

ನವದೆಹಲಿ: ಬರೋಬ್ಬರಿ 18ನೇ ಆವೃತ್ತಿಯಲ್ಲಿ ಮೊಟ್ಟಮೊದಲ ಬಾರಿಗೆ ಪ್ರಶಸ್ತಿ ಗೆದ್ದುಕೊಂಡಿರುವ ಆರ್ಸಿಬಿ ತಂಡವೀಗ ಐದು ಬಾರಿಯ ಚಾಂಪಿಯನ್ಗಳಾದ ಚೆನ್ನೈ ಸೂಪರ್ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳನ್ನು ಹಿಂದಿಕ್ಕಿ ಐಪಿಎಲ್ ಟೂರ್ನಿಯ ಅತ್ಯಂತ ಮೌಲ್ಯಯುತ ತಂಡ ಎನಿಸಿದೆ.
ಐಪಿಎಲ್ ಚಾಂಪಿಯನ್ ಪಟ್ಟ ಏರುವುದರೊಂದಿಗೆ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಒಳಗೊಂಡ ಆರ್ಸಿಬಿ ತಂಡದ ಮೌಲ್ಯ ಶೇ.13.8 ಏರಿಕೆಯಾಗಿ, 2,307 ಕೋಟಿ ರೂ. (269 ದಶಲಕ್ಷ ಡಾಲರ್) ತಲುಪಿದೆ. ಇದರೊಂದಿಗೆ ಐಪಿಎಲ್ ಟೂರ್ನಿಯ ಬ್ರ್ಯಾಂಡ್ ಮೌಲ್ಯವೂ ಶೇ.12.9 ಏರಿಕೆಯಾಗಿದ್ದು, 1.58 ಲಕ್ಷ ಕೋಟಿ ರೂಪಾಯಿ (18.5 ಶತಕೋಟಿ ಡಾಲರ್) ಮುಟ್ಟಿದೆ.
ಜಾಗತಿಕ ಹೂಡಿಕೆ ಬ್ಯಾಂಕ್ "ಹೌಲಿಹಾನ್ ಲೋಕಿ' ಇತ್ತೀಚೆಗೆ ನಡೆಸಿರುವ ಐಪಿಎಲ್ ಬ್ರ್ಯಾಂಡ್ ಮೌಲ್ಯಮಾಪನ ಅಧ್ಯಯನದ ಪ್ರಕಾರ, ಕಳೆದ ಆವೃತ್ತಿಯ ಟೂರ್ನಿಗೆ ದೊಡ್ಡ ಮೊತ್ತದ ಪ್ರಾಯೋಜಕತ್ವ ಲಭಿಸಿತ್ತು. 4 ಅಸೋಸಿಯೇಟ್ ಪ್ರಾಯೋಜಕರಿಂದಲೇ 1,485 ಕೋಟಿ ರೂ. ಲಭಿಸಿತ್ತು. ಇದು ಕಳೆದ ಆವೃತ್ತಿಗಿಂತ ಶೇ.25 ಅಧಿಕವಾಗಿದೆ. ಟಾಟಾ ಗ್ರೂಪ್ ಜತೆಗಿನ ಶೀರ್ಷಿಕೆ ಪ್ರಾಯೋಜಕತ್ವವೂ 2,572 ಕೋಟಿ ರೂ. ಗೆ 2028ರವರೆಗೆ ವಿಸ್ತರಣೆಯಾಗಿದೆ. 2025ರಲ್ಲಿ ಟೂರ್ನಿಯ ವೀಕ್ಷಕರ ಸಂಖ್ಯೆಯೂ ಏರಿಕೆಯಾಗಿದೆ. ಆರ್ಸಿಬಿ-ಪಂಜಾಬ್ ನಡುವಿನ ಫೈನಲ್ ಪಂದ್ಯ 67.8 ಕೋಟಿ ವೀಕ್ಷಣೆ ಕಂಡಿತ್ತು.
