ಕೊಹ್ಲಿ, ರಜತ್​, ಸಾಲ್ಟ್​... ಆರಂಭದಲ್ಲೇ ಮುಗ್ಗರಿಸಿದರೂ ಬಿಟ್ಟುಕೊಡದ RCB; ಜಿಟಿಗೆ 170 ರನ್​ಗಳ ಗುರಿ

ವಿಜಯವಾಣಿ - 2025-04-02T211002.221
Published on

RCB vs GT: ಇಂದು (ಏ.02) ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆರ್​ಸಿಬಿ ಮತ್ತು ಗುಜರಾತ್ ಟೈಟನ್ಸ್ ನಡುವಿನ ಪಂದ್ಯದಲ್ಲಿ ಜಿಟಿ ಮೊದಲು ಟಾಸ್​ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟಿಂಗ್​ ಇಳಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಡೆಗೆ ಆರಂಭಿಕ ಹಂತದಲ್ಲೇ ದೊಡ್ಡ ಆಘಾತ ಎದುರಾಯಿತು.

ತಂಡದ ಪರ ಸ್ಫೋಟಕ ಬ್ಯಾಟಿಂಗ್ ನಡೆಸಬೇಕಿದ್ದ ಆರಂಭಿಕರಾದ ವಿರಾಟ್​ ಕೊಹ್ಲಿ, ಫಿಲ್​ ಸಾಲ್ಟ್​ ಮತ್ತು ದೇವದತ್ತ ಪಡಿಕ್ಕಲ್​, ಶುರುವಿನಲ್ಲೇ ತಮ್ಮ ಬಹುಮುಖ್ಯ ವಿಕೆಟ್​ಗಳನ್ನು ಶೀಘ್ರವೇ ಜಿಟಿ ಬೌಲರ್​ಗಳಿಗೆ ಒಪ್ಪಿಸಿ, ಪೆವಿಲಿಯನ್​ನತ್ತ ಮುಖ ಮಾಡಿದರು. ಇದು ತಂಡವನ್ನು ದೊಡ್ಡ ಸಂಕಷ್ಟಕ್ಕೆ ದೂಡಿತು. ಈ ಸಮಯದಲ್ಲಿ ಕ್ರೀಸ್​ಗೆ ಬಂದ ಜಿತೇಶ್​ ಶರ್ಮ, ಲಿಯಾಮ್​ ಲಿವಿಂಗ್​ ಸ್ಟೋನ್, ಟಿಮ್​ ಡೇವಿಡ್​ ಅವರ​ ಅಬ್ಬರದ ಬ್ಯಾಟಿಂಗ್​ ತಂಡದ ಮೊತ್ತವನ್ನು 150ರ ಗಡಿದಾಟಿಸಲು ಸಹಾಯ ಮಾಡಿತು.

10 ಓವರ್​ವರೆಗೂ ಮಂದಗತಿಯಲ್ಲೇ ಸಾಗಿದ ಆರ್​ಸಿಬಿ, 14ನೇ ಓವರ್​ ನಂತರ ಅಬ್ಬರದ ಬ್ಯಾಟಿಂಗ್​ ನಡೆಸಿತು. ಇನ್ನೂ ಗುಜರಾತ್​ ಟೈಟನ್ಸ್ ಪರ ಬೌಲಿಂಗ್​ನಲ್ಲಿ ಮಿಂಚಿದ ಮೊಹಮ್ಮದ್ ಸಿರಾಜ್​, ಸ್ಟಾರ್​ ಬ್ಯಾಟರ್​ಗಳಾದ ಫಿಲ್​ ಸಾಲ್ಟ್​, ದೇವದತ್ತ ಪಡಿಕ್ಕಲ್​ ಮತ್ತು ಲಿಯಾಮ್ ಲಿವಿಂಗ್​ಸ್ಟೋನ್​ರ ವಿಕೆಟ್ ಕಬಳಿಸುವ ಮೂಲಕ ಆರ್​ಸಿಬಿ ಬ್ಯಾಟರ್​ಗಳನ್ನು ಯಶಸ್ವಿಯಾಗಿ ಕಟ್ಟಿಹಾಕಿದರು. 20 ಓವರ್​ ಅಂತ್ಯಕ್ಕೆ ಆರ್​ಸಿಬಿ 169 ರನ್​ಗಳನ್ನು ಕಲೆಹಾಕಿದೆ. 170 ರನ್​ ಗುರಿಯನ್ನು ಸುಲಭವಾಗಿ ಬೆನ್ನಟ್ಟಲಿದೆಯೇ ಗುಜರಾತ್ ಪಡೆ? ಎಂಬುದನ್ನು ಎರಡನೇ ಇನ್ನಿಂಗ್ಸ್​ನಲ್ಲಿ ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net