

RCB vs CSK: ನಾಳೆ (ಮಾ.28) ಐಪಿಎಲ್ 18ನೇ ಆವೃತ್ತಿಯ ಅತ್ಯಂತ ಕುತೂಹಲಕಾರಿ, ರೋಚಕತೆಗೆ ಸಾಕ್ಷಿಯಾಗುವಂತ ಪಂದ್ಯ ನಡೆಯಲಿದೆ. ಐಪಿಎಲ್ ಇತಿಹಾಸದಲ್ಲಿ ಬದ್ಧ ವೈರಿ ತಂಡಗಳು ಎಂದೇ ಗುರುತಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಐದು ಬಾರಿ ಚಾಂಪಿಯನ್ಸ್ ಆಗಿ ಮಿಂಚಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿ ಚೆಪಾಕ್ ಕ್ರೀಡಾಂಗಣದಲ್ಲಿ ಗೆಲುವಿಗಾಗಿ ಸೆಣಸಲಿದೆ.
ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಆರ್ಸಿಬಿ ಮತ್ತು ಸಿಎಸ್ಕೆ ತಂಡಗಳು, ನಾಳಿನ ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸಲು ಮೈದಾನದಲ್ಲಿ ಭಾರೀ ಕಸರತ್ತು ನಡೆಸುತ್ತಿವೆ. ಇದೊಂದು ಪಂದ್ಯಕ್ಕಾಗಿ ತುದಿಗಾಲಿನಲ್ಲಿ ಕಾಯುತ್ತಿರುವ ಕ್ರಿಕೆಟ್ ಪ್ರಿಯರು, ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಪಂದ್ಯ ನೋಡುವ ಸಾಧ್ಯತೆಗಳಿವೆ. ಈಗಾಗಲೇ ಹಲವರು ಜಾಲತಾಣಗಳಲ್ಲಿ ಆರ್ಸಿಬಿ ಗೆಲ್ಲುವುದು ಪಕ್ಕಾ! ಇದರಲ್ಲಿ ಸಂದೇಹವೇ ಬೇಡ ಎಂಬ ಭರವಸೆ ಮಾತುಗಳನ್ನು ಕಮೆಂಟ್ನಲ್ಲಿ ವ್ಯಕ್ತಪಡಿಡುತ್ತಿದ್ದಾರೆ.
ಐಪಿಎಲ್ನ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಆರ್ಸಿಬಿಗೆ ವಾರ್ನಿಂಗ್ ಕೊಟ್ಟಿರುವ ಮಾಜಿ ಸಿಎಸ್ಕೆ ಆಟಗಾರ, ಆಸ್ಟ್ರೇಲಿಯಾದ ದಿಗ್ಗಜ ಬ್ಯಾಟರ್ ಶೇನ್ ವ್ಯಾಟ್ಸನ್, "ಚೆನ್ನೈ ಸೂಪರ್ ಕಿಂಗ್ಸ್ ಎಂದಿಗಿಂತ ಮತ್ತಷ್ಟು ಬಲಿಷ್ಠವಾಗಿದೆ. ಕಳೆದ ಪಂದ್ಯದಲ್ಲಿ ಸ್ಪಿನ್ನರ್ಗಳಾದ ಅಶ್ವಿನ್, ನೂರ್ ಅಹ್ಮದ್ ಮತ್ತು ರವೀಂದ್ರ ಜಡೇಜಾ ತಮ್ಮ ಕೈಚಕ ತೋರುವಲ್ಲಿ ಯಶಸ್ವಿಯಾದರು. ಜತೆಗೆ ತಂಡದ ಪರ ಅದ್ಭುತ ಪ್ರದರ್ಶನ ನೀಡಿದರು. ಮೊದಲ ಪಂದ್ಯದಲ್ಲಿ 4 ವಿಕೆಟ್ ಕಬಳಿಸುವ ಮೂಲಕ ತಂಡದ ವಿಶ್ವಾಸವನ್ನು ಹೆಚ್ಚಿಸಿರುವ ನೂರ್, ಸಿಎಸ್ಕೆಗೆ ವಿಕೆಟ್ ಕಬಳಿಸುವ ಮತ್ತೊಂದು ಅತ್ಯುತ್ತಮ ಆಯ್ಕೆಯಾಗಿದ್ದಾರೆ" ಎಂದರು.
"ಚೆಪಾಕ್ನಲ್ಲಿ ಆಡುವುದು ಆರ್ಸಿಬಿ ಮುಂದಿರುವ ಅತಿ ದೊಡ್ಡ ಸವಾಲು. ಇಲ್ಲಿ ಪ್ರದರ್ಶಿಸುವುದು ಅಷ್ಟು ಸುಲಭದ ಮಾತಲ್ಲ. ಸಿಎಸ್ಕೆ ತಂಡದಲ್ಲಿರುವ ಬಲಿಷ್ಠ ಬೌಲಿಂಗ್ ಯೂನಿಟ್ ನೋಡಿದರೆ, ರಾಯಲ್ ಚಾಲೆಂಜರ್ಸ್ ಪಡೆ ತಮ್ಮ ತಂಡವನ್ನು ಮತ್ತಷ್ಟು ಬಲಿಷ್ಠಗೊಳಿಸಬೇಕು. ಇಲ್ಲಿ ಸಿಎಸ್ಕೆ ಸಾಮರ್ಥ್ಯಕ್ಕೆ ತಕ್ಕಂತೆ ಆರ್ಸಿಬಿ ತನ್ನ ಟೀಮ್ನ ರೂಪುಗೊಳಿಸಬೇಕು" ಎಂದು ತಿಳಿಸಿದ್ದಾರೆ,(ಏಜೆನ್ಸೀಸ್).