

ದುಬೈ: ನಾಯಕ ವಿರಾಟ್ ಕೊಹ್ಲಿ (90*ರನ್, 52 ಎಸೆತ, 4 ಬೌಂಡರಿ, 4 ಸಿಕ್ಸರ್) ಜವಾಬ್ದಾರಿಯುತ ಬ್ಯಾಟಿಂಗ್ ಹಾಗೂ ತಮಿಳುನಾಡು ಸ್ಪಿನ್ನರ್ ವಾಷಿಂಗ್ಟನ್ ಸುಂದರ್ (16ಕ್ಕೆ 2) ಮಾರಕ ದಾಳಿ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್-13ರ ತನ್ನ 6ನೇ ಪಂದ್ಯದಲ್ಲಿ ಭರ್ಜರಿ ಜಯ ದಾಖಲಿಸಿತು. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಆರ್‌ಸಿಬಿ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 37 ರನ್‌ಗಳಿಂದ ಮಣಿಸಿತು. ಲೀಗ್‌ನಲ್ಲಿ 4ನೇ ಜಯ ದಾಖಲಿಸಿದ ಆರ್‌ಸಿಬಿ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 4 ವಿಕೆಟ್‌ಗೆ 169 ರನ್ ಪೇರಿಸಿತು. ಪ್ರತಿಯಾಗಿ ಸಿಎಸ್‌ಕೆ ತಂಡ 8 ವಿಕೆಟ್‌ಗೆ 132 ರನ್ ಪೇರಿಸಲಷ್ಟೇ ಶಕ್ತವಾಯಿತು.
* ಸಿಎಸ್‌ಕೆಗೆ ಕಡಿವಾಣ: ವಾಷಿಂಗ್ಟನ್ ಸುಂದರ್ ಆರಂಭಿಕರಾದ ಶೇನ್ ವ್ಯಾಟ್ಸನ್ (14) ಹಾಗೂ ಫಾಫ್ ಡು ಪ್ಲೆಸಿಸ್ (8) ವಿಕೆಟ್ ಕಬಳಿಸುವ ಮೂಲಕ ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ತಮ್ಮ ತವರು ರಾಜ್ಯದ ತಂಡಕ್ಕೆ ಆಘಾತ ನೀಡಿದರು. ಬಳಿಕ ಅಂಬಟಿ ರಾಯುಡು (42) ಹಾಗೂ ಎನ್. ಜಗದೀಶನ್ (33) 3ನೇ ವಿಕೆಟ್‌ಗೆ 64 ರನ್ ಜತೆಯಾಟವಾಡುವ ಮೂಲಕ ಕೆಲಕಾಲ ಪ್ರತಿಹೋರಾಟ ನಡೆಸಿತು. ಈ ಜೋಡಿ ಬೇರ್ಪಟ್ಟ ಬಳಿಕ ಸಿಎಸ್‌ಕೆ ದಿಢೀರ್ ಕುಸಿತ ಕಂಡಿತು. ಬಳಿಕ ಧೋನಿ (10), ಸ್ಯಾಮ್ ಕರ‌್ರನ್ (0), ರವೀಂದ್ರ ಜಡೇಜಾ (7), ಡ್ವೇನ್ ಬ್ರಾವೊ (7) ನಿರಾಸೆ ಅನುಭವಿಸಿದರು. ಡೆತ್ ಓವರ್‌ಗಳಲ್ಲಿ ಕ್ರಿಸ್ ಮಾರಿಸ್ (19ಕ್ಕೆ 3) ಸಿಎಸ್‌ಕೆಗೆ ಕಡಿವಾಣ ಹಾಕಿದರು.
ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿಗೆ ಯುವ ಬ್ಯಾಟ್ಸ್‌ಮನ್ ದೇವದತ್ ಪಡಿಕಲ್ (33) ಹಾಗೂ ಆರನ್ ಫಿಂಚ್ (2) ಜೋಡಿ ಉತ್ತಮ ಆರಂಭ ಒದಗಿಸಲಿಲ್ಲ. ಪಂದ್ಯದ 3ನೇ ಓವರ್‌ನಲ್ಲೇ ಫಿಂಚ್, ದೀಪಕ್ ಚಹರ್ ಎಸೆತದಲ್ಲಿ ಬೌಲ್ಡ್ ಆದರು. ಬಳಿಕ ಜತೆಯಾದ ನಾಯಕ ಕೊಹ್ಲಿ ಹಾಗೂ ದೇವದತ್ ಜೋಡಿ 2ನೇ ವಿಕೆಟ್‌ಗೆ 53 ರನ್ ಗಳಿಸಿತು. ಆಗ ಶಾರ್ದೂಲ್ ಠಾಕೂರ್ ಈ ಜೋಡಿಯನ್ನು ಬೇರ್ಪಡಿಸಿದರು. ಒಂದೇ ಓವರ್‌ನಲ್ಲಿ ದೇವದತ್ ಹಾಗೂ ಅನುಭವಿ ಎಬಿಡಿ ವಿಲಿಯರ್ಸ್ (0) ವಿಕೆಟ್ ಕಬಳಿಸಿ ಆರ್‌ಸಿಬಿ ಆಘಾತ ನೀಡಿದರು. ನಂತರ ಬಂದ ವಾಷಿಂಗ್ಟನ್ ಸುಂದರ್ (10) ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. 15ನೇ ಓವರ್ ಚಾಲ್ತಿಯಲ್ಲಿ ಆರ್‌ಸಿಬಿ 93 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಾಧಾರಣ ಮೊತ್ತದತ್ತ ಮುಖಮಾಡಿತ್ತು.
