

ಹ್ಯಾಮಿಲ್ಟನ್: ತಂದೆಯ ನಿಧನದ ಸುದ್ದಿ ಬಂದರೂ ತವರಿಗೆ ಮರಳದೆ ಆತಿಥೇಯ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಡಲಿಳಿದ ವೆಸ್ಟ್ ಇಂಡೀಸ್ ವೇಗಿ ಕೇಮಾರ್ ರೋಚ್ ದಿಟ್ಟತನ ತೋರಿದ್ದಾರೆ.
ಗುರುವಾರ ಪಂದ್ಯ ಆಡಲು ಸಿದ್ಧಗೊಳ್ಳುತ್ತಿರುವ ವೇಳೆ ಬೆಳಗ್ಗೆ ತಂದೆ ಆಂಡ್ರ್ಯೋ ಸ್ಮಿತ್ ನಿಧನದ ಸುದ್ದಿ ರೋಚ್ ಅವರನ್ನು ತಲುಪಿತ್ತು. ಆದರೆ ಅವರು ದೇಶದ ಪರ ಆಡುವುದಕ್ಕೆ ಮೊದಲ ಆದ್ಯತೆ ನೀಡಿದರು. ರೋಚ್ ತಂದೆಯ ಗೌರವಾರ್ಥ ಉಭಯ ತಂಡಗಳ ಆಟಗಾರರು ಮೊದಲ ದಿನದಾಟದಲ್ಲಿ ತೋಳಿಗೆ ಕಪ್ಪುಪಟ್ಟಿ ಧರಿಸಿ ಆಡಿದರು.
ಪಂದ್ಯಕ್ಕೆ ಮುನ್ನ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್, ರೋಚ್ ಅವರನ್ನು ತಬ್ಬಿಕೊಂಡು ಸಾಂತ್ವಾನ ಹೇಳಿರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಲಿಯಮ್ಸನ್ ನಡೆಯೂ ಕ್ರಿಕೆಟ್ ಪ್ರೇಮಿಗಳ ಮನಗೆದ್ದಿದೆ.
ಇತ್ತೀಚೆಗೆ ಟೀಮ್ ಇಂಡಿಯಾದ ವೇಗಿ ಮೊಹಮದ್ ಸಿರಾಜ್ ಕೂಡ ತಂದೆಯ ನಿಧನದ ನಡುವೆಯೂ ತವರಿಗೆ ಮರಳದೆ ಆಸೀಸ್ ಪ್ರವಾಸದಲ್ಲಿ ಮುಂದುವರಿದಿದ್ದರು. ಐಪಿಎಲ್ ಟೂರ್ನಿಯ ವೇಳೆಯೂ ಕೆಲ ಆಟಗಾರರು ಕುಟುಂಬದವರ ಸಾವಿನ ನಡುವೆಯೂ ಟೂರ್ನಿಯಲ್ಲಿ ಆಟವನ್ನು ಮುಂದುವರಿಸಿದ್ದರು.