ಆರ್ಸಿಬಿ ಕಳೆದ ಆವೃತ್ತಿಯ ನಂತರ 1,946 ಕೋಟಿ ರೂ. ಬ್ರ್ಯಾಂಡ್ ಮೌಲ್ಯದೊಂದಿಗೆ ಐಪಿಎಲ್ ತಂಡಗಳಲ್ಲಿ 2ನೇ ಸ್ಥಾನದಲ್ಲಿತ್ತು. ಆದರೆ "ಈ ಸಲ ಕಪ್ ನಮ್ದೇ' ಘೋಷವಾಕ್ಯ ನಿಜವಾಗುವುದರೊಂದಿಗೆ ಆರ್ಸಿಬಿ, 350ಕ್ಕೂ ಅಧಿಕ ಕೋಟಿ ರೂ. ಬ್ರ್ಯಾಂಡ್ ಮೌಲ್ಯ ಹೆಚ್ಚಿಸಿಕೊಂಡು ಅಗ್ರಸ್ಥಾನಕ್ಕೇರಿದೆ. ಚೆನ್ನೈ ಸೂಪರ್ಕಿಂಗ್ಸ್ (₹2,015 ಕೋಟಿ) ಅಗ್ರಸ್ಥಾನದಿಂದ 3ನೇ ಸ್ಥಾನಕ್ಕೆ ಕುಸಿತ ಕಂಡಿದೆ. ಮುಂಬೈ ಇಂಡಿಯನ್ಸ್ (₹2,075 ಕೋಟಿ) 4ರಿಂದ 2ನೇ ಸ್ಥಾನಕ್ಕೇರಿದೆ. 3 ಬಾರಿಯ ಚಾಂಪಿಯನ್ ಕೋಲ್ಕತ ನೈಟ್ರೈಡರ್ಸ್ (₹1,947 ಕೋಟಿ) 3ರಿಂದ 4ನೇ ಸ್ಥಾನಕ್ಕೆ ಕುಸಿದಿದೆ.
ಪಂಜಾಬ್ ಗರಿಷ್ಠ ಪ್ರಗತಿ: ಬಾಲಿವುಡ್ ನಟಿ ಪ್ರೀತಿ ಝಿಂಟಾ ಸಹ-ಮಾಲೀಕತ್ವದ ಪಂಜಾಬ್ ಕಿಂಗ್ಸ್ ತಂಡ ಈ ಬಾರಿ ಶ್ರೇಯಸ್ ಅಯ್ಯರ್ ಸಾರಥ್ಯದೊಂದಿಗೆ ಐಪಿಎಲ್ನಲ್ಲಿ 11 ವರ್ಷಗಳ ಬಳಿಕ ಫೈನಲ್ ಪ್ರವೇಶಿಸಿ ರನ್ನರ್ಅಪ್ ಸ್ಥಾನ ಗಳಿಸುವುದರೊಂದಿಗೆ ಸರ್ವಾಧಿಕ ಶೇ.39.6 ಮೌಲ್ಯ ವೃದ್ಧಿಸಿಕೊಂಡಿದೆ. ಪಂಜಾಬ್ ಈಗ ₹1,209 ಕೋಟಿ ಬ್ರ್ಯಾಂಡ್ ಮೌಲ್ಯ ಪಡೆದುಕೊಂಡಿದೆ.
ಐಪಿಎಲ್ ತಂಡಗಳ ಹಾಲಿ ಬ್ರ್ಯಾಂಡ್ ಮೌಲ್ಯ
ಆರ್ಸಿಬಿ-ಬೆಂಗಳೂರು: ₹2,307 ಕೋಟಿ
ಮುಂಬೈ ಇಂಡಿಯನ್ಸ್: ₹2,075 ಕೋಟಿ
ಚೆನ್ನೈ ಸೂಪರ್ಕಿಂಗ್ಸ್: ₹2,015 ಕೋಟಿ
ಕೋಲ್ಕತ ನೈಟ್ರೈಡರ್ಸ್: ₹1,947 ಕೋಟಿ
ಸನ್ರೈಸರ್ಸ್ ಹೈದರಾಬಾದ್: ₹1,320 ಕೋಟಿ
ಡೆಲ್ಲಿ ಕ್ಯಾಪಿಟಲ್ಸ್: ₹1,303 ಕೋಟಿ
ರಾಜಸ್ಥಾನ ರಾಯಲ್ಸ್: ₹1,252 ಕೋಟಿ
ಗುಜರಾತ್ ಟೈಟಾನ್ಸ್: ₹1,217 ಕೋಟಿ
ಪಂಜಾಬ್ ಕಿಂಗ್ಸ್: ₹1,209 ಕೋಟಿ
ಲಖನೌ ಸೂಪರ್ಜೈಂಟ್ಸ್: ₹1,046 ಕೋಟಿ