ನರೇಂದ್ರ ಮೋದಿ ಪ್ರಧಾನಿಯಾದ ಮೇಲೆಯೇ ಭಾರತ -ಪಾಕಿಸ್ತಾನ ನಡುವಿನ ಸಂಬಂಧ ಹದಗೆಟ್ಟಿದೆ, ಅವರೊಬ್ಬ ನೆಗೆಟಿವ್ ಥಿಂಕರ್​: ಶಾಹೀದ್​ ಅಫ್ರಿದಿ

Afridi 25 Feb 20
Published on

ಇಸ್ಲಮಾಬಾದ್​: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪಾಕಿಸ್ತಾನ ಮಾಜಿ ಕ್ರಿಕೆಟರ್​ ಶಾಹೀದ್​ ಅಫ್ರಿದಿ ವಾಗ್ದಾಳಿ ನಡೆಸಿದ್ದಾರೆ. ಮೋದಿ ಪ್ರಧಾನಿಯಾಗಿ ಅಧಿಕಾರದಲ್ಲಿ ಇರುವವರೆಗೂ ಭಾರತ ಮತ್ತು ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ಸರಣಿ ಒಪ್ಪಂದ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಪಾಕಿಸ್ತಾನ ಕ್ರಿಕೆಟ್​ನಿಂದ ಅಫ್ರಿದಿಯನ್ನು ಸಂದರ್ಶನ ಮಾಡಲಾಗಿತ್ತು. ಈ ವೇಳೆ ಭಾರತ ಹಾಗೂ ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಸರಣಿ ಪ್ರಾರಂಭ ಆಗಬಹುದು ಎಂದೆನಿಸುತ್ತಿದೆಯಾ ಎಂದು ಪ್ರಶ್ನೆ ಕೇಳಿದಾಗ ಉತ್ತರಿಸಿದ ಅವರು, ಭಾರತದಲ್ಲಿ ಮೋದಿ ಅಧಿಕಾರದಲ್ಲಿ ಇರುವವರೆಗೂ ಯಾವುದೇ ನಿರೀಕ್ಷೆ ಇಲ್ಲ. ಪಾಕಿಸ್ತಾನಕ್ಕೆ ಭಾರತದಿಂದ ಈ ಬಗ್ಗೆ ಪ್ರತಿಕ್ರಿಯೆ ಬರುವುದೂ ಇಲ್ಲ ಎಂದು ಹೇಳಿದರು.

2014ರಲ್ಲಿ ನರೇಂದ್ರ ಮೋದಿಯವರು ಪ್ರಧಾನಿ ಆಗಿ ಅಧಿಕಾರ ಪಡೆದಾಗಿನಿಂದ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಮತ್ತಷ್ಟು ಹಾಳಾಗಿದೆ ಎಂದು ಅಫ್ರಿದಿ ಆರೋಪಿಸಿದರು.

ಭಾರತೀಯರೂ ಸೇರಿ ನಾವೆಲ್ಲರೂ ನರೇಂದ್ರ ಮೋದಿಯವರ ಯೋಚನಾ ಲಹರಿಯನ್ನು ಅರ್ಥ ಮಾಡಿಕೊಂಡಿದ್ದೇವೆ. ಅವರು ಯಾವಾಗಲೂ ನೆಗೆಟಿವ್​ ಆಗಿಯೇ ಯೋಚಿಸುತ್ತಾರೆ. ಮೋದಿಯವರ ಕಾರ್ಯ ಸೂಚಿ ಏನು ಎಂಬುದೇ ಗೊತ್ತಾಗುತ್ತಿಲ್ಲ ಎಂದು ಹೇಳಿದರು.

ಭಾರತ ಮತ್ತು ಪಾಕಿಸ್ತಾನದ ನಡುವೆ 2012-13ರಲ್ಲಿ ಕೊನೇ ದ್ವಿಪಕ್ಷೀಯ ಸರಣಿ ನಡೆದಿದೆ. ಅದಾದ ಬಳಿಕ ಐಸಿಸಿ ಟೂರ್ನಿಯಲ್ಲಿ ಮಾತ್ರ ಇವೆರಡೂ ದೇಶಗಳು ಮುಖಾಮುಖಿ ಆಗಿವೆ. ಅದರಲ್ಲಿ ಭಾರತ ಪಾಕಿಸ್ತಾನಕ್ಕೆ ಹೋಗಿ ಆಡಿದ್ದು 2006ರಲ್ಲೇ ಕೊನೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net