

ಬೆಂಗಳೂರು: ಮುಂಬರುವ ಏಕದಿನ ವಿಶ್ವಕಪ್ನಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡದ ಬಲ ಹೆಚ್ಚಿಸುವ ಸಲುವಾಗಿ ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಮರಳಿ ಕಣಕ್ಕಿಳಿಯುತ್ತಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಟೆಸ್ಟ್-ಟಿ20 ಕ್ರಿಕೆಟ್ನತ್ತ ಗಮನ ಕೇಂದ್ರೀಕರಿಸುವ ಸಲುವಾಗಿ ಏಕದಿನ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದ ಸ್ಟೋಕ್ಸ್ ಬಳಿಕ ಇಂಗ್ಲೆಂಡ್ ತಂಡದ ಟೆಸ್ಟ್ ನಾಯಕರಾಗಿಯೂ ಉತ್ತಮ ಯಶಸ್ಸು ಕಂಡಿದ್ದರು ಮತ್ತು ಕಳೆದ ವರ್ಷ ಟಿ20 ವಿಶ್ವಕಪ್ ಗೆದ್ದ ಇಂಗ್ಲೆಂಡ್ ತಂಡದ ಭಾಗವೂ ಆಗಿದ್ದರು. ಇದೀಗ, 2019ರಲ್ಲಿ ಗೆದ್ದ ಏಕದಿನ ವಿಶ್ವಕಪ್ ಉಳಿಸಿಕೊಳ್ಳಲು ಇಂಗ್ಲೆಂಡ್ ತಂಡಕ್ಕೆ ನೆರವಾಗುವ ಸಲುವಾಗಿ ಅವರು ಜೋಸ್ ಬಟ್ಲರ್ ಪಡೆಯನ್ನು ಸೇರಿಕೊಂಡಿದ್ದಾರೆ. ಈ ರೀತಿಯಾಗಿ ವಿಶ್ವಕಪ್ನಲ್ಲಿ ಆಡುವ ಸಲುವಾಗಿ ನಿವೃತ್ತಿಯನ್ನು ಹಿಂಪಡೆದು ತಂಡ ಸೇರಿಕೊಳ್ಳುತ್ತಿರುವ ಕ್ರಿಕೆಟಿಗರಲ್ಲಿ ಸ್ಟೋಕ್ಸ್ ಮೊದಲಿಗರೇನಲ್ಲ. ಅಂಥ ಕೆಲ ಆಟಗಾರರ ವಿವರ ಇಲ್ಲಿದೆ...
ಇಮ್ರಾನ್ ಖಾನ್ (ಪಾಕಿಸ್ತಾನ)
ಪಾಕಿಸ್ತಾನದ ದಿಗ್ಗಜ ನಾಯಕ, ಆಲ್ರೌಂಡರ್ ಹಾಗೂ ಮಾಜಿ ಪ್ರಧಾನಿಯೂ ಆಗಿರುವ ಇಮ್ರಾನ್ ಖಾನ್ 1992ರ ಏಕದಿನ ವಿಶ್ವಕಪ್ನಲ್ಲಿ ಆಡುವ ಸಲುವಾಗಿ ನಿವೃತ್ತಿಯನ್ನು ಹಿಂಪಡೆದಿದ್ದರು. 1987ರ ಏಕದಿನ ವಿಶ್ವಕಪ್ ಬೆನ್ನಲ್ಲೇ ಇಮ್ರಾನ್ ಖಾನ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದರು. ಆದರೆ 1988ರಲ್ಲಿ ಆಗಿನ ಪಾಕ್ ಅಧ್ಯಕ್ಷ ಜಿಯಾ ಉಲ್ ಹಕ್ ಮನವಿಯ ಮೇರೆಗೆ ಇಮ್ರಾನ್ ಖಾನ್ ನಿವೃತ್ತಿಯನ್ನು ವಾಪಸ್ ಪಡೆದಿದ್ದರು. ಬಳಿಕ 1992ರ ವಿಶ್ವಕಪ್ನಲ್ಲಿ ಪಾಕಿಸ್ತಾನ ತಂಡದ ನಾಯಕತ್ವವನ್ನೂ ವಹಿಸಿದ್ದ ಇಮ್ರಾನ್ ಪ್ರಶಸ್ತಿ ಗೆದ್ದು ಅಮೋಘ ರೀತಿಯಲ್ಲಿ 2ನೇ ಬಾರಿಗೆ ವಿದಾಯ ಸಾರಿದರು.
