ದುಲೀಪ್ ಟ್ರೋಫಿ ಚಾಂಪಿಯನ್ ಪಟ್ಟಕ್ಕೆ ತ್ರಿಕೋನ ಸ್ಪರ್ಧೆ: ಅಗ್ರಸ್ಥಾನಕ್ಕೆ ಮಯಾಂಕ್-ಋತು ಪಡೆ ಕಾದಾಟ

New-Project-16
Published on

ಅನಂತಪುರ: ದೇಶೀಯ ಋತು 2024-25ರ ಮೊದಲ ಟೂರ್ನಿ ದುಲೀಪ್ ಟೂರ್ನಿ ಅಂತಿಮ ಸುತ್ತು ತಲುಪಿದ್ದು,ಪ್ರಶಸ್ತಿಗಾಗಿ ಮೂರು ತಂಡಗಳ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ. ಗುರುವಾರ ಮೂರನೇ ಹಾಗೂ ಅಂತಿಮ ಸುತ್ತು ಆರಂಭವಾಗಲಿದ್ದು, ಋತುರಾಜ್ ಗಾಯಕ್ವಾಡ್ ಸಾರಥ್ಯ ಭಾರತ ಸಿ ಹಾಗೂ ಮಯಾಂಕ್ ಅಗರ್ವಾಲ್ ನೇತೃತ್ವದ ಭಾರತ ಎ ತಂಡುಗಳು ಎದುರಾಗಲಿದ್ದು, ಇನ್ನೊಂದು ಪಂದ್ಯದಲ್ಲಿ ಭಾರತ ಬಿ- ಭಾರತ ಡಿ ತಂಡಗಳು ಸೆಣಸಾಡಲಿವೆ.

ರೌಂಡ್ ರಾಬಿನ್ ಲೀಗ್ ಮಾದರಿಯ ಮುಕ್ತಾಯಕ್ಕೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ತಂಡ ಚಾಂಪಿಯನ್ ಎನಿಸಲಿದ್ದು, ಪ್ರಸ್ತುತ ಅಂಕಪಟ್ಟಿಯಲ್ಲಿ ಭಾರತ ಸಿ (9 ಅಂಕ) ಅಗ್ರಸ್ಥಾನದಲ್ಲಿದ್ದು, ಬಿ (7), ಸಿ (6) ತಂಡಗಳು ಕ್ರಮವಾಗಿ ನಂತರದಲ್ಲಿವೆ. ಇನ್ನೂ ಖಾತೆ ತೆರೆಯದ ಶ್ರೇಯಸ್ ಅಯ್ಯರ್ ಮುನ್ನಡೆಸುತ್ತಿರುವ ಡಿ (0) 4ನೇ ಹಾಗೂ ಅಂತಿಮ ಸ್ಥಾನದಲ್ಲಿದೆ. ಸಿ,ಬಿ ಮತ್ತು ಎ ತಂಡಗಳ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಪ್ರತಿ ತಂಡ ಒಂದು ಗೆಲುವಿಗೆ ಪೂರ್ಣ 6 ಅಂಕ ಪಡೆಯಲಿದ್ದು, 10 ವಿಕೆಟ್ ಅಥವಾ ಇನಿಂಗ್ಸ್ ಮುನ್ನಡೆಯ ಗೆಲುವು ದಾಖಲಿಸಿದರೆ 17 ಪಾಯಿಂಟ್ ಸಂಪಾದಿಸಲಿದೆ. ಮೊದಲ ಇನಿಂಗ್ಸ್ ಮುನ್ನಡೆ ಪಡೆದು ಡ್ರಾ ಸಾಧಿಸಿದರೆ 3, ಹಿನ್ನಡೆ ಕಂಡರೆ 1 ಅಂಕಗಳಿಸಲಿವೆ.

ಅಗ್ರಸ್ಥಾನಕ್ಕೆ ಮಯಾಂಕ್ ಪಡೆ ಹೋರಾಟ: ಅಗ್ರಸ್ಥಾನದಲ್ಲಿರುವ ಭಾರತ ಸಿ ತಂಡ ಪ್ರಶಸ್ತಿ ಗೆಲುವಿನ ನೆಚ್ಚಿನ ತಂಡ ಎನಿಸಿದ್ದು,ಭಾರತ ಎ ಎದುರು ಕನಿಷ್ಠ ಡ್ರಾ ಸಾಧಿಸಿ, ಇನ್ನೊಂದು ಪಂದ್ಯದಲ್ಲಿ ಡಿ ಎದುರು ಬಿ ತಂಡವೂ ಡ್ರಾ ಅಥವಾ ಸೋಲುಂಡರೆ ಋತುರಾಜ್ ಪಡೆಗೆ ಅಗ್ರಸ್ಥಾನ ಖಾತ್ರಿ ಎನಿಸಲಿದೆ.