*ಮೊತ್ತ ಹಿಗ್ಗಿಸಿದ ಕೊಹ್ಲಿ-ದುಬೆ: ಆರಂಭಿಕ ಹಂತದಲ್ಲಿ ಚೆನ್ನೈ ಬೌಲರ್‌ಗಳು ಕಡಿವಾಣ ಹೇರಿದ ಪರಿಣಾಮ ಸಾಧಾರಣ ಮೊತ್ತದತ್ತ ಸಾಗುತ್ತಿದ್ದ ಆರ್‌ಸಿಬಿ ತಂಡದ ಮೊತ್ತವನ್ನು ವಿರಾಟ್ ಕೊಹ್ಲಿ ಹಾಗೂ ಆಲ್ರೌಂಡರ್ ಶಿವಂ ದುಬೆ (22*ರನ್, 14 ಎಸೆತ, 2 ಬೌಂಡರಿ, 1 ಸಿಕ್ಸರ್) ಜೋಡಿ ಸ್ಫೋಟಕ ಬ್ಯಾಟಿಂಗ್ ಮೂಲಕ ಹಿಗ್ಗಿಸಿತು. ಸ್ಯಾಮ್ ಕರ‌್ರನ್ ಎಸೆದ 18ನೇ ಓವರ್‌ನಲ್ಲಿ 3 ಸಿಕ್ಸರ್ ಒಳಗೊಂಡಂತೆ 24 ರನ್ ಕಸಿದ ಈ ಜೋಡಿ ಸ್ಲಾಗ್ ಓವರ್‌ಗಳಲ್ಲಿ ಸ್ಫೋಟಕ ಬ್ಯಾಟಿಂಗ್ ತೋರಿತು. ಈ ಜೋಡಿ ಕಡೇ 4 ಓವರ್‌ಗಳಲ್ಲಿ 66 ರನ್ ಕಲೆಹಾಕಿತು. ಮುರಿಯದ 5ನೇ ವಿಕೆಟ್‌ಗೆ 34 ಎಸೆತಗಳಲ್ಲಿ 76 ರನ್ ಜತೆಯಾಟವಾಡಿದ ಈ ಜೋಡಿ ತಂಡದ ಮೊತ್ತವನ್ನು 170ರ ಗಡಿಗೆ ತಂದು ನಿಲ್ಲಿಸಿತು.
ಆರ್‌ಸಿಬಿ: 4 ವಿಕೆಟ್‌ಗೆ 169 (ವಿರಾಟ್ ಕೊಹ್ಲಿ 90*, ಪಡಿಕಲ್ 33, ಶಿವಂ ದುಬೆ 22, ಶಾರ್ದೂಲ್ ಠಾಕೂರ್ 40ಕ್ಕೆ 2, ದೀಪಕ್ ಚಹರ್ 10ಕ್ಕೆ 1, ಸ್ಯಾಮ್ ಕರ‌್ರನ್ 48ಕ್ಕೆ 1), ಸಿಎಸ್‌ಕೆ: 8 ವಿಕೆಟ್‌ಗೆ 132 (ಅಂಬಟಿ ರಾಯುಡು 42, ಜಗದೀಶನ್ 33, ಎಂಎಸ್ ಧೋನಿ 10, ಕ್ರಿಸ್ ಮಾರಿಸ್ 19ಕ್ಕೆ 3, ವಾಷಿಂಗ್ಟನ್ ಸುಂದರ್ 16ಕ್ಕೆ 2, ಯಜುವೇಂದ್ರ ಚಾಹಲ್ 35ಕ್ಕೆ 1, ಇಸುರು ಉದಾನ 30ಕ್ಕೆ 1).