ಮುಂಬೈ ಇಂಡಿಯನ್ಸ್​​ಗೆ ಕನ್ನಡಿಗ ರಾಬಿನ್​ ಉತ್ತಪ್ಪ ಬ್ಯಾಟಿಂಗ್​ ಕೋಚ್​

ನ್ಯೂಜಿಲೆಂಡ್​ನ ಮಾಜಿ ವೇಗಿ ಮಿಚೆಲ್​ ವೆುಕ್ಲೆನನ್​ ಬೌಲಿಂಗ್​ ಕೋಚ್​, ಟಿ. ಪ್ರದಿಪ್​ ಫೀಲ್ಡಿಂಗ್​ ಕೋಚ್​ ಮತ್ತು ಧವಳ್​ ಕುಲಕರ್ಣಿ ಡೆವಲಪ್​ಮೆಂಟ್​ ಬೌಲಿಂಗ್​ ಕೋಚ್​ ಆಗಿ ಮುಂಬೈ ತಂಡದ ತರಬೇತಿ ಬಳಗವನ್ನು ಸೇರಿಕೊಂಡಿದ್ದಾರೆ.
cricket
ರಾಬಿನ್ ಉತ್ತಪ್ಪ
Published on: 

ಮುಂಬೈ: ಟೀಮ್​ ಇಂಡಿಯಾದ ಮಾಜಿ ಬ್ಯಾಟರ್​ ಹಾಗೂ ಕನ್ನಡಿಗ ರಾಬಿನ್​ ಉತ್ತಪ್ಪ ಮುಂಬರುವ ಐಪಿಎಲ್​ 20ನೇ ಆವೃತ್ತಿಗೆ ಮುನ್ನ 5 ಬಾರಿಯ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ತಂಡದ ಬ್ಯಾಟಿಂಗ್​ ಕೋಚ್​ ಆಗಿ ನೇಮಕಗೊಂಡಿದ್ದಾರೆ. ಜತೆಗೆ ನ್ಯೂಜಿಲೆಂಡ್​ನ ಮಾಜಿ ವೇಗಿ ಮಿಚೆಲ್​ ವೆುಕ್ಲೆನನ್​ ಬೌಲಿಂಗ್​ ಕೋಚ್​, ಟಿ. ಪ್ರದಿಪ್​ ಫೀಲ್ಡಿಂಗ್​ ಕೋಚ್​ ಮತ್ತು ಧವಳ್​ ಕುಲಕರ್ಣಿ ಡೆವಲಪ್​ಮೆಂಟ್​ ಬೌಲಿಂಗ್​ ಕೋಚ್​ ಆಗಿ ಮುಂಬೈ ತಂಡದ ತರಬೇತಿ ಬಳಗವನ್ನು ಸೇರಿಕೊಂಡಿದ್ದಾರೆ. ಮುಂಬೈ ತಂಡದ ಹಿಂದಿನ ಬ್ಯಾಟಿಂಗ್​ ಕೋಚ್​ ಕೈರಾನ್​ ಪೊಲ್ಲಾರ್ಡ್​ ಇತ್ತೀಚೆಗೆ ಮುಖ್ಯ ಕೋಚ್​ ಆಗಿ ಬಡ್ತಿ ಪಡೆದಿದ್ದರು.

2007ರ ಟಿ20 ವಿಶ್ವಕಪ್​ ವಿಜೇತರೂ ಆಗಿರುವ 40 ವರ್ಷದ ರಾಬಿನ್​ ಉತ್ತಪ್ಪ 2008ರ ಚೊಚ್ಚಲ ಐಪಿಎಲ್​ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್​ ಪರ ಆಡಿದ್ದರು. "ನಮ್ಮ ಮೊದಲ ಆವೃತ್ತಿಯಲ್ಲೇ ತಂಡದ ಭಾಗವಾಗಿದ್ದ ರಾಬಿನ್​ ಉತ್ತಪ್ಪ ಇದೀಗ ಅಪಾರ ಅನುಭವದೊಂದಿಗೆ ತಂಡಕ್ಕೆ ಮರಳಿದ್ದಾರೆ. ಆಟದ ಬಗ್ಗೆ ಆಳವಾದ ತಿಳುವಳಿಕೆ, ಅತ್ಯುತ್ತಮ ಸಂವಹನ ಕೌಶಲ ಮತ್ತು ಯುವ ಆಟಗಾರರಿಗೆ ಮಾರ್ಗದರ್ಶನ ನೀಡುವ ಸ್ಪಷ್ಟತೆ ಅವರಲ್ಲಿದೆ. ರಾಬಿನ್​ಗೆ ಮತ್ತೆ ಸ್ವಾಗತ' ಎಂದು ಮುಂಬೈ ಇಂಡಿಯನ್ಸ್​ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ.

ಟಿ. ಪ್ರದಿಪ್​ ಈ ಹಿಂದೆ ಭಾರತ ತಂಡದ ಫೀಲ್ಡಿಂಗ್​ ಕೋಚ್​ ಆಗಿದ್ದರು ಮತ್ತು 2024, 2026ರ ಟಿ20 ವಿಶ್ವಕಪ್​, 2025ರ ಚಾಂಪಿಯನ್ಸ್​ ಟ್ರೋಫಿ ಗೆಲುವಿಗೆ ನೆರವಾಗಿದ್ದರು. ಮೆಕ್ಲೆನನ್​ ಈ ಹಿಂದೆ 2015ರಿಂದ 2020ರವರೆಗೆ ಮುಂಬೈ ತಂಡದ ಆಟಗಾರರಾಗಿದ್ದರು ಮತ್ತು 4 ಟ್ರೋಫಿ ಗೆಲುವಿನಲ್ಲಿ (2015, 2017, 2019, 2020) ಪ್ರಮುಖ ಪಾತ್ರ ವಹಿಸಿದ್ದರು.