

ನವದೆಹಲಿ: ಒಲಿಂಪಿಕ್ಸ್ ವೇಳೆ ಕೆಲವರು ನಿರಂತರವಾಗಿ ಮೊಬೈಲ್ ಬಳಸುತ್ತಿದ್ದನ್ನು ನಾನು ಗಮನಿಸಿದೆ. ಇದು ಸರಿಯೇ? ಕೆಲವರು ರೀಲ್ಸ್ ನೋಡುತ್ತಿದ್ದರು ಮತ್ತು ಕೆಲವರು ರೀಲ್ಸ್ ಮಾಡುತ್ತಿದ್ದರು ಎಂದು ಪ್ರಧಾನಿ ಮೋದಿ, ಭಾರತದ ಕ್ರೀಡಾಪಟುಗಳ ರೀಲ್ಸ್ ಬಗ್ಗೆ ಪರೋಕ್ಷವಾಗಿ ಆಕ್ಷೇಪ ಎತ್ತಿದರು. ಆಗ ಎಲ್ಲ ಕ್ರೀಡಾಪಟುಗಳು ಮೌನವಾಗಿದ್ದ ನಡುವೆ ಹಾಕಿ ತಂಡದ ನಾಯಕ ಹರ್ಮಾನ್ಪ್ರೀತ್, "ಸರ್ ನಮ್ಮ ತಂಡದ ಎಲ್ಲ ಆಟಗಾರರು ಒಲಿಂಪಿಕ್ಸ್ ವೇಳೆ ಮೊಬೈಲ್ ಬಳಸುತ್ತಿರಲಿಲ್ಲ. ಯಾಕೆಂದರೆ ಉತ್ತಮ ಮತ್ತು ಕೆಟ್ಟ ಕಾಮೆಂಟ್ಗಳು ನಮ್ಮ ನಿರ್ವಹಣೆ ಮೇಲೆ ಪರಿಣಾಮ ಬೀರುವ ಭೀತಿ ಇತ್ತು. ಹೀಗಾಗಿ ನಾವು ಸಾಮಾಜಿಕ ಜಾಲತಾಣದಿಂದ ದೂರವಿದ್ದೆವು' ಎಂದರು. ಆಗ ಮೋದಿ, ನೀವು ಉತ್ತಮ ಕೆಲಸ ಮಾಡಿದಿರಿ. ನಾನು ದೇಶದ ಎಲ್ಲ ಯುವಕರಿಗೂ ಮೊಬೈಲ್ನಿಂದ ದೂರವಿರುವಂತೆ ಕೇಳಿಕೊಳ್ಳುತ್ತೇನೆ. ಅದೇ ನಿಮಗೆ ಒಳ್ಳೆಯದು. ಹೆಚ್ಚಿನವರು ಅದರಲ್ಲೇ ಸಮಯ ವ್ಯರ್ಥಗೊಳಿಸುತ್ತಿದ್ದಾರೆ ಎಂದು ಮೋದಿ ಹೇಳಿದರು.
ಪ್ಯಾರಿಸ್ ಒಲಿಂಪಿಕ್ಸ್ ಭಾರತೀಯ ಕ್ರೀಡೆಯ ಟರ್ನಿಂಗ್ ಪಾಯಿಂಟ್
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾಗವಹಿಸಿದ ಭಾರತದ ಕ್ರೀಡಾಪಟುಗಳ ಜತೆಗೆ ಸ್ವಾತಂತ್ರ್ಯೋತ್ಸವದಂದು ಪ್ರಧಾನಿ ನರೇಂದ್ರ ಮೋದಿ ನಡೆಸಿರುವ ಸಂವಾದದ ವಿವರಗಳು ಶುಕ್ರವಾರ ಬಹಿರಂಗಗೊಂಡಿವೆ. ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತ ಟೊಕಿಯೊಗಿಂತ ಕಡಿಮೆ ಪದಕ ಗೆದ್ದಿದ್ದರೂ, ಇದು ಭಾರತೀಯ ಕ್ರೀಡೆಯ ಟರ್ನಿಂಗ್ ಪಾಯಿಂಟ್ ಆಗಲಿದೆ. ಭಾರತೀಯ ಕ್ರೀಡೆಯ ಉತ್ತುಂಗ ಇಲ್ಲಿಂದಲೇ ಶುರುವಾಗಲಿದೆ ಎಂದು ಮೋದಿ ಹೇಳಿದರು.
