

ಬೆಂಗಳೂರು: ಐಪಿಎಲ್ 14ನೇ ಆವೃತ್ತಿಯಲ್ಲಿ ಮೊದಲ 4 ಪಂದ್ಯಗಳನ್ನು ಗೆದ್ದು ಭರ್ಜರಿ ಆರಂಭ ಕಂಡಿದ್ದ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ‘ಈ ಸಲ ಕಪ್ ನಮ್ದೇ’ ಎನ್ನುವ ಅಭಿಮಾನಿಗಳ ಘೋಷವಾಕ್ಯವನ್ನು ನನಸಾಗಿಸುವತ್ತ ದಿಟ್ಟ ಹೆಜ್ಜೆ ಇಟ್ಟಿತ್ತು. ಆದರೆ ದೆಹಲಿ ಚರಣದ ವೇಳೆ ಬಯೋಬಬಲ್‌ನಲ್ಲೇ ಕರೊನಾ ವೈರಸ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಟೂರ್ನಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು. ಆಗ ಆರ್‌ಸಿಬಿ ತಂಡ ಆಡಿದ 7 ಪಂದ್ಯಗಳಲ್ಲಿ 5 ಜಯ, 2 ಸೋಲು ಕಂಡು ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿ ನೆಲೆಸಿತ್ತು. ಭಾನುವಾರ ಟೂರ್ನಿ ಪುನರಾರಂಭ ಕಾಣಲಿದ್ದು, ಬಾಕಿ ಉಳಿದ 31 ಪಂದ್ಯಗಳು ಯುಎಇಯಲ್ಲಿ ನಡೆಯಲಿವೆ. ಅರಬ್ ನಾಡಿನಲ್ಲೂ ಭರ್ಜರಿ ಲಯ ಮುಂದುವರಿಸುವ ಮೂಲಕ ಕಪ್ ಗೆಲುವಿನ ಕನಸು ನನಸಾಗಿಸುವತ್ತ ಆರ್‌ಸಿಬಿ ತಂಡ ದೃಷ್ಟಿ ನೆಟ್ಟಿದೆ.
ವಿರಾಟ್ ಕೊಹ್ಲಿ-ಎಬಿ ಡಿವಿಲಿಯರ್ಸ್ ಮೇಲಿನ ಅತಿಯಾದ ಅವಲಂಬನೆಯಿಂದ ಆರ್‌ಸಿಬಿ ತಂಡ ಹೊರಬಂದಿದ್ದು, ಟೂರ್ನಿಯ ಮೊದಲ ಭಾಗದ ಪ್ರಮುಖ ಹೈಲೈಟ್ ಆಗಿತ್ತು. ವೇಗಿ ಹರ್ಷಲ್ ಪಟೇಲ್ ಬಿಗಿ ಬೌಲಿಂಗ್, ಕನ್ನಡಿಗ ದೇವದತ್ ಪಡಿಕಲ್ ಭರ್ಜರಿ ಶತಕ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಸ್ಫೋಟಕ ಬ್ಯಾಟಿಂಗ್‌ನಿಂದ ಆರ್‌ಸಿಬಿ ಗೆಲುವಿನ ಲಯದಲ್ಲಿ ಸಾಗಿತ್ತು. ನಾಯಕ ವಿರಾಟ್ ಕೊಹ್ಲಿ ಆರಂಭಿಕರಾಗಿ ಬಡ್ತಿ ಪಡೆದು ಪಡಿಕಲ್ ಜತೆಗೆ ಇನಿಂಗ್ಸ್ ಆರಂಭಿಸಿದ್ದು ಕೂಡ ಆರ್‌ಸಿಬಿ ಬ್ಯಾಟಿಂಗ್ ಸದೃಢಗೊಳಿಸಿತ್ತು. 2ನೇ ಭಾಗಕ್ಕೆ ತಂಡ ಕೆಲ ಆಟಗಾರರ ಬದಲಾವಣೆ ಕಂಡ ನಡುವೆಯೂ ಮೊದಲ ಭಾಗದ ನಿರ್ವಹಣೆಯನ್ನೇ ಪುನರಾವರ್ತಿಸುವ ನಿರೀಕ್ಷೆ ಇದೆ.
ಸಂಭಾವ್ಯ ಆಡುವ 11ರ ಬಳಗ
ದೇವದತ್ ಪಡಿಕಲ್, ವಿರಾಟ್ ಕೊಹ್ಲಿ (ನಾಯಕ), ರಜತ್ ಪಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಎಬಿ ಡಿವಿಲಿಯರ್ಸ್, ಶಾಬಾಜ್ ಅಹ್ಮದ್, ಕೈಲ್ ಜೇಮಿಸನ್, ವಾನಿಂದು ಹಸರಂಗ, ಹರ್ಷಲ್ ಪಟೇಲ್, ಮೊಹಮದ್ ಸಿರಾಜ್, ಯಜುವೇಂದ್ರ ಚಾಹಲ್.
