

Riyan Parag : ನಾವು ಮನಸ್ಸಿನಲ್ಲಿ ಪಾಸಿಟಿವ್ ಆಗಿ ಏನೇ ಅಂದುಕೊಂಡರು ಯೂನಿವರ್ಸ್ ಅದನ್ನು ನಮಗೆ ಕೊಟ್ಟೆ ಕೊಡುತ್ತದೆ ಅನ್ನೋ ಮಾತಿದೆ. ಇದನ್ನು ಮ್ಯಾನಿಫೆಸ್ಟೋ ಅಂತಾನು ಕರೆಯುತ್ತಾರೆ. ಈ ಮಾತು ಇದೀಗ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ವಿಚಾರದಲ್ಲಿ ನಿಜವಾಗಿದೆ.
ಹೌದು, ಪ್ರಸಕ್ತ 18ನೇ ಆವೃತ್ತಿಯ ಐಪಿಎಲ್ ಸೀಸನ್ ಭಾಗವಾಗಿ ಭಾನುವಾರ ಕೋಲ್ಕತದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಕೋಲ್ಕತ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ತಮ್ಮ ಬ್ಯಾಟಿಂಗ್ ಮೂಲಕ ಅಬ್ಬರಿಸಿ, ಬೊಬ್ಬಿರಿದರು. ಕೇವಲ 45 ಎಸೆತಗಳಲ್ಲಿ 6 ಬೌಂಡರಿ ಮತ್ತು 8 ಸಿಕ್ಸರ್ಗಳೊಂದಿಗೆ 95 ರನ್ ಗಳಿಸಿದರು ಮತ್ತು ಸ್ವಲ್ಪದರಲ್ಲೇ ಶತಕ ವಂಚಿತರಾದರು.
ರಾಜಸ್ಥಾನ ತಂಡವು ಸತತ ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ರಿಯಾನ್ ಪರಾಗ್ ಭರ್ಜರಿಯಾಗಿ ಬ್ಯಾಟ್ ಬೀಸಿದರು. 27 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ನಂತರ, ಇದ್ದಕ್ಕಿದ್ದಂತೆ ತಮ್ಮ ಗೇರ್ ಬದಲಾಯಿಸಿದರು. ಒಂದೇ ಓವರ್ನಲ್ಲಿ ಐದು ಸಿಕ್ಸರ್ಗಳನ್ನು ಬಾರಿಸಿದರು. ಸ್ಪಿನ್ನರ್ ಮೊಯೀನ್ ಅಲಿ ಬೌಲಿಂಗ್ ಮಾಡಿದ 13 ನೇ ಓವರ್ನಲ್ಲಿ ಸತತ ಐದು ಎಸೆತಗಳನ್ನು ಸ್ಟ್ಯಾಂಡ್ಗೆ ಕಳುಹಿಸಿದರು.
13ನೇ ಓವರ್ನ ಮೊದಲ ಎಸೆತದಲ್ಲಿ ಶಿಮ್ರಾನ್ ಹೆಟ್ಮೆಯರ್ ಒಂದು ಸಿಂಗಲ್ ನೀಡಿದರು. ರಿಯಾನ್ ಪರಾಗ್ 2, 3, 4, 5 ಮತ್ತು 6 ಎಸೆತಗಳಲ್ಲಿ ಸಿಕ್ಸ್ ಬಾರಿಸಿ ಭರ್ಜರಿ ಬ್ಯಾಟಿಂಗ್ ಮಾಡಿದರು. ಇದರ ಜೊತೆಗೆ, ಮೊಯೀನ್ ಅವರು ಒಂದು ವೈಡ್ ಸಹ ಎಸೆದರು. ಇದರೊಂದಿಗೆ, ಆ ಓವರ್ನಲ್ಲಿ ಒಟ್ಟು 32 ರನ್ಗಳು ಬಂದವು.
ರಿಯಾನ್ ಪರಾಗ್ ಸತತ ಐದು ಸಿಕ್ಸ್ ಬಾರಿಸಿದ ಸುದ್ದಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 2023ರಲ್ಲಿ ಪರಾಗ್ ಮಾಡಿದ ಟ್ವೀಟ್ ಇದೀಗ ವೈರಲ್ ಆಗಿದೆ. ಈ ಐಪಿಎಲ್ನಲ್ಲಿ ಒಂದು ಹಂತದಲ್ಲಿ ನಾನು ಒಂದೇ ಓವರ್ನಲ್ಲಿ ನಾಲ್ಕು ಸಿಕ್ಸ್ ಬಾರಿಸುತ್ತೇನೆ ಎಂದು ನನ್ನ ಮನಸ್ಸು ಹೇಳುತ್ತಿದೆ ಅಂತ ಪರಾಗ್ ಪಾಸಿಟಿವ್ ಆಗಿ ಬರೆದುಕೊಂಡಿದ್ದರು. 2023 ರಲ್ಲಿ ಹೇಳಿದನ್ನು 2025 ರಲ್ಲಿ ಮಾಡಿ ತೋರಿಸಿದ್ದಾರೆ. ಹೀಗಾಗಿ, ಅವರ ಮ್ಯಾನಿಫೆಸ್ಟೋ ನಿಜವಾಗಿದೆ ಎನ್ನುತ್ತಿದ್ದಾರೆ ನೆಟ್ಟಿಗರು.
ಐಪಿಎಲ್ನಲ್ಲಿ ಒಂದೇ ಓವರ್ನಲ್ಲಿ ಐದು ಸಿಕ್ಸರ್ಗಳನ್ನು ಬಾರಿಸಿದ ಇತರ ಆಟಗಾರರೆಂದರೆ ಕ್ರಿಸ್ ಗೇಲ್ (ರಾಹುಲ್ ಶರ್ಮಾ, 2012), ರಾಹುಲ್ ತೆವಾಟಿಯಾ (ಎಸ್ ಕಾಟ್ರೆಲ್, 2020), ರವೀಂದ್ರ ಜಡೇಜಾ (ಹರ್ಷಲ್ ಪಟೇಲ್, 2021) ಮತ್ತು ರಿಂಕು ಸಿಂಗ್ (ಯಶ್ ದಯಾಳ್, 2023). ಇತ್ತೀಚಿನ ಆಟಗಾರ ರಿಯಾನ್ ಪರಾಗ್ (ಮೊಯಿನ್ ಅಲಿ, 2025) ಅವರು ಐದು ಸಿಕ್ಸರ್ಗಳನ್ನು ಬಾರಿಸಿದ್ದಾರೆ. (ಏಜೆನ್ಸೀಸ್)