ವಿಂಡೀಸ್​ ಎದುರು ಮೊದಲ ಏಕದಿನದಲ್ಲಿ ಭಾರತದ ಮಹಿಳೆಯರಿಗೆ ದಾಖಲೆಯ ಜಯ

web wom
Published on

ವಡೋದರ: ಉಪನಾಯಕಿ ಸ್ಮೃತಿ ಮಂದನಾ (91 ರನ್​, 102 ಎಸೆತ, 13 ಬೌಂಡರಿ) ಮತ್ತು ವೇಗಿ ರೇಣುಕಾ ಸಿಂಗ್​ (29ಕ್ಕೆ 5) ಮಾರಕ ಬೌಲಿಂಗ್​ ಬಲದಿಂದ ಭಾರತ ತಂಡ ಮಹಿಳೆಯರ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಪ್ರವಾಸಿ ವೆಸ್ಟ್​ ಇಂಡೀಸ್​ ಎದುರು 211 ರನ್​ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಹರ್ಮಾನ್​ಪ್ರೀತ್​ ಕೌರ್​ ಪಡೆ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ನೂತನ ಕೋಟಂಬಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಮೊಟ್ಟಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್​ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಭಾರತ ತಂಡ ರನ್​ಮಳೆ ಹರಿಸಿ 9 ವಿಕೆಟ್​ಗೆ 314 ರನ್​ ಪೇರಿಸಿತು. ಪ್ರತಿಯಾಗಿ ವಿಂಡೀಸ್​ 34 ರನ್​ಗಳಿಗೆ 6 ವಿಕೆಟ್​ ಕಳೆದುಕೊಂಡು ಆರಂಭದಲ್ಲೇ ಸೋಲಿನ ಸುಳಿಗೆ ಸಿಲುಕಿತು. ಅಂತಿಮವಾಗಿ ವಿಂಡೀಸ್​ 26.2 ಓವರ್​ಗಳಲ್ಲೇ 103 ರನ್​ಗಳಿಗೆ ಆಲೌಟ್​ ಆಗಿ ಶರಣಾಯಿತು. ಇದು ಮಹಿಳೆಯರ ಏಕದಿನ ಕ್ರಿಕೆಟ್​ನಲ್ಲಿ ಭಾರತಕ್ಕೆ 2ನೇ ಅತಿದೊಡ್ಡ ಗೆಲುವಾಗಿದೆ. 2017ರಲ್ಲಿ ಐರ್ಲೆಂಡ್​ ಎದುರು 249 ರನ್​ಗಳಿಂದ ಗೆದ್ದಿರುವುದು ಅತಿದೊಡ್ಡ ಅಂತರವಾಗಿದೆ. ರೇಣುಕಾ ಸಿಂಗ್​ ಮೊದಲ ಬಾರಿಗೆ 5 ವಿಕೆಟ್​ ಗೊಂಚಲು ಪಡೆದರು ಮತ್ತು ಮಹಿಳೆಯರ ಏಕದಿನ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಭಾರತದ 9ನೇ ಬೌಲರ್​ ಎನಿಸಿದರು.

ಸ್ಮೃತಿಗೆ ತಪ್ಪಿದ ಶತಕ

ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಪ್ರತಿಕಾ ರಾವಲ್​ (40) ಜತೆಗೂಡಿ ಮೊದಲ ವಿಕೆಟ್​ಗೆ 110 ರನ್​ ಸೇರಿಸುವ ಮೂಲಕ ಸ್ಮೃತಿ ಮಂದನಾ ಭಾರತಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಆದರೆ ವರ್ಷದ ಆರನೇ ಶತಕ ಸಿಡಿಸುವುದರಿಂದ ಸ್ಮೃತಿ 9 ರನ್​ಗಳಿಂದ ವಂಚಿತರಾದರು. ನಂತರ ಹರ್ಲೀಲ್​ ಡಿಯೋಲ್​ (44), ನಾಯಕಿ ಹರ್ಮಾನ್​ಪ್ರೀತ್​ ಕೌರ್​ (34) ಮತ್ತು ಜೆಮೀಮಾ ರೋಡ್ರಿಗಸ್​ (31) ಉಪಯುಕ್ತ ಕೊಡುಗೆ ನೀಡಿ ಮೊತ್ತವನ್ನು 300ರ ಗಡಿ ದಾಟಿಸಿದರು. ಸ್ಮೃತಿ ಮಂದನಾ (1,602) ಮಹಿಳಾ ಕ್ರಿಕೆಟ್​ನಲ್ಲಿ ಕ್ಯಾಲೆಂಡರ್​ ವರ್ಷವೊಂದರಲ್ಲಿ ಗರಿಷ್ಠ ರನ್​ ಗಳಿಸಿದ ಬ್ಯಾಟರ್​ ಎನಿಸಿದರು. ಹಾಲಿ ವರ್ಷವೇ ದ. ಆಫ್ರಿಕಾದ ಲೌರಾ ವೊಲ್ವಾರ್ಡ್​ 1,593 ರನ್​ ಗಳಿಸಿರುವ ದಾಖಲೆ ಮುರಿದರು.

ಭಾರತ: 9 ವಿಕೆಟ್​ಗೆ 314 (ಸ್ಮೃತಿ 91, ಪ್ರತಿಕಾ 40, ಹರ್ಲೀನ್​ 44, ಹರ್ಮಾನ್​ಪ್ರೀತ್​ 34, ರಿಚಾ 26, ಜೆಮೀಮಾ 31, ದೀಪ್ತಿ 14*, ಜೈದಾ ಜೇಮ್ಸ್​ 45ಕ್ಕೆ 5, ಮ್ಯಾಥ್ಯೂಸ್​ 61ಕ್ಕೆ 2), ವೆಸ್ಟ್​ ಇಂಡೀಸ್​: 26.2 ಓವರ್​ಗಳಲ್ಲಿ 103 (ಹ್ಯಾಲಿ ಮ್ಯಾಥ್ಯೂಸ್​ 0, ಡಾಟಿನ್​ 8, ಅಲಿಯ್ನ್​ 13, ಕ್ಯಾಂಪ್​ಬೆಲ್​ 21, ಫ್ಲೆಚರ್​ 24*, ರೇಣುಕಾ 29ಕ್ಕೆ 5, ಪ್ರಿಯಾ 22ಕ್ಕೆ 2).

ಎರಡನೇ ಏಕದಿನ

ಯಾವಾಗ: ಮಂಗಳವಾರ

ಆರಂಭ: ಮಧ್ಯಾಹ್ನ 1.30

ನೇರಪ್ರಸಾರ: ಸ್ಪೋರ್ಟ್ಸ್​18

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net