ನೀವದನ್ನು ಮಾಡಬಾರದಿತ್ತು... RCB ವಿರುದ್ಧ ರಾಬಿನ್​ ಉತ್ತಪ್ಪ, ಇಯಾನ್​ ಮಾರ್ಗನ್​ ಆಕ್ರೋಶ!

RCB
Published on

RCB : ನಿನ್ನೆ (ನ.24) ನಡೆದ ಮೊದಲ ದಿನದ ಐಪಿಎಲ್​ ಮೆಗಾ ಹರಾಜಿನಲ್ಲಿ ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ ಕೆಎಲ್ ರಾಹುಲ್​ಗೆ ಅನಿರೀಕ್ಷಿತ ಶಾಕ್ ಎದುರಾಯಿತು. ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡವನ್ನು ಸೇರಬೇಕೆಂಬ ಆಸೆಯಲ್ಲಿದ್ದ ರಾಹುಲ್​ಗೆ ನಿರಾಸೆಯಾಯಿತು. 14 ಕೋಟಿ ರೂ.ಗೆ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ರಾಹುಲ್​ ಅವರನ್ನು ಖರೀದಿಸಿತು.

ರಾಹುಲ್​ ಅವರನ್ನು ಖರೀದಿ ಮಾಡದ ಆರ್​ಸಿಬಿ ಮ್ಯಾನೇಜ್​ಮೆಂಟ್​ ವಿರುದ್ಧ ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ. ಅಲ್ಲದೆ, ಟೀಮ್​ ಇಂಡಿಯಾದ ಮಾಜಿ ಆಟಗಾರ ರಾಬಿನ್​ ಉತ್ತಪ್ಪ ಮತ್ತು ಇಂಗ್ಲೆಂಡ್​ ತಂಡದ ಮಾಜಿ ನಾಯಕ ಇಯಾನ್​ ಮಾರ್ಗನ್​ ಕೂಡ ಆರ್​ಸಿಬಿ ಫ್ರಾಂಚೈಸಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ನಿನ್ನೆ ನಡೆದ ಹರಾಜಿನಲ್ಲಿ ಆರ್​ಸಿಬಿ ಸರಿಯಾಗಿ ಬಿಡ್​ ಮಾಡದಿದ್ದಕ್ಕೆ ಮಾಜಿ ಆಟಗಾರರು ಟೀಕಾಪ್ರಹಾರ ನಡೆಸಿದ್ದಾರೆ.

ಜಿಯೋಸಿನಿಮಾದೊಂದಿಗೆ ಮಾತನಾಡಿದ ಉತ್ತಪ್ಪ, ಆರ್​ಸಿನಿ ಅಭಿಮಾನಿಗಳು ತುಂಬಾ ಬೇಸರ ಅನುಭವಿಸುತ್ತಾರೆ. ಏಕೆಂದರೆ, ಆರ್​ಸಿಬಿ ತನ್ನ ಪರ್ಸ್​ನಲ್ಲಿ ಅತಿ ಹೆಚ್ಚು ಹಣ ಉಳಿಸಿಕೊಂಡಿರುವ ಎರಡನೇ ತಂಡವಾಗಿತ್ತು. ಭಾರಿ ಬೇಡಿಕೆ ಇರುವ ಆಟಗಾರರ ಹಿಂದೆ ಬೀಳದ ಆರ್​ಸಿಬಿಯ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.

ನಾನು ಸ್ಥಳೀಯ ಹುಡುಗ. ಆರ್​ಸಿಬಿ ಬಿಡ್ಡಿಂಗ್​ ನೋಡಿ ನಾನು ಗೊಂದಲಕ್ಕೆ ಒಳಗಾಗಿದ್ದೇನೆ. ಮೊದಲ ಎರಡು ಮಾರ್ಕ್ಯೂ ಸೆಟ್‌ಗಳಲ್ಲಿ ನೀವು ಒಂದಕ್ಕಿಂತ ಹೆಚ್ಚು ಆಯ್ಕೆಯನ್ನೇ ಮಾಡಲಿಲ್ಲ. ಒಂದು ಕಡೆ ನೀವು ತಂಡವನ್ನು ಮರು ನಿರ್ಮಾಣ ಮಾಡಲು ಪ್ರಯತ್ನಿಸಿರುವಾಗ ಮತ್ತು ನಿಮ್ಮದೇಯಾದ ಲೆಕ್ಕಾಚಾರ ಮಾಡುವಾಗ ಇಷ್ಟು ವರ್ಷಗಳಿಂದ ನಿಮ್ಮನ್ನು ಬೆಂಬಲಿಸಿಕೊಂಡು ಬರುತ್ತಿರುವ ಅಭಿಮಾನಿಗಳ ಭಾವನೆಗಳಿಗೂ ನೀವು ಬೆಲೆ ಕೊಡಬೇಕಿತ್ತು. ಈ ರೀತಿ ಮಾಡಬಾರದಿತ್ತು. ಅಭಿಮಾನಿಗಳ ಟ್ವೀಟ್​ಗಳನ್ನು ನೋಡಿದಾಗ ನನಗೆ ನಿಜಕ್ಕೂ ಬೇಸರವಾಯಿತು. ನಾನು ಒಬ್ಬ ಆರ್​ಸಿಬಿಯ ಅಭಿಮಾನಿಯಾಗಿ ಮತ್ತು ಮಾಜಿ ಆಟಗಾರನಾಗಿ ಹೇಳುವುದಾದರೆ ಆರ್​ಸಿಬಿ ತಂತ್ರವನ್ನು ಕಳೆದುಕೊಂಡಿದೆ ಅನಿಸುತ್ತಿದೆ ಎಂದು ಉತ್ತಪ್ಪ ಬೇಸರ ಹೊರಹಾಕಿದರು.

