

ನವದೆಹಲಿ: ಕ್ರೀಡಾ ವೃತ್ತಿಜೀವನದಲ್ಲಿ ಪ್ರತಿಯೊಬ್ಬರಿಗೂ ಏಳು-ಬೀಳು ಇರುವುದು ಸಾಮಾನ್ಯದ ಸಂಗತಿ. ಭಾರತದಲ್ಲಿ ಕ್ರಿಕೆಟಿಗರು ಯಾವ ಸೆಲೆಬ್ರಿಟಿಗಳಿಗೇನು ಕಮ್ಮಿಯಿಲ್ಲ. ಅಂಥ ಆಟಗಾರರಿಗೆ ಕ್ರಿಕೆಟ್ ಜೀವವಾಗಿರುತ್ತದೆ. ಆದರೆ, ಸ್ಟಾರ್ ಬ್ಯಾಟ್ಸ್ಮನ್ ರಾಬಿನ್ ಉತ್ತಪ್ಪ 2009ರಿಂದ 2011ರ ಅವಧಿಯಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಯ ಬಗ್ಗೆ ಯೋಚಿಸಿದ್ದರಂತೆ! ಹೀಗೆಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ.
ರಾಯಲ್ ರಾಜಸ್ಥಾನ ಫೌಂಡೇಷನ್ ವತಿಯಿಂದ ‘ಮನಸ್ಸು, ದೇಹ, ಆತ್ಮ’ ಕುರಿತು ನಡೆದ ಚರ್ಚಾ ಕಾರ್ಯಕ್ರಮದಲ್ಲಿ ರಾಜ್ಯದ ಕ್ರಿಕೆಟಿಗ ರಾಬಿನ್ ಉತ್ತಪ್ಪ, ‘ಮನೆಯ ಬಾಲ್ಕನಿಯಿಂದ ಜಿಗಿಯುವ ಯೋಚನೆ ಹಲವಾರು ಬಾರಿ ಬಂದಿತ್ತು. ಎಷ್ಟೋ ಸಲ, ಒಂದು, ಎರಡು, ಮೂರು ಎಂದು ಎಣಿಸಿ ಬಾಲ್ಕನಿಯಿಂದ ಹಾರಬೇಕೆಂದು ಯೋಚಿಸಿದ್ದೆ. ಆದರೆ ಕ್ರಿಕೆಟ್ ಆಟದಿಂದಾಗಿ ನಾನು ಆ ಯೋಚನೆಯಿಂದ ದೂರ ಸರಿಯುವಂತಾಯಿತು’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಗಂಡ-ಹೆಂಡ್ತಿ ಜಗಳ ವಿಮಾನದಲ್ಲಿ ಬಾಂಬ್ ಇಡುವ ತನಕ…
‘ಆ 2 ವರ್ಷ ಪ್ರತಿದಿನ ಆತ್ಯಹತ್ಯೆ ಬಗ್ಗೆ ಯೋಚಿಸುತ್ತಿದ್ದೆ. ಆ ದಿನಗಳಲ್ಲಿ ಕೆಲವೊಮ್ಮೆ ಕ್ರಿಕೆಟ್ ಬಗ್ಗೆಯೂ ಚಿಂತಿಸುತ್ತಿರಲಿಲ್ಲ. ಬಹುಶಃ ಆಗ ಕ್ರಿಕೆಟ್ ನನ್ನ ಮನಸ್ಸಿಗೆ ಅತ್ಯಂತ ದೂರದ ವಿಷಯವಾಗಿತ್ತು. ಈ ದಿನ ಹೇಗೆ ಬದುಕುವುದು, ನಾಳೆ ಏನೋ, ನನ್ನ ಜೀವನ ಯಾವ ದಿಕ್ಕಿನಲ್ಲಿ ಸಾಗುತ್ತದೆ ಎಂದು ಸಾಕಷ್ಟು ಬಾರಿ ಯೋಚಿಸುತ್ತಿದ್ದೆ. ಇಂಥ ನಕಾರಾತ್ಮಕ ಆಲೋಚನೆಗಳನ್ನು ಕ್ರಿಕೆಟ್ ನನ್ನಿಂದ ದೂರವಿಟ್ಟಿತ್ತು. ಆದರೆ, ಪಂದ್ಯವಿಲ್ಲದ ವೇಳೆ ದಿನಗಳೆಯುವುದು ಅಷ್ಟೇ ಕಷ್ಟಕರವಾಗುತ್ತಿತ್ತು’ ಎಂದು 34 ವರ್ಷದ ಉತ್ತಪ್ಪ ವಿವರಿಸಿದ್ದಾರೆ. ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ ಆಗಿರುವ ರಾಬಿನ್ ಉತ್ತಪ್ಪ ರಾಷ್ಟ್ರೀಯ ತಂಡದ ಪರ 46 ಏಕದಿನ, 13 ಟಿ20 ಪಂದ್ಯಗಳನ್ನಾಡಿದ್ದಾರೆ.