

Rishabh Pant : ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ಮ್ಯಾಂಚೆಸ್ಟರ್‌ನಲ್ಲಿ ನಡೆಯುತ್ತಿದೆ. ಟೀಮ್ ಇಂಡಿಯಾ ಉಪನಾಯಕ ಮತ್ತು ವಿಕೆಟ್ ಕೀಪರ್ ರಿಷಭ್ ಪಂತ್ ಮೊದಲ ದಿನದಾಟದಂದು ಬ್ಯಾಟಿಂಗ್ ಮಾಡುವಾಗ ಗಂಭೀರವಾಗಿ ಗಾಯಗೊಂಡಿದ್ದಾರೆ. ಇಂಗ್ಲೆಂಡ್ ವೇಗಿ ಕ್ರಿಸ್ ವೋಕ್ಸ್ ಎಸೆದ ಚೆಂಡನ್ನು ರಿವರ್ಸ್ ಸ್ವೀಪ್ ಮಾಡಲು ಪ್ರಯತ್ನಿಸಿದರು. ಆದರೆ, ಚೆಂಡು ಬ್ಯಾಟ್‌ನ ಅಂಚಿಗೆ ತಾಗಿ, ಪಂತ್ ಅವರ ಬಲಗಾಲಿಗೆ ಬಡಿಯಿತು. ಇದರಿಂದಾಗಿ, ಪಂತ್ ತೀವ್ರ ನೋವಿನಿಂದ ಬಳಲುತ್ತಿದ್ದಾರೆ.
ಪಂತ್ ಕಾಲಿಗೆ ಏಟು ಬಿದ್ದ ಕೂಡಲೇ ಮೈದಾನಕ್ಕೆ ಧಾವಿಸಿದ ಫಿಸಿಯೋ, ಪಂತ್‌ಗೆ ಪ್ರಥಮ ಚಿಕಿತ್ಸೆ ನೀಡಿದರು. ಈ ವೇಳೆ ಪಂತ್ ಅವರ ಕಾಲು ಊದಿಕೊಂಡು ರಕ್ತಸ್ರಾವವಾಗುತ್ತಿರುವುದು ಕ್ಯಾಮೆರಾದಲ್ಲಿ ಕಂಡುಬಂದಿದೆ. ನೋವು ತೀವ್ರವಾಗಿದ್ದರಿಂದ ಪಂತ್ ತಮ್ಮ ಆಟವನ್ನು ಅರ್ಧಕ್ಕೆ ಮೊಟಕುಗೊಳಿಸಿ, ನಿವೃತ್ತರಾದರು. ನಡೆಯಲು ಸಹ ಅವರಿಂದ ಸಾಧ್ಯವಾಗಲಿಲ್ಲ. ಹೀಗಾಗಿ ಪಂತ್ ಅವರನ್ನು ಗಾಲ್ಫ್ ಕಾರ್ಟ್‌ನಲ್ಲಿ ಮೈದಾನದಿಂದ ಹೊರಗೆ ಕರೆದೊಯ್ಯಲಾಯಿತು. ಬಳಿಕ ಸ್ಕ್ಯಾನ್‌ಗಾಗಿ ಆಸ್ಪತ್ರೆಗೆ ಕರೆದೊಯ್ದರು.