ಇಂಗ್ಲೆಂಡ್ ತಂಡದ ಮಾಜಿ ನಾಯಕ ಇಯಾನ್ ಮಾರ್ಗನ್​ ಮಾತನಾಡಿ, ರಾಬಿನ್​ ಉತ್ತಪ್ಪ ಏನು ಮಾತನಾಡಿದ್ದಾರೆ, ನಾನದನ್ನು ಸಂಪೂರ್ಣವಾಗಿ ಒಪ್ಪುತ್ತೇನೆ ಎಂದರು. ನೀವು ಆ್ಯಂಡಿ ಫ್ಲವರ್​ ಮತ್ತು ಮೊ ಬೊಬ್ಯಾಟ್​ ಅವರನ್ನು ಹೊಂದಿದ್ದೀರಿ. ನಿಮ್ಮ ಬಳಿ ದೊಡ್ಡ ಮೊತ್ತವೂ ಕೂಡ ಇತ್ತು. ಪ್ರತಿಯೊಂದು ತಂಡವೂ ಕೂಡ ವಿಶ್ಲೇಷಣೆ ಹಾಗೂ ಎಲ್ಲ ನಂಬರ್​ಗಳನ್ನು ಒಳಗೊಂಡಿರುತ್ತದೆ. ಆದರೆ, ಯಾರು ಸರಿಯಾದ ಪ್ರಶ್ನೆಗಳನ್ನು ಕೇಳಿ ಸೂಕ್ತ ಉತ್ತರ ಪಡೆಯುತ್ತಾರೆ ಎಂಬುದು ಮುಖ್ಯವಾಗಿರುತ್ತದೆ. ಪ್ರತಿಯೊಂದು ತಂಡಕ್ಕೂ ಇರುವ ಮುಖ್ಯ ಸವಾಲುಗಳು ಇವೆ ಎಂದು ಹೇಳುವ ಮೂಲಕ ಮಾರ್ಗನ್​ ಆರ್​ಸಿಬಿ ನಡೆಯನ್ನು ಟೀಕಿಸಿದರು.

ನಿನ್ನೆ ಹರಾಜಿನಲ್ಲಿ ಆರ್​ಸಿಬಿ ತಂಡ ಜೋಶ್​ ಹ್ಯಾಸಲ್​ವುಡ್​ (12.50 ಕೋಟಿ ರೂ.), ಫಿಲ್ ಸಾಲ್ಟ್​ (11.50 ಕೋಟಿ ರೂ.), ಜಿತೇಶ್​ ಶರ್ಮ (11 ಕೋಟಿ ರೂ.), ಲಿಯಾಮ್​ ಲಿವಿಂಗ್​ಸ್ಟೋನ್​ (8.75 ಕೋಟಿ ರೂ.) ರಸಿಕ್​ ಸಲಾಂ (6 ಕೋಟಿ ರೂ.) ಹಾಗೂ ಸುಯಾಶ್​ ಶರ್ಮ (2.60 ಕೋಟಿ ರೂ.) ಅವರನ್ನು ಖರೀದಿ ಮಾಡಿದ್ದು, ತನ್ನ ಪರ್ಸ್​ನಲ್ಲಿ 30.65 ಕೋಟಿ ರೂ. ಉಳಿಸಿಕೊಂಡಿದೆ. ಇಂದು ಎರಡನೇ ದಿನ ಅಥವಾ ಕೊನೆಯ ದಿನದ ಹರಾಜು ನಡೆಯಲಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net