

ಕೊಲಂಬೊ: ಏಷ್ಯಾಕಪ್ ಸೂಪರ್-4 ಹಂತದಲ್ಲಿ ಭಾರತ-ಪಾಕ್ ಪಂದ್ಯಕ್ಕೆ ಮಾತ್ರ ಮೀಸಲು ದಿನ ನಿಗದಿಪಡಿಸಿರುವ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ನಿರ್ಧಾರವನ್ನು ಜಂಟಿ ಆತಿಥೇಯ ಶ್ರೀಲಂಕಾ ಹಾಗೂ ಬಾಂಗ್ಲಾದೇಶದ ಕ್ರಿಕೆಟ್ ಮಂಡಳಿಗಳು ಬೆಂಬಲಿಸಿವೆ. ಎಸಿಸಿಯ ಇತರ 4 ಪ್ರಮುಖ ಸದಸ್ಯರ ಒಪ್ಪಿಗೆ ಪಡೆದೇ ಮೀಸಲು ದಿನ ನಿಗದಿಪಡಿಸಲಾಗಿದೆ ಎಂದು ಎಸ್‌ಎಲ್‌ಸಿ ಮತ್ತು ಬಿಸಿಬಿ ತಿಳಿಸಿವೆ. ಈ ಮುನ್ನ ನಮ್ಮ ಪಂದ್ಯಗಳಿಗೆ ಯಾಕೆ ಮೀಸಲು ದಿನ ನಿಗದಿಪಡಿಸಿಲ್ಲ ಎಂದು ಬಾಂಗ್ಲಾದ ಕೋಚ್ ಚಂಡಿಕಾ ಹತುರಸಿಂಘ ಮತ್ತು ಲಂಕಾ ಕೋಚ್ ಸಿಲ್ವರ್‌ವುಡ್ ಅಸಮಾಧಾನ ವ್ಯಕ್ತಪಡಿಸಿದ್ದರು.
ನಾವು ಸಹ ಹೆಚ್ಚುವರಿ ದಿನವನ್ನು ಹೊಂದಲು ಬಯಸುತ್ತೇವೆ. ಆದರೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ ಏಕೆಂದರೆ ಈಗಾಗಲೇ ಏಸಿಸಿ ಮೀಸಲು ದಿನದ ನಿರ್ಧಾರ ಮಾಡಿದ್ದಾರೆ. ನಮ್ಮನ್ನು ಮೊದಲೇ ಸಂಪರ್ಕಿಸಿದ್ದರೆ ಅಭಿಪ್ರಾಯವನ್ನು ತಿಳಿಸಲಾಗುತ್ತಿತ್ತು ಎಂದು ಬಾಂಗ್ಲಾದೇಶ ಮುಖ್ಯಕೋಚ್ ಚಂಡಿಕಾ ಹತುರುಸಿಂಘ ಅಸಮಾಧಾನ ಹೊರಹಾಕಿದ್ದರು.
ಮೊದಲು ಕೇಳಿದಾಗ ಸ್ವಲ್ಪ ಆಶ್ಚರ್ಯವಾಯಿತು, ಪ್ರತಿ ಪಂದ್ಯಗಳು ವಿಭಿನ್ನ ಆಟದ ಪರಿಸ್ಥಿತಿಗಳನ್ನು ಹೊಂದಿರುತ್ತವೆ ಎಂದು ಶ್ರೀಲಂಕಾದ ತರಬೇತುದಾರ ಸಿಲ್ವರ್ ವುಡ್ ಹೇಳಿದ್ದಾರೆ.
ಭಾರತ ಹಾಗೂ ಪಾಕ್ ನಡುವಿನ ಪಂದ್ಯದಕ್ಕೆ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ, ನಾಲ್ಕು ಕ್ರಿಕೆಟ್ ಮಂಡಳಿಗಳಿಂದ ಸರ್ವಾನುಮತದ ಒಪ್ಪಿಗೆ ಪಡೆದ ಬಳಿಕವೇ ಮಿಸಲು ದಿನ ನಿಗದಿಪಡಿಸಲಾಗಿದೆ ಎಂದು ಬಿಸಿಬಿ ತನ್ನ ಸಾಮಾಜಿಕ ಜಾಲತಾಣ ಖಾತೆ ‘ಎಕ್ಸ್’ನಲ್ಲಿ ಬರೆದುಕೊಂಡಿದೆ.