

ಲಖನೌ: 18ನೇ ಆವೃತ್ತಿಯ ಐಪಿಎಲ್ ಆರಂಭವಾಗುವುದಕ್ಕೆ ಎರಡು ತಿಂಗಳು ಬಾಕಿ ಉಳಿದಿದ್ದು, ತಂಡಗಳು ಈಗಾಗಲೇ ತಯಾರಿಯನ್ನು ಆರಂಭಿಸಿವೆ. 2024ರ ನವೆಂಬರ್ ತಿಂಗಳಲ್ಲಿ ನಡೆದ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ರಿಷಭ್ ಪಂತ್ (Rishabh Pant), ಡೇವಿಡ್ ಮಿಲ್ಲರ್ನಂತಹ ಸ್ಫೋಟಕ ಆಟಗಾರರನ್ನು ಖರೀದಿಸುವ ಮೂಲಕ ಬಲಿಷ್ಠ ತಂಡವನ್ನು ಕಟ್ಟಿದ್ಉದ, ಈ ಬಾರಿ ಕಪ್ ಗೆಲ್ಲುವ ವಿಶ್ವಾಸದಲ್ಲಿದೆ.
ಇನ್ನೂ ಈ ಹಿಂದೆ ಲಖನೌ ಸೂಪರ್ಜೈಂಟ್ಸ್ ತಂಡದ ನಾಯಕರಾಗಿದ್ದ ಕೆ.ಎಲ್. ರಾಹುಲ್ (KL Rahul) ಈ ಬಾರಿಯ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೇರಿಕೊಂಡಿದ್ದು, ರಿಷಭ್ ಪಂತ್ (Rishabh Pant) ದುಬಾರಿ ಮೊತ್ತಕ್ಕೆ ಲಖನೌ ಸೂಪರ್ಜೈಂಟ್ಸ್ ಪಾಲಾಗಿದ್ದಾರೆ. ಎಲ್ಎಸ್ಜಿ ತಂಡದ ನಾಯಕ ಯಾರಾಗಲಿದ್ದಾರೆ ಎಂಬ ವಿಚಾರಕ್ಕೆ ತೆರೆಬಿದ್ದಿದ್ದು, ರಿಷಭ್ ಪಂತ್ ನಾಯಕತ್ವ ವಹಿಸಿಕೊಳ್ಳುವುದು ಖಚಿತವಾಗಿದೆ. ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ.
2024ರ ನವೆಂಬರ್ 24-25ರಂದು ನಡೆದ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ದುಬಾರಿ ಮೊತ್ತಕ್ಕೆ ಮಾರಾಟವಾಗುವ ಮೂಲಕ ರಿಷಭ್ ಪಂತ್ ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆಯನ್ನ ಬರೆದಿದ್ದರು. ಈ ಬಾರಿ ಲಖನೌ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಾರೆ ಎಂಬ ವಿಶ್ವಾಸ ಕ್ರೀಡಾಭಿಮಾನಿಗಳಲ್ಲಿ ಮೂಡಿದ್ದು, ಯಶ ಕಾಣುತ್ತಾರಾ ಎಂದು ಕಾದು ನೋಡಬೇಕಿದೆ.
2016ರಿಂದ ಐಪಿಎಲ್ ಆಡುತ್ತಿರುವ ರಿಷಭ್ ಪಂತ್ (Rishabh Pant) ಆರಂಭದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಭಾಗವಾಗಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ಪರ 110 ಪಂದ್ಯಗಳಲ್ಲಿ 35.31 ಸರಾಸರಿಯಲ್ಲಿ ಒಂದು ಶತಕ, 18 ಅರ್ಧಶತಕ ಒಳಗೊಂಡಂತೆ 3,284 ರನ್ ಗಳಿಸಿದ್ದಾರೆ. 2021ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗ ನೇಮಕಗೊಂಡ ರಿಷಭ್ ಪಂತ್ ತಂಡವನ್ನು ಪ್ಲೇಆಫ್ಗೇರಿಸುವಲ್ಲಿ ಯಶಸ್ವಿಯಾಗಿದ್ದರು.