ಪಂತ್ ಗಾಯದ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಇಲ್ಲ. ಎರಡನೇ ದಿನ ಅವರು ಬ್ಯಾಟಿಂಗ್ ಮಾಡುತ್ತಾರೆಯೇ? ಅದರ ಬಗ್ಗೆ ಇನ್ನೂ ಸಂದೇಹವಿದೆ. ಒಂದು ವೇಳೆ ಪಂತ್ ಅವರ ಗಾಯ ಗಂಭೀರವಾಗಿದ್ದರೆ ಮತ್ತು ಎರಡನೇ ದಿನ ಅವರು ಬ್ಯಾಟಿಂಗ್ ಮಾಡಲು ಬಾರದಿದ್ದರೆ, ಭಾರತ ತಂಡಕ್ಕೆ ಗಂಭೀರ ಹಿನ್ನಡೆ ಎಂದು ಹೇಳಬಹುದು. ಈ ಸಂದರ್ಭದಲ್ಲಿ, ಪಂತ್ ಸ್ಥಾನದಲ್ಲಿ ಬೇರೆ ಆಟಗಾರ ಬ್ಯಾಟಿಂಗ್ ಮಾಡಬಹುದೇ ಎಂಬ ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಮೂಡಿದೆ. ಈ ವಿಚಾರದಲ್ಲಿ ಐಸಿಸಿ ನಿಯಮಗಳು ಏನು ಹೇಳುತ್ತವೆ ಎಂಬುದನ್ನು ನಾವೀಗ ನೋಡೋಣ.
ಐಸಿಸಿಯ ಕನ್ಕ್ಯುಶನ್ ಬದಲಿ ವ್ಯವಸ್ಥೆಯಡಿಯಲ್ಲಿ, ತಲೆಗೆ ಗಾಯವಾದಾಗ ಮಾತ್ರ ಆಟಗಾರನನ್ನು ಬದಲಾಯಿಸಬಹುದು. ಆ ಆಟಗಾರ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಮಾಡಬಹುದು. ಆದಾಗ್ಯೂ, ಪಂತ್ ಕಾಲಿಗೆ ಗಾಯವಾಗಿರುವುದರಿಂದ, ಅವರನ್ನು ಬದಲಾಯಿಸಲಾಗುವುದಿಲ್ಲ. ಇದರರ್ಥ ಬೇರೆ ಯಾವುದೇ ಆಟಗಾರ ಬ್ಯಾಟಿಂಗ್ ಮಾಡಲು ಸಾಧ್ಯವಿಲ್ಲ. ಆದರೆ, ಅವರ ಸ್ಥಾನದಲ್ಲಿ ಬದಲಿ ಫೀಲ್ಡರ್ ಅನ್ನು ಬಳಸಬಹುದು. ಆಟಗಾರನು ಅಂಪೈರ್‌ಗಳ ಅನುಮತಿಯೊಂದಿಗೆ ಮಾತ್ರ ಫೀಲ್ಡಿಂಗ್ ಮತ್ತು ವಿಕೆಟ್ ಕೀಪಿಂಗ್ ಮಾಡಬಹುದು. ಪಂತ್ ಆಡಲು ಸಾಧ್ಯವಾಗದಿದ್ದರೆ, ಧ್ರುವ್ ಜುರೆಲ್ ವಿಕೆಟ್ ಕೀಪಿಂಗ್ ಮಾಡುವ ಸಾಧ್ಯತೆಯಿದೆ.
ಈಗಾಗಲೇ ಟೀಮ್ ಇಂಡಿಯಾ ಗಾಯಾಳುಗಳಿಂದ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದೆ. ಇದೀಗ ಪಂತ್ ಕೂಡ ಗಾಯಗೊಂಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಇನ್ನು ಪಂದ್ಯದ ವಿಚಾರಕ್ಕೆ ಬಂದರೆ, ನಿನ್ನೆಯಿಂದ (ಜುಲೈ 23) ಆರಂಭವಾಗಿರುವ 4ನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆರಂಭಿಸಿರುವ ಭಾರತ ಮೊದಲ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 264 ರನ್ ಗಳಿಸಿದೆ. ಸದ್ಯ ರವೀಂದ್ರಾ ಜಡೇಜಾ (19) ಹಾಗೂ ಶಾರ್ದೂಲ್ ಠಾಕೂರ್ (19) ಕ್ರೀಸ್ ಕಾಯ್ದುಕೊಂಡಿದ್ದಾರೆ. (ಏಜೆನ್ಸೀಸ್)