ಆದರೆ ಮಯಾಂಕ್ ನೇತೃತ್ವದ ಭಾರತ ಬಿ ತಂಡ ಚಾಂಪಿಯನ್ ಪಟ್ಟಕ್ಕೇರಲು ಗೆಲುವು ಅನಿವಾರ್ಯ. ಜತೆಗೆ ಇನ್ನೊಂದು ಪಂದ್ಯದ ಲಿತಾಂಶದ ಮೇಲೆ ಅಗ್ರಸ್ಥಾನ ನಿರ್ಧಾರವಾಗಲಿದೆ. ಮಯಾಂಕ್ ಪಡೆ ಇನಿಂಗ್ಸ್ ಮುನ್ನಡೆಯೊಂದಿಗೆ ಗೆಲುವು ಸಾಧಿಸಿದರೆ ಒಟ್ಟು 13 (6+7) ಅಂಕ ಸಂಪಾದಿಸಲಿದ್ದು, ಆಗ ಭಾರತ ಡಿ ಎದುರು ಭಾರತ ಬಿ ತಂಡ ಡ್ರಾ ಅಥವಾ ಸೋಲು ಅನುಭವಿಸಿದರಷ್ಟೇ ಅಗ್ರಸ್ಥಾನ ದೊರೆಯಲಿದೆ. ಅಥವಾ ಸಿ-ಎ ಪಂದ್ಯ ಡ್ರಾಗೊಂಡು ಜತೆಗೆ ಭಾರತ ಬಿ ತಂಡ ಕನಿಷ್ಠ ಜಯ ಸಾಧಿಸಿದರೆ, ಸಿ-ಎ ಎರಡು ತಂಡಗಳನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರುವ ಅವಕಾಶ ಹೊಂದಿದೆ.

ಶ್ರೇಯಸ್, ಪರಾಗ್ ಮೇಲೆ ಚಿತ್ತ: ಸುದೀರ್ಘ ಟೆಸ್ಟ್ ಋತುವಿಗೆ ಟೀಮ್ ಇಂಡಿಯಾ ಆಟಗಾರರ ಆಯ್ಕೆಗೆ ದುಲೀಪ್ ಟ್ರೋಫಿ ಪ್ರದರ್ಶನವೂ ಮಾನದಂಡ ಎನಿಸಿದೆ. ಬಾಂಗ್ಲಾದೇಶ ವಿರುದ್ಧ ಮೊದಲ ಟೆಸ್ಟ್‌ಗೆ ಸ್ಥಾನ ಪಡೆಯುವಲ್ಲಿ ವಿಲವಾಗಿರುವ ಶ್ರೇಯಸ್ ಅಯ್ಯರ್, ಮುಂಬರುವ ನ್ಯೂಜಿಲೆಂಡ್ ಹಾಗೂ ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಗೂ ಭಾರತ ತಂಡದಲ್ಲಿ ಸ್ಥಾನ ಪಡೆಯುವುದು ಅನುಮಾನ ಎನ್ನಲಾಗಿದೆ. ಇದರಿಂದ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಲು ಶ್ರೇಯಸ್ ಪಾಲಿಗೆ ಈ ಪಂದ್ಯ ಮಹತ್ವ ಪಡೆದುಕೊಂಡಿದೆ. ಐಪಿಎಲ್‌ನಲ್ಲಿ ಕೆಕೆಆರ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಶ್ರೇಯಸ್ ನೇತೃತ್ವದ ಡಿ ಆಡಿರುವ 2 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಜತೆಗೆ ಡಿ ತಂಡದಲ್ಲಿರುವ ಆರ್ಷದೀಪ್ ಸಿಂಗ್, ಬಿ ತಂಡದ ರಿಂಕು ಸಿಂಗ್ ಪ್ರಮುಖ ಕೇಂದ್ರಬಿಂದು ಎನಿಸಿದ್ದಾರೆ.

ಇತ್ತ ಸಿ ಹಾಗೂ ಎ ನಡುವಿನ ಪಂದ್ಯದಲ್ಲಿ ಋತುರಾಜ್ ಗಾಯಕ್ವಾಡ್, ಸಾಯಿ ಸುದರ್ಶನ್, ಮಯಾಂಕ ಅಗರ್ವಾಲ್, ಇಶಾನ್ ಕಿಶನ್, ರಿಯಾನ್ ಪರಾಗ್ ಹಾಗೂ ಪ್ರಸಿದ್ಧ ಕೃಷ್ಣ ಪ್ರದರ್ಶನದ ಮೇಲೆ ಆಯ್ಕೆಗಾರರು ದೃಷ್ಟಿ ನೆಟ್ಟಿದ್ದಾರೆ. ಗಾಯದಿಂದ ಚೇತರಿಸಿಕೊಂಡಿ ಫಿಟ್ ಆಗಿರುವ ಸೂರ್ಯಕುಮಾರ್ ಯಾದವ್ ಭಾರತ ಬಿ ಪರ ಕಣಕ್ಕಿಳಿಯುವ ಸಾಧ್ಯತೆಗಳಿವೆ.

ಆರಂಭ: ಬೆಳಗ್ಗೆ 9.30

ನೇರಪ್ರಸಾರ: ಜಿಯೋ ಸಿನಿಮಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net