

ತಮಿಳುನಾಡು: ಇಲ್ಲಿನ ಚೇಪಾಕ್ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ತಂಡದ ಅತ್ಯುತ್ತಮ ಪ್ರದರ್ಶನದ ಮೂಲಕ ಬಾಂಗ್ಲಾ ಪಡೆಯನ್ನು ಬಗ್ಗುಬಡಿದ ಟೀಮ್ ಇಂಡಿಯಾ, 280 ರನ್ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿತು. ಮೊದಲ ದಿನದ ಇನ್ನಿಂಗ್ಸ್ನಲ್ಲಿ ಟೀಮ್ನ ಪರ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ, ಶತಕ ಬಾರಿಸಿದ ಆರ್. ಅಶ್ವಿನ್, ಎರಡನೇ ದಿನದಂದು 6 ವಿಕೆಟ್ಗಳನ್ನು ಕಬಳಿಸಿ ಟೀಮ್ ಇಂಡಿಯಾ ಗೆಲುವಿಗೆ ಪ್ರಮುಖ ಕಾರಣರಾಗಿ ಹೊರಹೊಮ್ಮಿದ್ದಾರೆ. ಇನ್ನು ಇದೇ ಪಂದ್ಯದಲ್ಲಿ ಮಿಂಚಿದ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ರಿಷಬ್ ಪಂತ್ ಇದೀಗ ಹೊಸ ದಾಖಲೆಗೆ ಸಾಕ್ಷಿಯಾಗಿರುವುದು ವಿಶೇಷ.
ಬಾಂಗ್ಲಾ ವಿರುದ್ಧದ ಎರಡನೇ ಇನ್ನಿಂಗ್ಸ್ನಲ್ಲಿ ಶತಕ ಬಾರಿಸಿದ ರಿಷಬ್ ಪಂತ್, ಟೀಮ್ ಇಂಡಿಯಾ ಕಂಡ ಶ್ರೇಷ್ಠ ನಾಯಕ, ಮಾಜಿ ಕ್ಯಾಪ್ಟನ್ ಎಂ.ಎಸ್. ಧೋನಿ ಅವರ ದಾಖಲೆಯನ್ನು ಸರಿಗಟ್ಟಿದರು. ಈ ಮೈಲಿಗಲ್ಲನ್ನು ಮಾಹಿ 90 ಪಂದ್ಯಗಳಲ್ಲಿ ತಲುಪಿದ್ದರೆ, ಪಂತ್ ಕೇವಲ 34 ರೆಡ್ ಬಾಲ್ ಮ್ಯಾಚ್ಗಳಲ್ಲಿ ಸಾಧಿಸಿದ್ದಾರೆ. ಇದು ಅನೇಕರಿಗೆ ಭಾರಿ ವಿಶೇಷ ಅನಿಸಿದ್ದು, ರಿಷಬ್ರನ್ನು ಧೋನಿಗೆ ಹೋಲಿಸಿ ಮಾತನಾಡಿದ್ದಾರೆ. ಟೀಮ್ ಇಂಡಿಯಾದ ಮುಂದಿನ ಧೋನಿ ಇವರೇ. ಕೀಪರ್-ಬ್ಯಾಟ್ಸ್ಮನ್ ಆಗಿ ಪಂತ್ ಧೋನಿ ಸ್ಥಾನವನ್ನು ತುಂಬಬಲ್ಲರು ಎಂಬ ಅಭಿಪ್ರಾಯಗಳು ಜಾಲತಾಣಗಳಲ್ಲಿ ವ್ಯಕ್ತವಾಗಿವೆ. ಸದ್ಯ ಇದಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗಳಿಗೆ ರಿಷಬ್ ಕೊಟ್ಟ ಉತ್ತರ ಹೀಗಿದೆ.
"ದಯವಿಟ್ಟು ನನ್ನನ್ನು ಮಹೇಂದ್ರ ಸಿಂಗ್ ಧೋನಿ ಅವರಿಗೆ ಹೋಲಿಸಬೇಡಿ. ನಾವು ಆಡಿದ ಈ ಪಂದ್ಯ 'ಕ್ಯಾಪ್ಟನ್ ಕೂಲ್' ಅವರ ಚೆನ್ನೈ ಸೂಪರ್ ಕಿಂಗ್ಸ್ ತವರೂರು. ಇಲ್ಲಿ ಮಾಹಿ ಬಾಯ್ ಅದೆಷ್ಟೋ ಪಂದ್ಯಗಳನ್ನಾಡಿದ್ದಾರೆ. ನಾನು ನಾನಾಗಿರಲು ಬಯಸುತ್ತೇನೆ ಹೊರತು ಧೋನಿ ಸ್ಥಾನವನ್ನು ಅಥವಾ ಅವರಂತೆ ನಾನು ಎಂದು ಊಹಿಸಿಕೊಳ್ಳುವುದಿಲ್ಲ. ಇದರ ಬಗ್ಗೆ ಜನ ಏನು ಹೇಳ್ತಿದ್ದಾರೆ ಅದು ಅವರವರ ಅಭಿಪ್ರಾಯ, ಅನಿಸಿಕೆಗಳು. ನನ್ನ ಕೆಲಸ ಉತ್ತಮ ಪ್ರದರ್ಶನ ನೀಡುವುದೇ ಅಷ್ಟೇ" ಎಂದು ಹೇಳಿದರು,(ಏಜೆನ್ಸೀಸ್).