

ಜೈಪುರ: ತವರಿನಲ್ಲೇ ಸತತ 2 ಸೋಲುಗಳನ್ನು ಅನುಭವಿಸಿ ತನ್ನ ದೌರ್ಬಲ್ಯಗಳನ್ನು ಹೊರಹಾಕಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೀಗ ಜೈಪುರದಲ್ಲಿ ಪುಟಿದೇಳುವ ಮೂಲಕ ಜಯ ಒಲಿಸಿಕೊಳ್ಳಲು ಸಜ್ಜಾಗಿದೆ. ಐಪಿಎಲ್-17ರಲ್ಲಿ ಶನಿವಾರ ನಡೆಯಲಿರುವ ಪಂದ್ಯದಲ್ಲಿ ಆತಿಥೇಯ ರಾಜಸ್ಥಾನ ರಾಯಲ್ಸ್ ತಂಡದ ಸವಾಲು ಎದುರಿಸಲಿರುವ ಫಾಫ್ ಡು ಪ್ಲೆಸಿಸ್ ಬಳಗ ಜಯದ ಹಾದಿಗೆ ಮರಳುವ ಹಂಬಲದಲ್ಲಿದೆ.
ಸಂಜು ಸ್ಯಾಮ್ಸನ್ ಪಡೆ ಆರಂಭಿಕ 3 ಪಂದ್ಯಗಳಲ್ಲಿ ಲಖನೌ, ಡೆಲ್ಲಿ ಮತ್ತು ಮುಂಬೈ ವಿರುದ್ಧ ಗೆದ್ದು ಅಜೇಯವಾಗಿದ್ದು, ಗೆಲುವಿನ ಓಟ ಮುಂದುವರಿಸುವ ತವಕದಲ್ಲಿದೆ. ಆರ್ಸಿಬಿ ತಂಡ ತವರಿನಲ್ಲಿ ಕೆಕೆಆರ್ ವಿರುದ್ಧ 182 ರನ್ ರಕ್ಷಿಸಿಕೊಳ್ಳಲು ವಿಫಲವಾಗಿತ್ತು. ನಂತರ ಲಖನೌ ಎದುರು 182 ರನ್ ಸವಾಲು ಬೆನ್ನಟ್ಟುವಲ್ಲೂ ಎಡವಿತ್ತು. ಹೀಗಾಗಿ ಆರ್ಸಿಬಿ ಈಗ ರಾಯಲ್ಸ್ ಓಟಕ್ಕೆ ತವರಿನಲ್ಲೇ ಕಡಿವಾಣ ಹಾಕಬೇಕಾದರೆ ಸರ್ವಾಂಗೀಣ ನಿರ್ವಹಣೆ ತೋರುವುದು ಅಗತ್ಯವಾಗಿದೆ.
ಆರ್ಸಿಬಿಗೆ ವಿದೇಶಿಯರ ಚಿಂತೆ
ಆರ್ಸಿಬಿ ತಂಡಕ್ಕೆ ವಿದೇಶಿ ಆಟಗಾರರ ಕೆಟ್ಟ ನಿರ್ವಹಣೆಯೇ ಪ್ರಮುಖ ಹಿನ್ನಡೆ ಎನಿಸಿದೆ. ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ 4 ಪಂದ್ಯಗಳಲ್ಲಿ 2 ಅರ್ಧಶತಕ ಸಹಿತ 203 ರನ್ ಸಿಡಿಸಿದ್ದು, ಅವರಿಗೆ ಇತರರಿಂದ ಸಮರ್ಥ ಬೆಂಬಲದ ಕೊರತೆ ಇದೆ. ನಾಯಕ ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ಕ್ಯಾಮರಾನ್ ಗ್ರೀನ್ ರನ್ಬರ ಅನುಭವಿಸಿದ್ದಾರೆ. 4ನೇ ವಿದೇಶಿ ಕೋಟಾದಡಿಯಲ್ಲಿ ಆಡಿರುವ ವೇಗಿಗಳಾದ ಅಲ್ಜಾರಿ ಜೋಸೆಫ್/ರೀಸ್ ಟಾಪ್ಲೆ ಕೂಡ ನಿರಾಸೆ ಮೂಡಿಸಿದ್ದಾರೆ. ಜತೆಗೆ ದೇಶೀಯ ಬ್ಯಾಟರ್ಗಳಾದ ರಜತ್ ಪಾಟೀದಾರ್, ಅನುಜ್ ರಾವತ್, ಬೌಲರ್ಗಳಾದ ಮೊಹಮದ್ ಸಿರಾಜ್, ಮಯಾಂಕ್ ದಾಗರ್ರಿಂದಲೂ ಸುಧಾರಿತ ನಿರ್ವಹಣೆ ಬರಬೇಕಾಗಿದೆ. ಕನ್ನಡಿಗ ವೈಶಾಕ್ ವಿಜಯ್ಕುಮಾರ್ಗೆ ಈ ಸಲ ಮತ್ತೆ ಅವಕಾಶ ಕಲ್ಪಿಸಿ, ಆರ್ಸಿಬಿ ಟೀಮ್ ಮ್ಯಾನೇಜ್ಮೆಂಟ್ ತನ್ನ ತಪ್ಪು ತಿದ್ದಿಕೊಳ್ಳುವುದೇ ಎಂದು ಕಾದುನೋಡಬೇಕಿದೆ.
