

ಚೆನ್ನೈ: ಬಾಂಗ್ಲಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್ನಲ್ಲಿ ಭಾರತದ ಬ್ಯಾಟ್ಸ್ಮನ್ಗಳಾದ ರಿಷಬ್ ಪಂತ್ (109: 128 ಎಸೆತಗಳಲ್ಲಿ 13 ಬೌಂಡರಿ, 4 ಸಿಕ್ಸರ್) ಮತ್ತು ಶುಭಮನ್ ಗಿಲ್ (119*: 176 ಎಸೆತಗಳಲ್ಲಿ 10 ಬೌಂಡರಿ, 4 ಸಿಕ್ಸರ್) ಶತಕ ಸಿಡಿಸಿದ್ದಾರೆ.
ಪಂತ್ ಅವರಿಗೆ ಇದು ಆರನೇ ಶತಕವಾಗಿದ್ದು, ಗಿಲ್ಖಾತೆಗೆ ಐದನೇ ಶತಕ ಸೇರಿದಂತಾಗಿದೆ. 124 ಎಸೆತಗಳಲ್ಲಿ ಶತಕ ಪೂರೈಸಿದ ಪಂತ್ ಬಾಂಗ್ಲಾ ಬೌಲರ್ ಮೆಹಿದಿಗೆ ರಿಟರ್ನ್ ಕ್ಯಾಚ್ ನೀಡಿ ಪೆವಿಲಿಯನ್ ತಲುಪಿದರು. ಇದರಿಂದಾಗಿ ಗಿಲ್ ಜೊತೆ ನಾಲ್ಕನೇ ವಿಕೆಟ್ಗೆ 167 ರನ್ಗಳ ಜೊತೆಯಾಟ ಮೂಡಿಬಂತು.
ಮೊದಲ ಇನ್ನಿಂಗ್ಸ್ ನಲ್ಲಿ ಡಕ್ ಆಗಿದ್ದ ಗಿಲ್ ಎರಡನೇ ಇನ್ನಿಂಗ್ಸ್ ನಲ್ಲಿ ಗುಣಮಟ್ಟದ ಪ್ರದರ್ಶನ ತೋರಿದರು. ಬಾಂಗ್ಲಾ ವೇಗ ಮತ್ತು ಸ್ಪಿನ್ ಎದುರಿಸಿ ಮೂರು ಅಂಕಿಗಳ ಸ್ಕೋರ್ ದಾಖಲಿಸಿದರು. ಬಾಂಗ್ಲಾ ವಿರುದ್ಧ 158 ಎಸೆತಗಳಲ್ಲಿ ಶತಕ ಪೂರೈಸಿದರು. ಪಂತ್ ಔಟಾದ ಬಳಿಕ ಕ್ರೀಸ್ ಗೆ ಬಂದ ಕೆ.ಎಲ್.ರಾಹುಲ್ ( 19 ಎಸೆತಗಳಲ್ಲಿ 4ಬೌಂಡರಿಗಳನ್ನೊಳಗೊಂಡ 22 ರನ್-ಔಟಾಗದೆ) ಆಕ್ರಮಣಕಾರಿ ಆಟವಾಡಿದರು. ಇದರೊಂದಿಗೆ ಭಾರತ ತನ್ನ ಎರಡನೇ ಇನಿಂಗ್ಸ್ನಲ್ಲಿ 287/4 ಸ್ಕೋರ್ಗೆ ಡಿಕ್ಲೇರ್ ಮಾಡಿಕೊಂಡಿತು.
ಬಾಂಗ್ಲಾದೇಶಕ್ಕೆ 515 ರನ್ ಗುರಿ ನೀಡಲಾಯಿತು. ಭಾರತ ಮೊದಲ ಇನಿಂಗ್ಸ್ನಲ್ಲಿ 376 ರನ್ ಗಳಿಸಿದ್ದರೆ, ಬಾಂಗ್ಲಾ 149 ರನ್ಗಳಿಗೆ ಆಲೌಟ್ ಆಗಿತ್ತು.
ಧೋನಿ ದಾಖಲೆ ಸರಿಗಟ್ಟಿದ ಪಂತ್: ಭಾರತದ ವಿಕೆಟ್ಕೀಪರ್ಗಳಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಕ್ರಿಕೆಟಿಗರ ಪಟ್ಟಿಯಲ್ಲಿ ಪಂತ್ ಧೋನಿಯನ್ನು ಸರಿಗಟ್ಟಿದ್ದಾರೆ. ಧೋನಿ 144 ಇನ್ನಿಂಗ್ಸ್ಗಳಲ್ಲಿ ಆರು ಶತಕ ಗಳಿಸಿದ್ದರೆ, ಪಂತ್ ಅದನ್ನು ಕೇವಲ 58 ಇನ್ನಿಂಗ್ಸ್ಗಳಲ್ಲಿ ಪೂರ್ಣಗೊಳಿಸಿದ್ದಾರೆ ಎಂಬುದು ಗಮನಾರ್ಹ. ಇವರಿಬ್ಬರ ನಂತರ ವೃದ್ಧಿಮಾನ್ ಸಹಾ 54 ಇನ್ನಿಂಗ್ಸ್ಗಳಲ್ಲಿ 3 ಶತಕ ಸಿಡಿಸಿದ್ದರು.