

ಬೆಂಗಳೂರು: (RCB) ಆರ್‌ಸಿಬಿ ಕಪ್ ಗೆಲ್ಲಬೇಕು ಅನ್ನೋದು ಅಭಿಮಾನಿಗಳು ಎಷ್ಟೋ ವರ್ಷದ ಕನಸು. ಆರ್‌ಸಿಬಿ ಹಾಗೂ ಪಂಜಾಬ್ ಮಧ್ಯೆ ಫೈನಲ್ ಹಣಾಹಣಿ ನಡೆಯಲಿದ್ದು, ರೋಚಕ ಪಂದ್ಯಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಕೆಲವು ಅಭಿಮಾನಿಗಳು ಆರ್‌ಸಿಬಿ ಗೆದ್ದರೆ ಇಂದಿರಾ ಕ್ಯಾಂಟೀನ್‌ಗಳಲ್ಲಿ ಫ್ರೀ ಹೋಳಿಗೆ ಊಟ ಹಾಗೂ ಚಾಟ್ಸ್ ಸೆಂಟರ್‌ವೊಂದು ಉಚಿತ ಚಾಟ್ಸ್ ನೀಡಲಿದ್ದೇವೆ ಎಂದು ಈಗಾಗಲೇ ಘೋಷಣೆ ಮಾಡಿದ್ದಾರೆ.
ಬೆಂಗಳೂರು ನಗರದ ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ಅನಿಲ್ ಚಾಟ್ಸ್ ಸೆಂಟರ್‌ನ ಮಾಲೀಕರು ಉಚಿತ ಚಾಟ್ಸ್ ವಿತರಣೆ ಮಾಡುವುದಾಗಿ ತಿಳಿಸಿದ್ದಾರೆ. ಈ ಬಾರಿ ಐಪಿಎಲ್‌ನಲ್ಲಿ ಆರ್‌ಸಿಬಿ ಫೈನಲ್‌ಗೆ ಎಂಟ್ರಿಯಾಗಿರುವ ಹಿನ್ನೆಲೆ ಈ ನಿರ್ಧಾರ ಕೈಗೊಂಡಿದ್ದಾರೆ. ತಮ್ಮ ಚಾಟ್ ಸೆಂಟರ್ ಮುಂದೆ ಬೋರ್ಡ್ ಹಾಕಿಕೊಂಡಿದ್ದು, ಈ ಸಲ ಕಪ್ ನಮ್ದು ಆದ್ರೆ ಒನ್ ಡೇ ಪಾನಿಪುರಿ ನಿಮ್ದು, ಮಸಾಲಾಪುರಿ, ಪಾನಿಪುರಿ, ಭೇಲ್ ಪುರಿ ಫ್ರೀ ಕೊಡುವುದಾಗಿ ಬರೆದುಕೊಂಡಿದ್ದಾರೆ. ಇದೇ ಜೂ.4 ರಂದು ಸಂಜೆ 5 ಗಂಟೆಯಿಂದ ಉಚಿತ ಚಾಟ್ಸ್ ನೀಡಲಿದ್ದಾರೆ.
ಆರ್‌ಸಿಬಿ ಮತ್ತು ಪಂಜಾಬ್ ನಡುವಿನ ಪಂದ್ಯದಲ್ಲಿ ಆರ್‌ಸಿಬಿ ಕಪ್ ಗೆದ್ದರೆ ಮೈಸೂರಿನ ಎಲ್ಲಾ ಇಂದಿರಾ ಕ್ಯಾಂಟೀನ್ ಗಳಲ್ಲೂ ಉಚಿತ ಹೋಳಿಗೆ ಊಟ ಹಾಕಲಿದ್ದಾರೆ. ಮೈಸೂರಿನ ಆರ್‌ಸಿಬಿ ಅಭಿಮಾನಿ ಬಸವರಾಜ ಬಸಪ್ಪ ಘೋಷಣೆ ಮಾಡಿದ್ದಾರೆ. ಮತ್ತು ಇದರ ಸಾಂಕೇತಿಕವಾಗಿ ಇವತ್ತೇ ಉಚಿತ ಹೋಳಿಗೆ ಊಟ ವಿತರಣೆ ಮಾಡಲಾಗಿದೆ.
ನಾಳೆ ನಡೆಯುವ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಪಂದ್ಯದಲ್ಲಿ ಆರ್‌ಸಿಬಿ ಗೆದ್ದರೆ ಮೈಸೂರಿನ ಎಲ್ಲಾ ಇಂದಿರಾ ಕ್ಯಾಂಟೀನ್‌ಗಳಲ್ಲಿ ಉಚಿತ ಹೋಳಿಗೆ ಊಟ ಹಾಕಲಿದ್ದಾರೆ. ಮೈಸೂರಿನ ಗನ್ ಹೌಸ್ ವೃತ್ತದಲ್ಲಿ ಉಚಿತವಾಗಿ ಹೋಳಿಗೆ ಊಟ ಹಂಚಿಕೆ ಮಾಡಲಾಗಿದೆ. ನಾಳೆ ಮೈಸೂರಿನ 16 ಕ್ಯಾಂಟೀನ್ ಗಳಲ್ಲೂ ಉಚಿತ ಹೋಳಿಗೆ ಊಟ ನೀಡಲಾಗುತ್ತದೆ.
ಸಿಎಂ ಸಿದ್ದರಾಮಯ್ಯ ಬಳಿ ಮೈಸೂರಿನ ಆರ್‌ಸಿಬಿ ಅಭಿಮಾನಿ ಬಸವರಾಜ ಬಸಪ್ಪ ಮನವಿ ಮಾಡಿದ್ದಾರೆ. ಆರ್ ಸಿಬಿ ಗೆದ್ದರೆ ರಾಜ್ಯದ ಎಲ್ಲಾ ಇಂದಿರಾ ಕ್ಯಾಂಟೀನ್ ಗಳಲ್ಲೂ ಉಚಿತ ಹೋಳಿಗೆ ಊಟ ಹಾಕಿಸಿ ಎಂದು ಮನವಿ ಮಾಡಿದ್ದಾರೆ. ಎಲ್ಲಾ ಕನ್ನಡಿಗರು ಸಿಹಿ, ಹೋಳಿಗೆ ರುಚಿ ಸವಿಯಲಿ. ಆರ್‌ಸಿಬಿ ಗೆಲುವಿನ ಸಂಭ್ರಮ ಹಂಚಿಕೊಳ್ಳಲಿ ಅಂತ ಅಭಿಮಾನಿಗಳು ಮನವಿ ಮಾಡಿದ್ದಾರೆ.