5 ಬದಲಾವಣೆ
ಟೂರ್ನಿಯ ಮೊದಲ ಭಾಗದಲ್ಲಿ ಆಡಿದ್ದ ಆರ್‌ಸಿಬಿ ತಂಡದಲ್ಲಿ 2ನೇ ಭಾಗಕ್ಕೆ ಒಟ್ಟು 5 ಬದಲಾವಣೆಗಳಾಗಿವೆ. ಇದು ಉಳಿದೆಲ್ಲ ತಂಡಗಳಿಗಿಂತ ಗರಿಷ್ಠ ಬದಲಾವಣೆ ಎನಿಸಿದೆ. ಆಸ್ಟ್ರೇಲಿಯಾದ ಆಡಂ ಜಂಪಾ, ಡೇನಿಯಲ್ ಸ್ಯಾಮ್ಸ್, ಕೇನ್ ರಿಚರ್ಡ್‌ಸನ್, ನ್ಯೂಜಿಲೆಂಡ್‌ನ ಫಿನ್ ಅಲೆನ್ ಮತ್ತು ಭಾರತದ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಫಿಟ್ನೆಸ್ ಮತ್ತು ಬಯೋಬಬಲ್ ನಿರ್ಬಂಧ ಮತ್ತಿತರ ಕಾರಣಗಳಿಂದಾಗಿ 2ನೇ ಭಾಗದಿಂದ ಹೊರಗುಳಿದಿದ್ದಾರೆ. ಶ್ರೀಲಂಕಾದ ಸ್ಪಿನ್ ಬೌಲಿಂಗ್ ಆಲ್ರೌಂಡರ್ ವಾನಿಂದು ಹಸರಂಗ, ವೇಗಿ ದುಶ್ಮಂತ ಚಮೀರ, ಇಂಗ್ಲೆಂಡ್ ಎಡಗೈ ವೇಗಿ ಜಾರ್ಜ್ ಗಾರ್ಟನ್, ಸಿಂಗಾಪುರದ ಸ್ಫೋಟಕ ಬ್ಯಾಟ್ಸ್‌ಮನ್ ಟಿಮ್ ಡೇವಿಡ್ ಮತ್ತು ಬಂಗಾಳದ ಮಧ್ಯಮ ವೇಗಿ ಆಕಾಶ್ ದೀಪ್ ಟೂರ್ನಿಯ ಉಳಿದ ಭಾಗಕ್ಕೆ ಸೇರ್ಪಡೆಗೊಂಡಿದ್ದಾರೆ. ಕೋಚ್ ಸೈಮನ್ ಕಾಟಿಚ್ ಕೂಡ ತಂಡ ತೊರೆದಿದ್ದು, ಟೀಮ್ ಡೈರೆಕ್ಟರ್ ಮೈಕ್ ಹೆಸ್ಸನ್ ಅವರೇ ಈ ಹೆಚ್ಚುವರಿ ಹೊರೆ ಹೊತ್ತುಕೊಂಡಿದ್ದಾರೆ.
ಸದೃಢ ಬ್ಯಾಟಿಂಗ್-ಬೌಲಿಂಗ್
ಟೂರ್ನಿಯ ಮೊದಲ ಭಾಗದಲ್ಲಿ ಆಡಿದ 7 ಪಂದ್ಯಗಳಲ್ಲಿ ಆರ್‌ಸಿಬಿ ಸದೃಢ ಬ್ಯಾಟಿಂಗ್-ಬೌಲಿಂಗ್ ನಿರ್ವಹಣೆ ತೋರಿತ್ತು. ಗ್ಲೆನ್ ಮ್ಯಾಕ್ಸ್‌ವೆಲ್ (223 ರನ್), ಎಬಿ ಡಿವಿಲಿಯರ್ಸ್ (207), ವಿರಾಟ್ ಕೊಹ್ಲಿ (198) ಮತ್ತು ಕನ್ನಡಿಗ ದೇವದತ್ ಪಡಿಕಲ್ (195) ಬ್ಯಾಟಿಂಗ್‌ನಲ್ಲಿ ಬಲ ತುಂಬಿದ್ದರೆ, ಹರ್ಷಲ್ ಪಟೇಲ್ (17 ವಿಕೆಟ್), ಕೈಲ್ ಜೇಮಿಸನ್ (9) ಮತ್ತು ಮೊಹಮದ್ ಸಿರಾಜ್ (6) ಬೌಲಿಂಗ್‌ನಲ್ಲಿ ಮಿಂಚಿದ್ದರು.
