜತೆಯಾಗಿ ಚೊಚ್ಚಲ ಗ್ರಾಂಡ್ ಸ್ಲಾಂ ಪ್ರಶಸ್ತಿ ಜಯಿಸಿದ್ದ ಬೋಪಣ್ಣ, ಪುರುಷರ ಡಬಲ್ಸ್‌ನಲ್ಲಿ ಈ ಮುನ್ನ ಯುಎಸ್ ಓಪನ್‌ನಲ್ಲಿ 2 ಬಾರಿ (2010, 2023) ಬಾರಿ ರನ್ನರ್ ಅಪ್ ಆಗಿದ್ದಾರೆ. ಇದೀಗ 3ನೇ ಯತ್ನದಲ್ಲಿ ಅವರಿಗೆ ಟ್ರೋಫಿ ಒಲಿದಿದೆ.
4: ರೋಹನ್ ಬೋಪಣ್ಣ ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆದ್ದ ಮೂರನೇ ಭಾರತೀಯ ಪುರುಷ ಹಾಗೂ ಒಟ್ಟಾರೆ 4ನೇ ಭಾರತೀಯ ಎನಿಸಿದರು. ಲಿಯಾಂಡರ್ ಪೇಸ್-ಮಹೇಶ್ ಭೂಪತಿ, ಸಾನಿಯಾ ಮಿರ್ಜಾ ಹಿಂದಿನ ಸಾಧಕರು.
38: ಭಾರತಕ್ಕೆ ಡಬಲ್ಸ್‌ನಲ್ಲಿ 38ನೇ ಗ್ರಾಂಡ್ ಸ್ಲಾಂ ಪ್ರಶಸ್ತಿ ಇದಾಗಿದೆ. ವೈಯಕ್ತಿಕವಾಗಿ ಲಿಯಾಂಡರ್ ಪೇಸ್ 18, ಮಹೇಶ್ ಭೂಪತಿ 12, ಸಾನಿಯಾ ಮಿರ್ಜಾ 6 ಹಾಗೂ ರೋಹನ್ ಬೋಪಣ್ಣ 2 ಪ್ರಶಸ್ತಿ ಜಯಿಸಿದ್ದಾರೆ.
*ನಿಮ್ಮ ಸಾಧನೆಯ ಕ್ಷಣ ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ಬರಬಹುದು. ಬೇಕಾದರೆ 43 ವರ್ಷದ ರೋಹನ್ ಬೋಪಣ್ಣ ಅವರನ್ನು ಕೇಳಿ. ದೊಡ್ಡ ವೇದಿಕೆಯಲ್ಲಿ ಪ್ರಶಸ್ತಿ ವಶಪಡಿಸಿಕೊಂಡಿದ್ದಾರೆ. ಕನಸು ಕಾಣುವ ಮೂಲಕ ತರಬೇತಿಯನ್ನು ಮುಂದುವರಿಸಿ ಸಮಯ ಬಂದಾಗ ಹೆಜ್ಜೆ ಹಾಕಲು ಸಿದ್ಧರಾಗಿರಿ.
- ಸಚಿನ್ ತೆಂಡುಲ್ಕರ್, ಕ್ರಿಕೆಟ್ ದಿಗ್ಗಜ