

Rishabh Pant: ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲನೇ ಟೆಸ್ಟ್ನ ಎರಡನೇ ದಿನಕ್ಕೆ ಕಾಲಿಟ್ಟಿರುವ ಟೀಮ್ ಇಂಡಿಯಾ, ರನ್ಗಳ ಹೊಳೆಯನ್ನೇ ಹರಿಸಿದೆ. ತಂಡದ ನಾಯಕನಾಗಿ ಶತಕದಾಟ ತೋರಿದ್ದ ಶುಭಮನ್ ಗಿಲ್ ಒಂದೆಡೆಯಾದರೆ, ಅರ್ಧ ಶತಕ ಗಳಿಸಿದ್ದ ಉಪನಾಯಕ ರಿಷಭ್ ಪಂತ್ ಕೂಡ ಶತಕ ಬಾರಿಸಿದ್ದಾರೆ. ಈ ಮೂಲಕ ಪಂತ್ ಹಿಟ್ಮ್ಯಾನ್ ರೋಹಿತ್ ಶರ್ಮ ದಾಖಲೆ ಮುರಿದಿದ್ದಾರೆ.
ಟೀಮ್ ಇಂಡಿಯಾದ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಮತ್ತೊಮ್ಮೆ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ಲೀಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಪಂತ್ ನಿರ್ಭೀತ ಇನ್ನಿಂಗ್ಸ್ ಆಡಿದ್ದಲ್ಲದೇ, ತಮ್ಮ ಅದ್ಭುತ ಬ್ಯಾಟಿಂಗ್ ವೈಖರಿ ಮೂಲಕ ಭರ್ಜರಿ ಶತಕ ದಾಖಲಿಸಿದ್ದಾರೆ. ಯಶಸ್ವಿ ಜೈಸ್ವಾಲ್ ಔಟಾದ ಬೆನ್ನಲ್ಲೇ ಕ್ರೀಸ್ಗಿಳಿದ ರಿಷಭ್, ರನ್ ಕೊಡುಗೆ ನೀಡಿ ತಂಡದ ಒಟ್ಟು ಮೊತ್ತವನ್ನು ಹೆಚ್ಚಿಸಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಭಾರತೀಯ ಆಟಗಾರ ಎಂಬ ದಾಖಲೆಯನ್ನು ಇದೀಗ ಪಂತ್ ತಮ್ಮದಾಗಿಸಿಕೊಂಡಿದ್ದಾರೆ. ಡಬ್ಲ್ಯುಟಿಸಿಯಲ್ಲಿ ಇದುವರೆಗೆ 35 ಪಂದ್ಯಗಳಲ್ಲಿ ಪಂತ್ 58 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಇದಕ್ಕೂ ಮೊದಲು, ಈ ದಾಖಲೆ ಭಾರತದ ಮಾಜಿ ಟೆಸ್ಟ್ ನಾಯಕ ರೋಹಿತ್ ಶರ್ಮ (56) ಅವರ ಹೆಸರಿನಲ್ಲಿತ್ತು.
ಪ್ರಸಕ್ತ ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ರಿಷಭ್, ರೋಹಿತ್ ದಾಖಲೆಯನ್ನು ಮುರಿದಿದ್ದಾರೆ. ಒಟ್ಟಾರೆಯಾಗಿ, ಈ ಸಾಧನೆಗೈದವರ ಪಟ್ಟಿಯಲ್ಲಿ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ (83) ಅಗ್ರಸ್ಥಾನದಲ್ಲಿದ್ದಾರೆ. ಪ್ರಸ್ತುತ ರಿಷಭ್ ಪಂತ್ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು ಪಂದ್ಯದ ಲೆಕ್ಕಾಚಾರ ನೋಡುವುದಾದರೆ, ಮೊದಲ ದಿನದ ಅಂತ್ಯಕ್ಕೆ, ಟೀಮ್ ಇಂಡಿಯಾ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಮೂರು ವಿಕೆಟ್‌ಗಳ ನಷ್ಟಕ್ಕೆ 359 ರನ್ ಗಳಿಸಿತ್ತು. ನಾಯಕ ಶುಭಮನ್ ಗಿಲ್ (127 ಅಜೇಯ) ಮತ್ತು ಯಶಸ್ವಿ ಜೈಸ್ವಾಲ್ (101) ರನ್ ಗಳಿಸಿ ತಂಡದ ಮೊತ್ತವನ್ನು 300ರ ಗಡಿದಾಟಿಸಿದರು.