ಪ್ಲೇಆಫ್ ಲೆಕ್ಕಾಚಾರ
ಸಿಎಸ್‌ಕೆ ತಂಡದಂತೆ ಆಡಿದ 7 ಪಂದ್ಯಗಳಲ್ಲಿ 5 ಜಯ, 2 ಸೋಲಿನೊಂದಿಗೆ 10 ಅಂಕ ಗಳಿಸಿದ್ದರೂ, ರನ್‌ರೇಟ್ ಲೆಕ್ಕಾಚಾರದಲ್ಲಿ ಆರ್‌ಸಿಬಿ ತಂಡ ಅದಕ್ಕಿಂತ ಹಿಂದೆ ಅಂದರೆ 3ನೇ ಸ್ಥಾನದಲ್ಲಿದೆ. ಡೆಲ್ಲಿ ತಂಡ (8 ಪಂದ್ಯ, 6 ಜಯ, 2 ಸೋಲು) 12 ಅಂಕದೊಂದಿಗೆ ಅಗ್ರಸ್ಥಾನದಲ್ಲಿದ್ದರೂ, ಆರ್‌ಸಿಬಿಗಿಂತ 1 ಪಂದ್ಯ ಅಧಿಕ ಆಡಿದೆ ಎಂಬುದು ಗಮನಾರ್ಹ. ಆರ್‌ಸಿಬಿ ತಂಡ ಪ್ಲೇಆಫ್ ಸ್ಥಾನ ಖಚಿತಪಡಿಸಿಕೊಳ್ಳಲು ತನ್ನ ಉಳಿದ 7 ಪಂದ್ಯಗಳ ಪೈಕಿ ಕನಿಷ್ಠ 3ರಲ್ಲಿ ಜಯಿಸುವ ಅಗತ್ಯವಿದೆ. ಇತರ ಫಲಿತಾಂಶಗಳು ಅನುಕೂಲವೆನಿಸಿದರೆ, ಆರ್‌ಸಿಬಿ ತಂಡ ಇನ್ನು 2 ಪಂದ್ಯಗಳಲ್ಲಷ್ಟೇ ಜಯಿಸಿದರೂ ಪ್ಲೇಆಫ್ಗೇರಬಹುದಾಗಿದೆ. ಮೊದಲ ಭಾಗದ ನಿರ್ವಹಣೆ ಗಮನಿಸಿದರೆ ಆರ್‌ಸಿಬಿ ತಂಡದ ಪ್ಲೇಆಫ್ ಹಾದಿ ಸುಲಭವಾಗಿಯೇ ಕಾಣಿಸುತ್ತಿದೆ.
ಆರ್‌ಸಿಬಿ ಆಡಿರುವ ಪಂದ್ಯಗಳು:
ಎದುರಾಳಿ: ಫಲಿತಾಂಶ
ಮುಂಬೈ: 2 ವಿಕೆಟ್ ಗೆಲುವು
ಸನ್‌ರೈಸರ್ಸ್: 6 ರನ್ ಜಯ
ಕೆಕೆಆರ್: 38 ರನ್ ಜಯ
ರಾಜಸ್ಥಾನ: 10 ವಿಕೆಟ್ ಗೆಲುವು
ಸೂಪರ್‌ಕಿಂಗ್ಸ್: 69 ರನ್ ಸೋಲು
ಡೆಲ್ಲಿ ಕ್ಯಾಪಿಟಲ್ಸ್: 1 ರನ್ ಗೆಲುವು
ಪಂಜಾಬ್: 34 ರನ್ ಸೋಲು
ಆಡಬೇಕಿರುವ ಪಂದ್ಯಗಳು:
ದಿನಾಂಕ: ಎದುರಾಳಿ
ಸೆಪ್ಟೆಂಬರ್ 20: ಕೆಕೆಆರ್
ಸೆಪ್ಟೆಂಬರ್ 24: ಸಿಎಸ್‌ಕೆ
ಸೆಪ್ಟೆಂಬರ್ 26: ಮುಂಬೈ
ಸೆಪ್ಟೆಂಬರ್ 29: ರಾಜಸ್ಥಾನ
ಅಕ್ಟೋಬರ್ 3: ಪಂಜಾಬ್
ಅಕ್ಟೋಬರ್ 6: ಸನ್‌ರೈಸರ್ಸ್
ಅಕ್ಟೋಬರ್ 8: ಡೆಲ್ಲಿ