ಬ್ಯಾಟಿಂಗ್ ಸ್ನೇಹಿ ಪಿಚ್
ಚಿನ್ನಸ್ವಾಮಿ ಸ್ಟೇಡಿಯಂನಂತೆ ಜೈಪುರದ ಸವಾಯಿ ಮಾನ್ ಸಿಂಗ್ ಸ್ಟೇಡಿಯಂ ಕೂಡ ಬ್ಯಾಟಿಂಗ್ ಸ್ನೇಹಿ ಪಿಚ್ ಹೊಂದಿದೆ. ಹೀಗಾಗಿ ಪಂದ್ಯದಲ್ಲಿ ರನ್ಮಳೆ ನಿರೀಕ್ಷೆ ಇದೆ. ಜತೆಗೆ ಉಭಯ ತಂಡಗಳ ಬೌಲಿಂಗ್ ನಿರ್ವಹಣೆಯೂ ಫಲಿತಾಂಶ ನಿರ್ಧಾರದಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ.
ಆರ್ಆರ್ಗೆ ಆರಂಭಿಕರ ಕಳವಳ
ಐಪಿಎಲ್ಗೆ ಮುನ್ನ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರನ್ಮಳೆ ಹರಿಸಿದ್ದ ಎಡಗೈ ಆರಂಭಿಕ ಯಶಸ್ವಿ ಜೈಸ್ವಾಲ್ ಹಾಲಿ ಟೂರ್ನಿಯ ಮೊದಲ 3 ಪಂದ್ಯಗಳಲ್ಲಿ 39 ರನ್ ಮಾತ್ರ ಗಳಿಸಿದ್ದಾರೆ. ಮತ್ತೋರ್ವ ಆರಂಭಿಕ ಹಾಗೂ ಇಂಗ್ಲೆಂಡ್ ಟಿ20 ತಂಡದ ನಾಯಕ ಜೋಸ್ ಬಟ್ಲರ್ ಕೂಡ 3 ಇನಿಂಗ್ಸ್ಗಳಲ್ಲಿ 35 ರನ್ ಮಾತ್ರ ಗಳಿಸಿದ್ದಾರೆ. ಆದರೆ ನಾಯಕ ಸಂಜು ಸ್ಯಾಮ್ಸನ್ (109 ರನ್) ಮತ್ತು ರಿಯಾನ್ ಪರಾಗ್ (181) ಉತ್ತಮ ನಿರ್ವಹಣೆಯಿಂದ ಆರ್ಆರ್ ಗೆಲುವಿನ ಲಯದಲ್ಲಿ ಸಾಗಿದೆ. ಹೀಗಾಗಿ ಈ ಬಾರಿ ಉತ್ತಮ ಆರಂಭ ಲಭಿಸಿದರೆ ಆರ್ಆರ್ ಮತ್ತಷ್ಟು ಬಲಿಷ್ಠವಾಗಲಿದೆ. ಬೌಲಿಂಗ್ನಲ್ಲಿ ವೇಗಿಗಳಾದ ಟ್ರೆಂಟ್ ಬೌಲ್ಟ್-ನಾಂಡ್ರೆ ರ್ಬಗರ್ ಜತೆಗೆ ಯಜುವೇಂದ್ರ ಚಾಹಲ್ ಉತ್ತಮ ಫಾರ್ಮ್ನಲ್ಲಿದ್ದರೆ, ಆರ್. ಅಶ್ವಿನ್ ಆಲ್ರೌಂಡರ್ ಆಗಿ ಮಿಂಚುತ್ತಿದ್ದಾರೆ.
ಮುಖಾಮುಖಿ: 29
ರಾಜಸ್ಥಾನ: 12
ಆರ್ಸಿಬಿ: 15
ರದ್ದು: 2
ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋಸಿನಿಮಾ.