ನೋವಿನಿಂದ ನರಳಿದ ರಿಷಭ್ ಪಂತ್​! ಸ್ಟಾರ್​ ಬ್ಯಾಟರ್​ಗೆ ಏನಾಯ್ತು? ಬಿಸಿಸಿಐ ಹೇಳಿದ್ದೇನು? Rishabh Pant

Rishabh Pant
Published on

Rishabh Pant : ಮ್ಯಾಂಚೆಸ್ಟರ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಬ್ಯಾಟಿಂಗ್ ಮಾಡುವಾಗ ಕ್ರಿಸ್ ವೋಕ್ಸ್ ಬೌಲಿಂಗ್‌ನಲ್ಲಿ ಪಂತ್ ಸ್ವೀಪ್ ಶಾಟ್ ಹೊಡೆಯಲು ಪ್ರಯತ್ನಿಸಿದರು. ಆದರೆ, ಚೆಂಡು ಬ್ಯಾಟ್‌ನ ಅಂಚಿಗೆ ತಗುಲಿ ಪಂತ್ ಬಲಗಾಲಿಗೆ ಬಲವಾಗಿ ತಗುಲಿತು. ಈ ವೇಳೆ ಫಿಸಿಯೋ ಮೈದಾನಕ್ಕೆ ಬಂದು ಚಿಕಿತ್ಸೆ ನೀಡುತ್ತಿದ್ದಾಗ, ಪಂತ್ ನೋವಿನಿಂದ ನರಳುತ್ತಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್​ ಆಗಿದೆ.

ಪಂತ್​ ಅವರ ಕಾಲು ಊದಿಕೊಂಡಿದ್ದರಿಂದ ಮತ್ತು ನಡೆಯಲು ಸಾಧ್ಯವಾಗದ ಕಾರಣ ಅವರನ್ನು ವಿಶೇಷ ವಾಹನದಲ್ಲಿ ಮೈದಾನದಿಂದ ಹೊರಗೆ ಕರೆದೊಯ್ಯಲಾಯಿತು. ಈ ಸಂದರ್ಭದಲ್ಲಿ ಪಂತ್ ಅವರು 48 ಎಸೆತಗಳಲ್ಲಿ 37 ರನ್ ಗಳಿಸಿದ್ದರು. ಆದಾಗ್ಯೂ, ಗಾಯವು ಗಂಭೀರವಾಗಿರುವುದರಿಂದ ಪಂತ್ ಮತ್ತೆ ಬ್ಯಾಟಿಂಗ್ ಮಾಡಲು ಬರುತ್ತಾರೋ ಇಲ್ಲವೋ ಎಂದು ಅಭಿಮಾನಿಗಳು ಚಿಂತಿತರಾಗಿದ್ದಾರೆ. ಪಂತ್ ಗಾಯಗೊಂಡು ನಿರ್ಗಮಿಸಿದ ನಂತರ ರವೀಂದ್ರ ಜಡೇಜಾ ಅವರ ಸ್ಥಾನಕ್ಕೆ ಬಂದರು. ಮೂರನೇ ಟೆಸ್ಟ್‌ನಲ್ಲಿಯೂ ಪಂತ್ ಅವರ ಬೆರಳಿಗೆ ಗಾಯವಾಗಿತ್ತು.

ಪಂತ್ ಗಾಯದ ಬಗ್ಗೆ ಮುಖ್ಯ ಕೋಚ್ ಗಂಭೀರ್ ಪ್ರತಿಕ್ರಿಯೆ ನೀಡಿದ್ದಾರೆ. ಪಂತ್ ಅವರ ಪಾದಕ್ಕೆ ಗಂಭೀರ ಗಾಯವಾದ ನಂತರ ಅವರನ್ನು ಸ್ಕ್ಯಾನ್‌ಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಹೇಳಿದ್ದಾರೆ. ಗಂಭೀರ್ ಮತ್ತು ನಾಯಕ ಗಿಲ್ ಪಂತ್ ಗಾಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಪಂತ್ ಗಾಯದ ಬಗ್ಗೆ ಬಿಸಿಸಿಐ ಕೂಡ ಅಧಿಕೃತ ಹೇಳಿಕೆ ನೀಡಿದ್ದು, ಮ್ಯಾಂಚೆಸ್ಟರ್ ಟೆಸ್ಟ್‌ನ ಮೊದಲ ದಿನದಂದು ಬ್ಯಾಟಿಂಗ್ ಮಾಡುವಾಗ ರಿಷಭ್ ಪಂತ್ ಅವರ ಬಲಗಾಲಿಗೆ ಗಾಯವಾಗಿದೆ. ಅವರನ್ನು ಸ್ಕ್ಯಾನ್‌ಗಾಗಿ ಕ್ರೀಡಾಂಗಣದಿಂದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿಸಿದೆ.

