

RCB : ಪ್ರಸ್ತುತ ನಡೆಯುತ್ತಿರುವ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಮತ್ತೊಂದು ನಿರ್ಣಾಯಕ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು ತವರು ನೆಲದಲ್ಲಿ ಎದುರಿಸಲಿದೆ. ಐಪಿಎಲ್ ಪ್ರಶಸ್ತಿಯನ್ನು ಒಮ್ಮೆಯೂ ಗೆಲ್ಲದ ಆರ್‌ಸಿಬಿ ಈ ಬಾರಿ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡುತ್ತಿದೆ. ಆದರೆ, ಈ ಮೆಗಾ ಲೀಗ್‌ನಲ್ಲಿ ಒಳ್ಳೆಯ ಟ್ರ್ಯಾಕ್ ರೆಕಾರ್ಡ್ ಹೊಂದಿರುವ ಮುಂಬೈ ಇಂಡಿಯನ್ಸ್ ತಂಡ ಈ ಭಾರಿ ನೀರಸ ಪ್ರದರ್ಶನ ನೀಡುತ್ತಿದೆ.
ಬೆಂಗಳೂರು ತಂಡ ತನ್ನ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಗೆದ್ದಿದ್ದರೆ, ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ ತನ್ನ ನಾಲ್ಕು ಪಂದ್ಯಗಳಲ್ಲಿ ಕೇವಲ ಒಂದನ್ನು ಮಾತ್ರ ಗೆದ್ದಿದೆ. ಬ್ಯಾಟಿಂಗ್ ಸಮಸ್ಯೆಗಳು ಮುಂಬೈ ತಂಡವನ್ನು ಕಾಡುತ್ತಿದೆ. ಇದೇ ಸಂದರ್ಭದಲ್ಲಿ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ತಂಡಕ್ಕೆ ಮರಳಿರುವುದರಿಂದ ತಂಡದ ಬಲ ದ್ವಿಗುಣಗೊಂಡಿದೆ. ಸೋಮವಾರದ ಪಂದ್ಯಕ್ಕೆ ಬುಮ್ರಾ ಲಭ್ಯರಿರುತ್ತಾರೆ ಎಂದು ಮುಂಬೈ ಕೋಚ್ ಜಯವರ್ಧನೆ ಬಹಿರಂಗಪಡಿಸಿರುವುದರಿಂದ ಬೆಂಗಳೂರಿನ ಬ್ಯಾಟಿಂಗ್ ಮತ್ತು ಬುಮ್ರಾ ಬೌಲಿಂಗ್ ನಡುವಿನ ಹೋರಾಟವಾಗಿ ಮಾರ್ಪಟ್ಟಿದೆ. ಮತ್ತೊಂದೆಡೆ, ಮೊದಲ ಎರಡೂ ಪಂದ್ಯಗಳನ್ನು ಗೆದ್ದು ಬಲ ಪ್ರದರ್ಶಿಸಿದ್ದ ಆರ್‌ಸಿಬಿ, ಕಳೆದ ಪಂದ್ಯದಲ್ಲಿ ಗುಜರಾತ್ ವಿರುದ್ಧ ಸೋತಿತು. ಬೆಂಗಳೂರು ಮತ್ತೆ ಹಳಿಗೆ ಮರಳಲು ನೋಡುತ್ತಿದೆ.
ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಬಲಿಷ್ಠ ಸ್ಟಾರ್ ಬ್ಯಾಟ್ಸ್‌ಮನ್‌ಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ. ಹಿಟ್‌ಮ್ಯಾನ್ ರೋಹಿತ್ ಶರ್ಮ ಆಡಿದ ಮೂರು ಪಂದ್ಯಗಳಲ್ಲಿಯೂ ಪ್ರಭಾವ ಬೀರಲು ಸಾಧ್ಯವಾಗಿಲ್ಲ. ಹೈದರಾಬಾದ್ ಆಟಗಾರ ತಿಲಕ್ ವರ್ಮ ಕೂಡ ಕಳಪೆ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ. ಮುಂಬೈ ತಂಡವು ಇಲ್ಲಿಯವರೆಗೆ ನಾಲ್ಕು ಪಂದ್ಯಗಳಲ್ಲಿ ಕೇವಲ ಎರಡು ಅರ್ಧಶತಕಗಳನ್ನು ದಾಖಲಿಸಿದೆ ಅಂದಾಗಲೇ ತಂಡದ ಬ್ಯಾಟಿಂಗ್ ಪರಿಸ್ಥಿತಿಯನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು.
ಸೂರ್ಯಕುಮಾರ್ ಯಾದವ್ ಮತ್ತು ರಿಕಲ್ಟನ್ ತಲಾ ಒಂದು ಅರ್ಧಶತಕ ಗಳಿಸಿದ್ದಾರೆ. ಅಭ್ಯಾಸದ ಸಮಯದಲ್ಲಿ ಗಾಯದಿಂದಾಗಿ ಲಖನೌ ವಿರುದ್ಧದ ಪಂದ್ಯವನ್ನು ತಪ್ಪಿಸಿಕೊಂಡಿದ್ದ ರೋಹಿತ್ ಶರ್ಮ ಇಂದಿನ ಪಂದ್ಯದಲ್ಲಿ ಆಡುವ ಸಾಧ್ಯತೆಯಿದೆ. ಇತ್ತೀಚಿನ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಸೂರ್ಯಕುಮಾರ್ ತಮ್ಮ ಪ್ರದರ್ಶನವನ್ನು ಮುಂದುವರಿಸುತ್ತಾರೆ ಎಂದು ಮ್ಯಾನೇಜ್‌ಮೆಂಟ್ ಆಶಿಸಿದೆ. ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್‌ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಅವರು ಬ್ಯಾಟಿಂಗ್‌ನಲ್ಲಿ ಹೆಚ್ಚು ಆಕ್ರಮಣಕಾರಿಯಾಗಿ ಆಡಬೇಕಾಗಿದೆ.
