ಇಂದು ಕರ್ನಾಟಕದ ತಂಡಕ್ಕೆ ಕನ್ನಡಿಗರ ಸವಾಲು; ಪ್ಲೇಆಫ್​ಗಾಗಿ ಆರ್‌ಸಿಬಿ-ಪಂಜಾಬ್ ಹೋರಾಟ

rcb vs pkjb web
Published on

ಮುಂಬೈ: ಸತತ 2 ಜಯದೊಂದಿಗೆ ಉತ್ತಮ ಲಯಕ್ಕೆ ಮರಳಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಮತ್ತು ಅಸ್ಥಿರ ನಿರ್ವಹಣೆಯಿಂದಾಗಿ ಒತ್ತಡಕ್ಕೆ ಸಿಲುಕಿರುವ ಪಂಜಾಬ್ ಕಿಂಗ್ಸ್ ತಂಡಗಳು ಐಪಿಎಲ್-15ರಲ್ಲಿ ಶುಕ್ರವಾರ ಮುಖಾಮುಖಿ ಆಗಲಿವೆ. ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯ ಪ್ಲೇಆಫ್​ ರೇಸ್‌ನಲ್ಲಿ ಹೆಚ್ಚಿನ ಬಲ ಪಡೆದುಕೊಳ್ಳುವ ದೃಷ್ಟಿಯಿಂದ ಉಭಯ ತಂಡಗಳಿಗೂ ಮಹತ್ವದ್ದಾಗಿದೆ.

ಕರ್ನಾಟಕದ ತಂಡವಾದ ಆರ್‌ಸಿಬಿ ಮತ್ತು ಕನ್ನಡಿಗರಾದ ಅನಿಲ್ ಕುಂಬ್ಳೆ ಮಾರ್ಗದರ್ಶನ, ಮಯಾಂಕ್ ಅಗರ್ವಾಲ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡಗಳು ಟೂರ್ನಿಯಲ್ಲಿ ಪರಸ್ಪರ ಮುಖಾಮುಖಿಯ ಮೂಲಕವೇ ಅಭಿಯಾನ ಆರಂಭಿಸಿದ್ದವು. ಆ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಗೆದ್ದಿದ್ದರೂ ಸದ್ಯ ಆರ್‌ಸಿಬಿ ತಂಡವೇ ಅದಕ್ಕಿಂತ ಸುಸ್ಥಿತಿಯಲ್ಲಿದೆ. ಆರ್‌ಸಿಬಿ ಇದುವರೆಗೆ ಆಡಿದ 12ರಲ್ಲಿ 7ರಲ್ಲಿ ಗೆದ್ದು 5ರಲ್ಲಿ ಸೋತಿದ್ದರೆ, ಪಂಜಾಬ್ ತಂಡ 11ರಲ್ಲಿ 5ರಲ್ಲಿ ಗೆದ್ದು, 6ರಲ್ಲಿ ಸೋತಿದೆ. ಹೀಗಾಗಿ ಫಾಫ್​ ಡು ಪ್ಲೆಸಿಸ್ ಬಳಗಕ್ಕೆ ಸೇಡು ತೀರಿಸಿಕೊಳ್ಳಲು ಉತ್ತಮ ಅವಕಾಶ ಎದುರಾಗಿದೆ.

ಪ್ಲೇಆಫ್​ ಲೆಕ್ಕಾಚಾರ

ಆರ್‌ಸಿಬಿ: ಈ ಪಂದ್ಯ ಗೆದ್ದರೆ ಆರ್‌ಸಿಬಿ ಪ್ಲೇಆಫ್​ ಹಾದಿ ಸುಗಮವಾಗಲಿದೆ. ಬಳಿಕ ಕೊನೇ ಪಂದ್ಯದಲ್ಲೂ ಗೆದ್ದರೆ ಪ್ಲೇಆ್ ಸ್ಥಾನ ಖಚಿತವಾಗಲಿದೆ. ಒಂದು ವೇಳೆ ಈ ಪಂದ್ಯ ಸೋತರೆ, ಆರ್‌ಸಿಬಿ ತನ್ನ ಕೊನೇ ಪಂದ್ಯದಲ್ಲಿ ಅಗ್ರಸ್ಥಾನಿ ಗುಜರಾತ್ ಟೈಟಾನ್ಸ್ ವಿರುದ್ಧ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಲಿದೆ. ಜತೆಗೆ ಡೆಲ್ಲಿ, ಸನ್‌ರೈಸರ್ಸ್‌, ಪಂಜಾಬ್, ರಾಜಸ್ಥಾನ ಪೈಕಿ 3 ತಂಡವಾದರೂ ಇನ್ನೊಂದು ಸೋಲು ಕಾಣಲಿ ಅಥವಾ ರನ್‌ರೇಟ್‌ನಲ್ಲಿ ತನಗಿಂತ ಹಿಂದುಳಿಯಲಿ ಎಂದು ಪ್ರಾರ್ಥಿಸಬೇಕಾಗುತ್ತದೆ.