ಶಾಹಿದ್ ಅಫ್ರಿದಿ (ಪಾಕಿಸ್ತಾನ)
ಪಾಕಿಸ್ತಾನದ ಮಾಜಿ ನಾಯಕ ಹಾಗೂ ಆಲ್ರೌಂಡರ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಘೋಷಿಸಿದ ನಿವೃತ್ತಿಯನ್ನು ಒಟ್ಟು 5 ಬಾರಿ ಹಿಂಪಡೆದಿದ್ದಾರೆ. 2011ರ ವಿಶ್ವಕಪ್ ಬಳಿಕ ನಿವೃತ್ತಿ ಪ್ರಕಟಿಸಿದ್ದ ಅಫ್ರಿದಿ ನಂತರ 2015ರ ವಿಶ್ವಕಪ್ ಅಡುವ ಸಲುವಾಗಿ ಪಾಕಿಸ್ತಾನ ತಂಡಕ್ಕೆ ಮರಳಿದ್ದರು. ಇದಕ್ಕೆ ಮುನ್ನ 2006ರಲ್ಲಿ ಟೆಸ್ಟ್ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದ ಅವರು, 2010ರಲ್ಲಿ ಮತ್ತೆ ಟೆಸ್ಟ್ ಆಡಿದ್ದರು. 2017ರಲ್ಲಿ ಕೊನೆಗೂ ಅವರು ಎಲ್ಲ ಮಾದರಿಯ ಕ್ರಿಕೆಟ್ಗೆ ವಿದಾಯ ಹೇಳಿದ್ದರು.
ಡ್ವೇನ್ ಬ್ರಾವೊ (ವೆಸ್ಟ್ ಇಂಡೀಸ್)
ವೆಸ್ಟ್ ಇಂಡೀಸ್ ಆಲ್ರೌಂಡರ್ ಡ್ವೇನ್ ಬ್ರಾವೊ 2018ರ ಅಕ್ಟೋಬರ್ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದರು. ಆದರೆ 2019ರಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯ ಮನವಿಯ ಮೇರೆಗೆ ಮನಸ್ಸು ಬದಲಾಯಿಸಿದ್ದ ಅವರು, 2021ರ ಟಿ20 ವಿಶ್ವಕಪ್ ವೇಳೆ ಮತ್ತೆ ತಂಡಕ್ಕೆ ಮರಳಿ ಆಡಿದ್ದರು.
ತಮೀಮ್ ಇಕ್ಬಾಲ್ (ಬಾಂಗ್ಲಾದೇಶ)
ಬಾಂಗ್ಲಾದೇಶದ ಎಡಗೈ ಆರಂಭಿಕ ತಮೀಮ್ ಇಕ್ಬಾಲ್ ಇತ್ತೀಚೆಗೆ ವಿಶ್ವಕಪ್ ಪೂರ್ವಭಾವಿಯಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಪ್ರಕಟಿಸಿದ್ದರು. ಆದರೆ, ಬಾಂಗ್ಲಾ ಪ್ರಧಾನಿ ಶೇಕ್ ಹಸೀನಾ ಮನವಿಯ ಮೇರೆಗೆ ಮರುದಿನವೇ ನಿರ್ಧಾರವನ್ನು ಬದಲಾಯಿಸಿದ್ದ ತಮೀಮ್, ಏಕದಿನ ವಿಶ್ವಕಪ್ ತಂಡದ ಆಯ್ಕೆಗೆ ಲಭ್ಯವಿರುವುದಾಗಿ ತಿಳಿಸಿದ್ದರು. ಆದರೆ ಬಾಂಗ್ಲಾ ಏಕದಿನ ತಂಡದ ನಾಯಕತ್ವವನ್ನು ಮರಳಿ ಸ್ವೀಕರಿಸಲು ನಿರಾಕರಿಸಿದ್ದರು.