

ಅಬುಧಾಬಿ: ‘ಈ ಸಲ ಕಪ್ ನಮ್ದೆ.. ಈ ಸಲ ಕಪ್ ನಮ್ದೆ’ ಎಂದು ಜಪಿಸುತ್ತಿದ್ದ ಆರ್‌ಸಿಬಿ ತಂಡದ ಅಭಿಮಾನಿಗಳ ಪ್ರಾರ್ಥನೆ ಈ ಬಾರಿಯೂ ಲಿಸಲಿಲ್ಲ. ಐಪಿಎಲ್-13ರಲ್ಲಿ ಶುಕ್ರವಾರ ನಡೆದ ಎಲಿಮಿನೇಟರ್ ಕದನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸನ್‌ರೈಸರ್ಸ್ ತಂಡಕ್ಕೆ 6 ವಿಕೆಟ್‌ಗಳಿಂದ ಶರಣಾಗುವ ಮೂಲಕ ಲೀಗ್‌ನಿಂದ ಹೊರಬಿದ್ದಿತು. ಸತತ 5ನೇ ಸೋಲನುಭವಿಸಿದ ಕೊಹ್ಲಿ ಬಳಗ ಟೂರ್ನಿಯಲ್ಲಿ 4ನೇ ಸ್ಥಾನಕ್ಕೆ ತೃಪ್ತಿಪಡುವ ಮೂಲಕ ಪ್ರಸಕ್ತ ವರ್ಷದ ಚುಟುಕು ಕ್ರಿಕೆಟ್ ಅಭಿಯಾನಕ್ಕೆ ವಿದಾಯ ಹೇಳಿತು.
ಶೇಖ್ ಜಯೆದ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ, ಸ್ಫೋಟಕ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ (56 ರನ್, 43 ಎಸೆತ, 5 ಬೌಂಡರಿ) ಏಕಾಂಗಿ ನಿರ್ವಹಣೆ ನಡುವೆಯೂ ವೇಗಿ ಜೇಸನ್ ಹೋಲ್ಡರ್ (25ಕ್ಕೆ 3) ಮಾರಕ ದಾಳಿ ನಲಗಿ 7 ವಿಕೆಟ್‌ಗೆ 131 ರನ್ ಗಳಿಸಲಷ್ಟೇ ಶಕ್ತವಾಯಿತು. ಪ್ರತಿಯಾಗಿ ಆರ್‌ಸಿಬಿ ಬೌಲರ್‌ಗಳ ಪ್ರಬಲ ನಿರ್ವಹಣೆ ನಡುವೆಯೂ ಸನ್‌ರೈಸರ್ಸ್, ಕೇನ್ ವಿಲಿಯಮ್ಸನ್ (50*ರನ್, 44 ಎಸೆತ, 2 ಬೌಂಡರಿ, 2 ಸಿಕ್ಸರ್) ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ 19.4 ಓವರ್‌ಗಳಲ್ಲಿ 4 ವಿಕೆಟ್‌ಗೆ 132 ರನ್‌ಗಳಿಸಿ ಗೆಲುವಿನ ನಗೆ ಬೀರಿತು.
ಸಾಧಾರಣ ಮೊತ್ತ ಬೆನ್ನಟ್ಟಿದ ಸನ್‌ರೈಸರ್ಸ್ ಮೊದಲ ಓವರ್‌ನಲ್ಲೇ ಶ್ರೀವತ್ಸ ಗೋಸ್ವಾಮಿ (0) ವಿಕೆಟ್ ಕಳೆದುಕೊಂಡಿತು. ಬಳಿಕ ಡೇವಿಡ್ ವಾರ್ನರ್ (17) ಹಾಗೂ ಕನ್ನಡಿಗ ಮನೀಷ್ ಪಾಂಡೆ (24ರನ್, 21 ಎಸೆತ, 3 ಬೌಂಡರಿ, 1 ಸಿಕ್ಸರ್) ಜೋಡಿ ಕೆಲಕಾಲ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿತು. ಈ ಜೋಡಿ 2ನೇ ವಿಕೆಟ್‌ಗೆ 41 ರನ್ ಜತೆಯಾಟವಾಡಿದ್ದ ವೇಳೆ ವೇಗಿ ಮೊಹಮದ್ ಸಿರಾಜ್ ಆಘಾತ ನೀಡಿದರು. ಬಳಿಕ ಬಂದ ಪ್ರಿಯಂ ಗಾರ್ಗ್ (9), ಬಂದಷ್ಟೇ ವೇಗವಾಗಿ ವಾಪಸಾದರು. ಸನ್‌ರೈಸರ್ಸ್ 67 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡ ವೇಳೆ ಜತೆಯಾದ ಕೇನ್ ವಿಲಿಯಮ್ಸನ್ ಹಾಗೂ ಜೇಸನ್ ಹೋಲ್ಡರ್ (20*ರನ್, 19 ಎಸೆತ, 2 ಬೌಂಡರಿ) ಜೋಡಿ ಮುರಿಯದ 5ನೇ ವಿಕೆಟ್‌ಗೆ 65 ರನ್‌ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿತು.
*ಎಬಿಡಿ ಏಕಾಂಗಿ ಹೋರಾಟ