"ಸೋಲಿನೊಂದಿಗೆ ಮರಳಿರುವ ಕ್ರೀಡಾಪಟುಗಳು ಅದನ್ನು ತಲೆಯಿಂದ ತೆಗೆದುಹಾಕಿ. ನೀವು ದೇಶಕ್ಕೆ ಹೆಮ್ಮೆ ತಂದಿದ್ದೀರಿ. ನೀವು ಏನನ್ನಾದರು ಕಲಿತು ಮರಳಿದ್ದೀರಿ. ಕ್ರೀಡೆಯಲ್ಲಿ ಯಾರೂ ಸೋಲುವುದಿಲ್ಲ, ಎಲ್ಲರೂ ಕಲಿಯುತ್ತಾರೆ. ಇನ್ನು ಮುಂದೆ ನಮಗೆ ಬರೀ ಗೆಲುವಷ್ಟೇ ಎದುರಾಗಲಿದೆ. ನಾವು ಇಲ್ಲಿಗೆ ನಿಲ್ಲುವುದಿಲ್ಲ ಎಂದು ಮೋದಿ ಹೇಳಿದರು.
"ಭಾರತ 2036ರ ಒಲಿಂಪಿಕ್ಸ್ ಆತಿಥ್ಯಕ್ಕೆ ಸಿದ್ಧತೆ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಈಗಾಗಲೆ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಿರುವ ಕ್ರೀಡಾಪಟುಗಳ ಸಲಹೆಗಳು ಮಹತ್ವದ್ದಾಗಿವೆ. ನೀವು ಒಲಿಂಪಿಕ್ಸ್ನಲ್ಲಿ ಗಮನಿಸಿರುವ ಅಂಶಗಳು ನಮ್ಮ ಯೋಜನೆಗಳಿಗೆ ನೆರವಾಗಲಿವೆ. ನೀವೆಲ್ಲರೂ 2036ರ ಒಲಿಂಪಿಕ್ಸ್ಗೆ ನಮ್ಮ ಸೈನಿಕರಾಗಿರುತ್ತೀರಿ' ಎಂದು ಮೋದಿ ಹೇಳಿದರು.
ಎಸಿ ಇಲ್ಲದ್ದಕ್ಕೆ ಶಾಪ ಹಾಕಿದಿರಾ?
ಪ್ಯಾರಿಸ್ ಕ್ರೀಡಾಗ್ರಾಮದಲ್ಲಿ ಸಂಟಕರು ಎಸಿ ಅಳವಡಿಸಿರಲಿಲ್ಲ. ಹೀಗಾಗಿ ಹೆಚ್ಚಿನ ಕ್ರೀಡಾಪಟುಗಳು ಪ್ಯಾರಿಸ್ ಬಿಸಿಲಿಗೆ ಬಳಲಿ ಬೆಂಡಾಗಿದ್ದರು. ಹೀಗಾಗಿ ಮೋದಿ, ಕ್ರೀಡಾಗ್ರಾಮದ ಕೊಠಡಿಗಳಲ್ಲಿ ಎಸಿ ಇರದಿದ್ದಕ್ಕೆ ಎಷ್ಟು ಮಂದಿ ನನಗೆ ಶಾಪ ಹಾಕಿದಿರಿ? ಎಂದು ತಮಾಷೆಯಾಗಿ ಪ್ರಶ್ನಿಸಿದರು. ಜತೆಗೆ ಎಸಿ ಇಲ್ಲದೆ ಕ್ರೀಡಾಪಟುಗಳು ಪರದಾಡುತ್ತಿರುವ ವಿಷಯ ತಿಳಿದ ಬೆನ್ನಲ್ಲೇ ನಾನು 40 ಪೋರ್ಟೆಬಲ್ ಎಸಿ ಕಳುಹಿಸಿಕೊಡುವ ವ್ಯವಸ್ಥೆ ಮಾಡಿದ್ದೆ ಎಂದು ತಿಳಿಸಿದರು.
