ಒಂದೇ ಪಂದ್ಯದಲ್ಲಿ ಒಂದಲ್ಲ, ಎರಡಲ್ಲ... ಐತಿಹಾಸಿಕ ದಾಖಲೆಗಳನ್ನು ಬರೆದ ರೋಹಿತ್​ ಶರ್ಮಾ

Rohit Sharma
Published on

ನ್ಯೂಯಾರ್ಕ್​: ಇಲ್ಲಿನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಟಿ-20 ವಿಶ್ವಕಪ್​ನ 08ನೇ ಪಂದ್ಯದಲ್ಲಿ ಅಲ್ರೌಂಡ್​ ಪ್ರದರ್ಶನದ ಫಲವಾಗಿ ಐರ್ಲೆಂಡ್​ ವಿರುದ್ಧ 08 ವಿಕೆಟ್​ಗಳ ಭರ್ಜರಿ ಜಯಗಳಿಸಿದೆ. ಇನ್ನೂ ಟೀಮ್​ ಇಂಡಿಯಾವನ್ನು ಯಶಸ್ವಿಯಾಗಿ ಮುನ್ನಡೆಸಿದ ಕ್ಯಾಪ್ಟನ್​ ರೋಹಿತ್​ ಶರ್ಮಾ ಟಿ20 ಕ್ರಿಕೆಟ್​ನಲ್ಲಿ ಮೂರು ಐತಿಹಾಸಿಕ ದಾಖಲೆಗಳನ್ನು ಬರೆದಿದ್ದಾರೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ ತಂಡವನ್ನು ಇನ್ನಿಲ್ಲದಂತೆ ಕಾಡಿದ ಟೀಮ್ ಇಂಡಿಯಾ ಬೌಲರ್ಗಳು ಎದುರಾಳಿ ತಂಡವನ್ನು 97ರನ್​ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. 98 ರನ್​ಗಳ ಸುಲಭ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ ಪರ ನಾಯಕ ರೋಹಿತ್ ಶರ್ಮಾ (52 ರನ್, 37 ಎಸೆತ, 4 ಬೌಂಡರಿ, 3 ಸಿಕ್ಸರ್), ರಿಷಭ್ ಪಂತ್ (36 ರನ್, 26 ಎಸೆತ, 3 ಬೌಂಡರಿ, 2 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಫಲವಾಗಿ ಗುರಿಯನ್ನು 12.2 ಓವರ್ಗಳಲ್ಲಿ ತಲುಪುವ ಮೂಲಕ ಗೆಲುವಿನ ನಗೆ ಬೀರಿತ್ತು.

ರೋಹಿತ್ ಕ್ಯಾಪ್ಟನ್ಸಿಯಲ್ಲಿ ಐರ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ಗೆಲ್ಲುವ ಮೂಲಕ ವಿಶ್ವಕಪ್​ ಅಭಿಯಾನವನ್ನು ಭರ್ಜರಿಯಾಗಿ ಶುರು ಮಾಡಿರುವ ಟೀಮ್​ ಇಂಡಿಯಾದ ಎಲ್ಲಾ ಆಟಗಾರರು ಫಾರ್ಮ್​ನಲ್ಲಿರುವುದು ತಂಡಕ್ಕೆ ಹೆಚ್ಚು ಸಹಕಾರಿಯಾಗಿದೆ. ಕ್ಯಾಪ್ಟನ್​ ಆಗಿ ತಮ್ಮ ಬ್ಯಾಟಿಂಗ್​ ಮೂಲಕ ಅತ್ಯುತಮ್ಮ ಪ್ರದರ್ಶನ ನೀಡುತ್ತಿರುವ ಹಿಟ್​ಮ್ಯಾನ್​ ಖ್ಯಾತಿಯ ರೋಹಿತ್​ ಶರ್ಮಾ ಇದೀಗ ಟಿ20 ಕ್ರಿಕೆಟ್​ನಲ್ಲಿ ಮೂರು ಐತಿಹಾಸಿಕ ದಾಖಲೆಗಳನ್ನು ಬರೆದಿದ್ದಾರೆ. ಅದು ಒಂದೇ ಪಂದ್ಯದಲ್ಲಿ ಎಂಬುದು ವಿಶೇಷ ಸಂಗತಿಯಾಗಿದೆ.

Rohit Sharma

ಐರ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಗಳಿಸುವ ಮೂಲಕ ಟಿ20 ಕ್ರಿಕೆಟ್​ನಲ್ಲಿ 4000 ರನ್​ ಪೂರೈಸಿದ ವಿಶ್ವದ ಮೂರನೇ ಬ್ಯಾಟ್ಸ್​ಮನ್​ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ರೋಹಿತ್​ಗೂ ಮುನ್ನ ವಿರಾಟ್ ಕೊಹ್ಲಿ (4,037 ರನ್) ಮತ್ತು ಬಾಬರ್ ಅಜಮ್ (4,023 ರನ್) ಮುಂಚೂಣಿಯಲ್ಲಿದ್ದಾರೆ. ಇದಲ್ಲದೆ ಟಿ-20 ವಿಶ್ವಕಪ್​ನಲ್ಲಿ 1000ರನ್​ ಪೂರೈಸಿದ ಮೂರನೇ ಬ್ಯಾಟ್ಸ್​ಮನ್​ ಎಂಬ ಹೆಗ್ಗಳಿಕೆಗೆ ರೋಹಿತ್​ ಪಾತ್ರರಾಗಿದ್ದಾರೆ. ರೋಹಿತ್​ಗೂ ಮುನ್ನ ವಿರಾಟ್ (1,141 ರನ್) ಮತ್ತು ಶ್ರೀಲಂಕಾದ ಮಾಜಿ ಆಟಗಾರ ಮಹೇಲಾ ಜಯವರ್ಧನೆ (1,016 ರನ್) ಈ ಸಾಧನೆ ಮಾಡಿದ್ದಾರೆ.

ಟೀಮ್​ ಇಂಡಿಯಾ ಎಲ್ಲಾ ಮಾದರಿಗಳಲ್ಲಿ 600 ಸಿಕ್ಸರ್​ಗಳನ್ನು ಸಿಡಿಸಿದ ಬ್ಯಾಟ್ಸ್​ಮನ್​ ಎಂಬ ಹೆಗ್ಗಳಿಕೆಗೆ ರೋಹಿತ್​ ಶರ್ಮಾ ಪಾತ್ರರಾಗಿದ್ದಾರೆ. ಈ  ಮೈಲಿಗಲ್ಲನ್ನು ತಲುಪಿದ ವಿಶ್ವದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಲ್ಲದೆ ಐಸಿಸಿ ನಡೆಸುವ ಸೀಮಿತ ಓವರ್​ಗಳ ಟೂರ್ನಿಯಲ್ಲಿ 100 ಸಿಕ್ಸರ್​ ಸಿಡಿಸಿದ ಮೊದಲ ಬ್ಯಾಟ್ಸ್​ಮನ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇನ್ನು ಟಿ20 ವಿಶ್ವಕಪ್​ನ ಮೊದಲ ಪಂದ್ಯದಲ್ಲಿ ಐರ್ಲೆಂಡ್​ ತಂಡವನ್ನು ಮಣಿಸುವ ಮೂಲಕ ರೋಹಿತ್​ ಶರ್ಮಾ ಕ್ಯಾಪ್ಟನ್ ಆಗಿ ಇಂಟರ್​ನ್ಯಾಷನಲ್​ ಟಿ20 ಪಂದ್ಯಗಳಲ್ಲಿ 41 ಗೆಲುವು ಸಾಧಿಸಿದ ಎಂ.ಎಸ್. ಧೋನಿ ಅವರ ದಾಖಲೆಯನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net