ಪಂಜಾಬ್ ಕಿಂಗ್ಸ್: ಪ್ಲೇಆಫ್​ ಆಸೆ ಜೀವಂತಕ್ಕೆ ಪಂಜಾಬ್ ತನ್ನ ಉಳಿದ ಮೂರೂ ಪಂದ್ಯಗಳಲ್ಲಿ ಆರ್‌ಸಿಬಿ, ಡೆಲ್ಲಿ, ಸನ್‌ರೈಸರ್ಸ್‌ ವಿರುದ್ಧ ಗೆಲ್ಲಬೇಕು. ಜತೆಗೆ ಇತರ ಫಲಿತಾಂಶಗಳು ಪೂರಕವಾಗಿ ಬರಬೇಕು ಮತ್ತು ರನ್‌ರೇಟ್ ಕೂಡ ಸುಧಾರಿಸಿಕೊಳ್ಳಬೇಕು.

ಟೀಮ್ ನ್ಯೂಸ್

ಆರ್‌ಸಿಬಿ: ವೇಗಿ ಮೊಹಮದ್ ಸಿರಾಜ್ ಇದುವರೆಗೆ ಆಡಿದ 12 ಪಂದ್ಯಗಳಲ್ಲಿ 8 ವಿಕೆಟ್ ಮಾತ್ರ ಗಳಿಸಿದ್ದಾರೆ ಮತ್ತು 9.44ರ ಎಕಾನಮಿಯಲ್ಲಿ 43 ಓವರ್‌ಗಳಲ್ಲಿ 406 ರನ್ ಬಿಟ್ಟುಕೊಟ್ಟಿದ್ದಾರೆ. ಹೀಗಾಗಿ ಅವರನ್ನು ಕೈಬಿಟ್ಟು ಸಿದ್ಧಾರ್ಥ್ ಕೌಲ್ ಅಥವಾ ಚಾಮ ಮಿಲಿಂದ್‌ಗೆ ಅವಕಾಶ ನೀಡಬಹುದು.

ಕಳೆದ ಪಂದ್ಯ: ಸನ್‌ರೈಸರ್ಸ್‌ ವಿರುದ್ಧ 67 ರನ್ ಜಯ.

ಪಂಜಾಬ್ ಕಿಂಗ್ಸ್: ರಾಹುಲ್ ಚಹರ್‌ಗೆ ಸಾಥ್ ನೀಡಲು 2ನೇ ಸ್ಪಿನ್ನರ್ ಆಗಿ ಹರ್‌ಪ್ರೀತ್ ಬ್ರಾರ್ ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಅವರಿಗೆ ಸಂದೀಪ್ ಶರ್ಮ ಅಥವಾ ರಿಷಿ ಧವನ್ ಸ್ಥಾನ ಬಿಟ್ಟುಕೊಡಬಹುದು.

ಕಳೆದ ಪಂದ್ಯ: ರಾಜಸ್ಥಾನ ವಿರುದ್ಧ 6 ವಿಕೆಟ್ ಸೋಲು.

ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ಮುಖಾಮುಖಿ: 29

ಆರ್‌ಸಿಬಿ: 13

ಪಂಜಾಬ್: 16

ಕಳೆದ ಮುಖಾಮುಖಿ: ಪಂಜಾಬ್ ಕಿಂಗ್ಸ್‌ಗೆ 5 ವಿಕೆಟ್ ಜಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net