

ನವದೆಹಲಿ: ಸತತ ಎರಡು ಸೋಲಿನ ಬಳಿಕ ಗೆಲುವಿನ ಹಳಿ ಏರಿರುವ ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ತನ್ನ 5ನೇ ಪಂದ್ಯದಲ್ಲಿ ಬುಧವಾರ ನೆದರ್ಲೆಂಡ್ ತಂಡವನ್ನು ಎದುರಿಸಲಿದೆ. ಪ್ಯಾಟ್ ಕಮ್ಮಿನ್ಸ್ ಪಡೆ ಹ್ಯಾಟ್ರಿಕ್ ಜಯದ ತವಕದಲ್ಲಿದೆ.
ಮೊದಲೆರಡು ಪಂದ್ಯಗಳಲ್ಲಿ ನೀರಸ ನಿರ್ವಹಣೆಯೊಂದಿಗೆ ಟೂರ್ನಿ ಆರಂಭಿಸಿದ ಆಸೀಸ್ ಬಳಿಕ ಆಡಿದ 2 ಪಂದ್ಯಗಳಲ್ಲಿ ಭರ್ಜರಿ ಗೆಲುವು ದಾಖಲಿಸಿದೆ. ಪಾಕ್ ವಿರುದ್ಧದ ಪ್ರದರ್ಶನ ಆಸೀಸ್‌ಗೆ ಹೆಚ್ಚಿನ ಬಲ ತಂದಿದೆ. ಡೇವಿಡ್ ವಾರ್ನರ್ ಮತ್ತು ಮಿಚೆಲ್ ಮಾರ್ಷ್ ಫಾರ್ಮ್‌ಗೆ ಮರಳಿರುವುದು ಆಸ್ಟ್ರೇಲಿಯಾಕ್ಕೆ ಪ್ಲಸ್ ಎನಿಸಿದೆ. ಸ್ಟೀವನ್ ಸ್ಮಿತ್ ಸತತ ವೈಲ್ಯ ಅನುಭವಿಸಿದ್ದಾರೆ. ಟೂರ್ನಿಯ 4 ಪಂದ್ಯಗಳಲ್ಲಿ ಒಮ್ಮೆ ಮಾತ್ರ 30ರ ಗಡಿ ದಾಟಿದ್ದಾರೆ. ಟ್ರಾವಿಸ್ ಹೆಡ್ ಗೈರಿನಲ್ಲಿ ಆರಂಭಿಕನಾಗಿ ಬಡ್ತಿ ಪಡೆದ ಮಿಚೆಲ್ ಮಾರ್ಷ್ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಇನ್ನು ಗಾಯಾಳು ಟ್ರಾವಿಸ್ ಹೆಡ್ ಚೇತರಿಸಿಕೊಂಡಿದ್ದು ತಂಡಕ್ಕೆ ಮರಳಿದ್ದಾರೆ. ಜತೆಗೆ ಹೆಚ್ಚುವರಿ ಆಫ್-ಸ್ಪಿನ್ ಆಯ್ಕೆ ಒದಗಿಸಬಲ್ಲ ಹೆಡ್‌ಗೆ ಲಬುಶೇನ್ ಸ್ಥಾನ ಬಿಟ್ಟುಕೊಡುವ ಸಾಧ್ಯತೆಗಳಿವೆ. ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೋಯಿನಿಸ್ ಸಾಮರ್ಥ್ಯ ಪ್ರದರ್ಶಿಸಬೇಕಿದೆ. ಸ್ಪಿನ್ನರ್ ಆಡಂ ಜಂಪಾಗೆ ವೇಗಿಗಳಾದ ಜೋಶ್ ಹ್ಯಾಸಲ್‌ವುಡ್ ಮತ್ತು ಮಿಚೆಲ್ ಸ್ಟಾರ್ಕ್ ಬೆಂಬಲ ಒದಗಿಸಿದ್ದಾರೆ. ಅಭ್ಯಾಸ ಪಂದ್ಯದಲ್ಲಿ ಡಚ್ಚರ ಎದುರು ಹ್ಯಾಟ್ರಿಕ್ ವಿಕೆಟ್ ಗಳಿಸಿದ್ದ ಸ್ಟಾರ್ಕ್ ವಿಶ್ವಕಪ್‌ನ ಸತತ 22 ಪಂದ್ಯದಲ್ಲಿ ವಿಕೆಟ್ ಪಡೆದು ಕನಸಿನ ಓಟ ಮುಂದುವರಿಸಿದ್ದಾರೆ.
ಅತ್ತ 12 ವರ್ಷಗಳ ಬ್ರೇಕ್ ಬಳಿಕ ವಿಶ್ವಕಪ್‌ಗೆ ಮರಳಿದ ನೆದರ್ಲೆಂಡ್ ತಂಡ, ಬಲಿಷ್ಠ ದಕ್ಷಿಣ ಆಫ್ರಿಕಾಕ್ಕೆ ಆಘಾತ ನೀಡುವ ಮೂಲಕ ಉತ್ತಮ ಪ್ರದರ್ಶನ ತೋರಿದೆ. ಆಸೀಸ್ ಎದುರು ಹಿಂದಿನ 2 ಮುಖಾಮುಖಿಯಲ್ಲಿ ಸುಲಭ ತುತ್ತಾದ ಹಿನ್ನಡೆ ಹೊಂದಿದೆ.
ವಿಶ್ವಕಪ್ ಮುಖಾಮುಖಿ-2
ಆಸ್ಟ್ರೇಲಿಯಾ-2
ನೆದರ್ಲೆಂಡ್-0
ಆರಂಭ-ಮಧ್ಯಾಹ್ನ 2
ನೇರಪ್ರಸಾರ- ಸ್ಟಾರ್ ಸ್ಪೋರ್ಟ್ಸ್.