ಬಿಸಿಸಿಐ ವೈದ್ಯಕೀಯ ತಂಡವು ಪಂತ್​ ಅವರನ್ನು ಮೇಲ್ವಿಚಾರಣೆ ಮಾಡುತ್ತಿದೆ ಎಂದು ಬಿಸಿಸಿಐ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಹಲವಾರು ಪ್ರಮುಖ ಆಟಗಾರರು ಈಗಾಗಲೇ ಗಾಯಗಳಿಂದಾಗಿ ಹೊರಗುಳಿದಿದ್ದಾರೆ. ಆಕಾಶ್ ದೀಪ್, ಅರ್ಷದೀಪ್ ಮತ್ತು ನಿತೀಶ್ ಕುಮಾರ್ ರೆಡ್ಡಿ ಗಾಯಗಳಿಂದಾಗಿ ಹೊರಗುಳಿದಿದ್ದಾರೆ. ಈಗ, ಪಂತ್ ಅವರ ಗಂಭೀರ ಗಾಯವು ಹೆಚ್ಚಿನ ಕಳವಳವನ್ನುಂಟುಮಾಡುತ್ತಿದೆ.

ಇದೇ ಸಂದರ್ಭದಲ್ಲಿ ಪಂತ್ ಇತಿಹಾಸ ಸೃಷ್ಟಿಸಿದ್ದಾರೆ. ಅವರು ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿದೇಶಿ ವಿಕೆಟ್ ಕೀಪರ್ ಆಗಿದ್ದಾರೆ. ಪಂತ್ ಇಲ್ಲಿಯವರೆಗೆ ಇಂಗ್ಲೆಂಡ್​ನಲ್ಲಿ ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಟೆಸ್ಟ್‌ನಲ್ಲಿ ಭಾರತಕ್ಕಾಗಿ ಅತಿ ಹೆಚ್ಚು ಸಿಕ್ಸ್ (89) ಬಾರಿಸಿದ ಎರಡನೇ ಆಟಗಾರರಾಗಿದ್ದು, ರೋಹಿತ್ ಅವರ (88) ದಾಖಲೆಯನ್ನು ಮುರಿದಿದ್ದಾರೆ. ಅವರು ಇನ್ನೂ ಮೂರು ಸಿಕ್ಸ್‌ಗಳನ್ನು ಬಾರಿಸಿದರೆ, ವೀರೇಂದ್ರ ಸೆಹ್ವಾಗ್ ಅವರ (91) ದಾಖಲೆಯನ್ನು ಸಹ ಮುರಿಯುತ್ತಾರೆ.

ಇನ್ನು ಪಂದ್ಯದ ವಿಚಾರಕ್ಕೆ ಬಂದರೆ, ನಿನ್ನೆಯಿಂದ (ಜುಲೈ 23) ಆರಂಭವಾಗಿರುವ 4ನೇ ಟೆಸ್ಟ್​ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ಆರಂಭಿಸಿರುವ ಭಾರತ ಮೊದಲ ದಿನದಾಟದ ಅಂತ್ಯಕ್ಕೆ 4 ವಿಕೆಟ್​ ಕಳೆದುಕೊಂಡು 264 ರನ್​ ಗಳಿಸಿದೆ. ಸದ್ಯ ರವೀಂದ್ರಾ ಜಡೇಜಾ (19) ಹಾಗೂ ಶಾರ್ದೂಲ್​ ಠಾಕೂರ್​ (19) ಕ್ರೀಸ್​ ಕಾಯ್ದುಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net