ಬ್ರಿಟನ್ ಜತೆಗಿನ ದ್ವೇಷ ಪ್ರೇರಣೆ ತುಂಬಿತು
ಬ್ರಿಟನ್ ವಿರುದ್ಧದ ಪಂದ್ಯದಲ್ಲಿ ಕೇವಲ 10 ಆಟಗಾರರೊಂದಿಗೆ ದಿಟ್ಟ ಹೋರಾಟ ನಡೆಸಿದ ಬಗ್ಗೆ ಕಂಚು ವಿಜೇತ ಹಾಕಿ ತಂಡದ ನಾಯಕ ಹರ್ಮಾನ್ಪ್ರೀತ್ ಸಿಂಗ್ ಬಳಿ ಮೋದಿ ಪ್ರಶ್ನಿಸಿದರು. ವೇಳೆ ಹರ್ಮಾನ್ಪ್ರೀತ್ರನ್ನು ಅವರ ಜನಪ್ರಿಯ ಅಡ್ಡಹೆಸರು "ಸರ್ಪಂಚ್ ಸಾಬ್' ಎಂದು ಕರೆದಿದ್ದು ವಿಶೇಷವಾಗಿತ್ತು. "ಹೌದು ಸರ್, ಅದು ಅಯಂತ ಕಠಿಣ ಹೋರಾಟವಾಗಿತ್ತು. ಮೊದಲ ಕ್ವಾರ್ಟರ್ನಲ್ಲೇ ರೆಡ್ಕಾರ್ಡ್ ಲಭಿಸಿತ್ತು. ಆದರೆ ತರಬೇತಿ ಬಳಗ ನಮಗೆ ನೆರವಾಯಿತು. ನಾವು ಮೊದಲೇ ಇಂಥ ಪರಿಸ್ಥಿತಿಗೆ ಸಿದ್ಧತೆ ನಡೆಸಿದ್ದೆವು. ಬ್ರಿಟನ್ ತಂಡದೊಂದಿಗೆ ನಮಗೆ ವೈರತ್ವ ಇದ್ದುದು ಆಟಗಾರರಿಗೆ ಹೆಚ್ಚಿನ ಪ್ರೇರಣೆ ತುಂಬಿತು ಎಂದು ಹರ್ಮಾನ್ ವಿವರಿಸಿದರು. ಈ ನಡುವೆ ಮೋದಿ, ಹೌದು ಬ್ರಿಟನ್ ಜತೆ ನಮ್ಮ ವೈರತ್ವ 150 ವರ್ಷ ಹಳೆಯದು ಎಂದು ನಕ್ಕರು. ಕೊನೇ 42 ನಿಮಿಷಗಳ ಕಾಲ 10 ಆಟಗಾರರೊಂದಿಗೆ ಆಡಿ ಗೆದ್ದ ದಾಖಲೆ ಒಲಿಂಪಿಕ್ಸ್ನಲ್ಲಿ ಇದೇ ಮೊದಲನೆಯದು ಎಂದೂ ಹರ್ಮಾನ್ ಹೇಳಿದರು.
ಲಕ್ಷ್ಯ ಮೊಬೈಲ್ ಕಸಿದಿದ್ದ ಪಡುಕೋಣೆ!
ಒಲಿಂಪಿಕ್ಸ್ ವೇಳೆ ಮೆಂಟರ್ ಪ್ರಕಾಶ್ ಪಡುಕೋಣೆ ತನ್ನ ಮೊಬೈಲ್ ಕಸಿದುಕೊಂಡಿದ್ದರು ಎಂದು ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್, ಮೋದಿಗೆ ತಿಳಿಸಿದರು. ನಾನು ಲಕ್ಷ$್ಯ ಸೇನ್ನನ್ನು ಮೊದಲಿಗೆ ಭೇಟಿ ಮಾಡಿದಾಗ ಸಣ್ಣ ಹುಡುಗನಾಗಿದ್ದ. ಈಗ ಬೆಳೆದು ದೊಡ್ಡವನಾಗಿದ್ದಾನೆ. ನೀನೀಗ ಸೆಲೆಬ್ರಿಟಿ ಆಗಿರುವ ಬಗ್ಗೆ ತಿಳಿದಿದೆಯೇ? ಎಂದು ಮೋದಿ ಪ್ರಶ್ನಿಸಿದಾಗ, ಪಂದ್ಯಗಳ ವೇಳೆ ಪ್ರಕಾಶ್ ಸರ್ ನನ್ನ ಮೊಬೈಲ್ ಕಸಿದುಕೊಂಡಿದ್ದರು. ಬಳಿಕ ಮೊಬೈಲ್ ಸಿಕ್ಕಾಗ, ನನಗೆ ಲಭಿಸಿದ ಬೆಂಬಲದ ಬಗ್ಗೆ ತಿಳಿಯಿತು. ಒಲಿಂಪಿಕ್ಸ್ ಪದಕ ಗೆಲುವಿನ ಸನಿಹಕ್ಕೆ ಹೋಗಿ ನಿರಾಸೆ ಅನುಭವಿಸಿದ ಬಗ್ಗೆ ಬೇಸರವಿದೆ ಎಂದು ಲಕ್ಷ$್ಯ ಉತ್ತರಿಸಿದರು.