ಲಖನೌ ವಿರುದ್ಧದ ಪಂದ್ಯದಲ್ಲಿ ಕೈಯಲ್ಲಿ ವಿಕೆಟ್‌ಗಳಿದ್ದರೂ ದೊಡ್ಡ ಹೊಡೆತಗಳನ್ನು ಆಡಲು ಕಷ್ಟಪಟ್ಟ ಮುಂಬೈ, ಅಭ್ಯಾಸದಲ್ಲಿ ತಮ್ಮ ನ್ಯೂನತೆಗಳತ್ತ ಗಮನಹರಿಸಿತು. ಬೌಲ್ಟ್, ಪಾಂಡ್ಯ, ಅಶ್ವಿನಿ ಕುಮಾರ್, ದೀಪಕ್ ಚಾಹರ್ ಮತ್ತು ವಿಘ್ನೇಶ್ ಪುತ್ತೂರ್ ರೂಪದಲ್ಲಿ ಮುಂಬೈ ಉತ್ತಮ ಬೌಲಿಂಗ್ ಪಡೆಯನ್ನು ಹೊಂದಿದೆ. ಬುಮ್ರಾ ಆಗಮನದೊಂದಿಗೆ, ಮುಂಬೈನ ಬೌಲಿಂಗ್ ಪಡೆ ಇನ್ನಷ್ಟು ಬಲಿಷ್ಠವಾಗಿದೆ.
ಇನ್ನು ಐಪಿಎಲ್ ಆರಂಭದಿಂದಲೂ ಅದೇ ಫ್ರಾಂಚೈಸ್ ಅನ್ನು ಪ್ರತಿನಿಧಿಸುತ್ತಿರುವ ವಿರಾಟ್ ಕೊಹ್ಲಿಯ ಮೇಲೆ ಬೆಂಗಳೂರು ಹೆಚ್ಚು ಅವಲಂಬಿತವಾಗಿದೆ. ಈ ಸೀಸನ್ನಲ್ಲಿ ಆರಂಭಿಕ ಪಂದ್ಯದಲ್ಲಿ ವಿರಾಟ್ ಅರ್ಧಶತಕ ಗಳಿಸಿದರು. ಆದರೆ, ಅಂದಿನಿಂದ ಅದೇ ವೇಗವನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಮತ್ತೊಬ್ಬ ಆರಂಭಿಕ ಆಟಗಾರ ಫಿಲ್ ಸಾಲ್ಟ್ ಅವರಿಗೆ ಹೆಚ್ಚು ಜವಾಬ್ದಾರಿಯುತ ಇನ್ನಿಂಗ್ಸ್ ಅಗತ್ಯವಿದೆ. ನಾಯಕ ರಜತ್ ಪಾಟಿದಾರ್ ಮತ್ತು ದೇವದತ್ ಪಡಿಕ್ಕಲ್ ಮಧ್ಯಮ ಕ್ರಮಾಂಕದಲ್ಲಿ ಪ್ರಭಾವ ಬೀರಲು ಸಾಧ್ಯವಾಗುತ್ತಿಲ್ಲ. ಇಬ್ಬರೂ ಸ್ಥಿರತೆಯನ್ನು ತೋರಿಸಬೇಕಾಗಿದೆ.
ಇಂಗ್ಲೆಂಡ್ ಆಲ್‌ರೌಂಡರ್ ಲಿವಿಂಗ್‌ಸ್ಟೋನ್ ಮತ್ತು ಜಿತೇಶ್ ಶರ್ಮಾ ಉತ್ತಮ ಸಂಪರ್ಕದಲ್ಲಿದ್ದರೂ ಕೃನಾಲ್ ಪಾಂಡ್ಯ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ನೀಡಬೇಕಾಗಿದೆ. ಈ ಹಿಂದೆ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಿದ್ದ ಟಿಮ್ ಡೇವಿಡ್ ಈ ಪಂದ್ಯದಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಬೌಲಿಂಗ್ ವಿಷಯಕ್ಕೆ ಬಂದರೆ, ಹಿಂದಿನ ಸೀಸನ್ಗಳಿಗೆ ಹೋಲಿಸಿದರೆ ಬೆಂಗಳೂರು ಬೌಲಿಂಗ್ ಪಡೆ ಈ ಬಾರಿ ಬಲಿಷ್ಠವಾಗಿ ಕಾಣುತ್ತದೆ.
ಆಸ್ಟ್ರೇಲಿಯಾದ ವೇಗಿ ಹ್ಯಾಜಲ್‌ವುಡ್, ಐಪಿಎಲ್‌ನ ಅನುಭವಿಗಳಾದ ಭುವನೇಶ್ವರ್ ಕುಮಾರ್ ಮತ್ತು ಯಶ್ ದಯಾಳ್ ಅವರೊಂದಿಗೆ ವೇಗದ ಜವಾಬ್ದಾರಿಯನ್ನು ಹೊರಲಿದ್ದಾರೆ. ಕೃನಾಲ್ ಪಾಂಡ್ಯ, ಲಿವಿಂಗ್‌ಸ್ಟೋನ್ ಮತ್ತು ಸುಯಾಶ್ ಶರ್ಮ ಸ್ಪಿನ್ ಜವಾಬ್ದಾರಿಗಳನ್ನು ಹಂಚಿಕೊಳ್ಳಲಿದ್ದಾರೆ. (ಏಜೆನ್ಸೀಸ್)