

RCB: 17 ವರ್ಷಗಳಿಂದ ಒಂದು ಬಾರಿಯೂ ಐಪಿಎಲ್ ಟ್ರೋಫಿಯನ್ನು ಎತ್ತಿಹಿಡಿಯದ ರಾಯಲ್ ಚಾಲೆಂಜರ್ಸ್ ಬೆಂಗಳೂರು, 18ನೇ ಆವೃತ್ತಿಯಲ್ಲಿ ರೋಚಕ ಜಯದ ಮೂಲಕ ಕಪ್ ಗೆದ್ದಿದ್ದು ಇಡೀ ಕ್ರಿಕೆಟ್ ಲೋಕವನ್ನೇ ಬೆರಗುಗೊಳಿಸಿತು. 2025ರ ಜೂನ್ 3ರಂದು ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 6 ರನ್ಗಳಿಂದ ಮಣಿಸಿದ ಆರ್ಸಿಬಿ, ಐಪಿಎಲ್ನಲ್ಲಿ ಹೊಸ ದಾಖಲೆಯನ್ನೇ ನಿರ್ಮಿಸಿತು.
ಇದೀಗ 2026ರ ಐಪಿಎಲ್ 19ನೇ ಆವತ್ತಿಗೂ ಮುಂಚಿತವಾಗಿ ನಡೆಯುವ ಹರಾಜು ಪ್ರಕ್ರಿಯೆಗೆ ದಿನಗಣನೆ ಶುರುವಾಗಿದೆ. ಆ್ಯಕ್ಷನ್ನಲ್ಲಿ ತಮ್ಮ ತಂಡದ ಒಂದಷ್ಟು ಆಟಗಾರರನ್ನು ಉಳಿಸಿಕೊಳ್ಳುವುದು, ಬಿಡುವುದು ಆಯಾ ಫ್ರಾಂಚೈಸಿಯ ಪ್ರಮುಖ ನಿರ್ಧಾರಗಳಾಗಿರುತ್ತವೆ. ಈ ಸಾಲಿನಲ್ಲಿ ಆರ್ಸಿಬಿ ಮುಂಚೂಣಿಯಲ್ಲಿದ್ದು, ತಂಡದ ನಾಲ್ವರಿಗೆ ಈ ಬಾರಿಯ ಹರಾಜಿನಲ್ಲಿ ಗೇಟ್ಪಾಸ್ ಕೊಡಲು ನಿರ್ಧರಿಸಿದೆ ಎಂದು ಕ್ರಿಕೆಟ್ ಮೂಲಗಳು ತಿಳಿಸಿವೆ.
ಐಪಿಎಲ್ 2025ರ ಮೆಗಾ ಡೀಲ್ನಲ್ಲಿ, ಇಂಗ್ಲೆಂಡ್ನ ಸ್ಟಾರ್ ಆಲ್ರೌಂಡರ್ ಲಿಯಮ್ ಲಿವಿಂಗ್ಸ್ಟೋನ್ ಅವರನ್ನು 8.75 ಕೋಟಿ ರೂ.ಗೆ ಆರ್ಸಿಬಿ ಖರೀದಿಸಿತು. ಆದಾಗ್ಯೂ, ಈ ಸೀಸನ್ನಲ್ಲಿ ಅದ್ಭುತ ಪ್ರದರ್ಶನ ನೀಡಲು ವಿಫಲರಾದ ಲಿವಿಂಗ್ಸ್ಟೋನ್, 10 ಪಂದ್ಯಗಳಲ್ಲಿ 16ರ ಸರಾಸರಿಯಲ್ಲಿ ಕೇವಲ 112 ರನ್ ಗಳಿಸಲಷ್ಟೇ ಶಕ್ತರಾದರು. ಬೌಲಿಂಗ್ನಲ್ಲಿ ಕೇವಲ ಎರಡು ವಿಕೆಟ್ಗಳನ್ನು ಪಡೆದರು. ಈ ಕಳಪೆ ಫಾರ್ಮ್ನಿಂದಾಗಿ, 2026ರ ಆವೃತ್ತಿಗೆ ಲಿಯಮ್ರನ್ನು ಕೈಬಿಡಲು ಇದೀಗ ಆರ್ಸಿಬಿ ಮುಂದಾಗಿದೆ.
ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಜಮ್ಮು-ಕಾಶ್ಮೀರದ ವೇಗಿ ರಸಿಕ್ ಸಲಾಂರನ್ನು 6 ಕೋಟಿ ರೂ.ಗೆ ಖರೀದಿಸಿದ ಆರ್ಸಿಬಿ, ಕೇವಲ ಎರಡು ಪಂದ್ಯಗಳಲ್ಲಿ ಮಾತ್ರ ಅವರಿಗೆ ಆಡಲು ಅವಕಾಶ ನೀಡಿತು. ಇವರನ್ನು ಮುಂದಿನ ಆವೃತ್ತಿಯಲ್ಲಿ ಮುಂದುವರಿಸಲು ಫ್ರಾಂಚೈಸಿ ಒಪ್ಪಿಗೆ ಸೂಚಿಸಿಲ್ಲ ಎನ್ನಲಾಗಿದೆ. ಇಲ್ಲಿಯವರೆಗೆ ಒಟ್ಟು 13 ಐಪಿಎಲ್ ಪಂದ್ಯಗಳನ್ನಾಡಿರುವ ಅವರು, 40.90 ಸರಾಸರಿ ಮತ್ತು 10.62ರ ಎಕಾನಮಿಯಲ್ಲಿ 10 ವಿಕೆಟ್ಗಳನ್ನು ಕಬಳಿಸಿದ್ದಾರೆ.
ಎಡಗೈ ವೇಗಿ ಯಶ್ ದಯಾಳ್ ಅವರನ್ನೂ ರಿಲೀಸ್ ಮಾಡಬಹುದು ಎಂಬ ಸುದ್ದಿಗಳು ಹೊರಬಿದ್ದಿವೆ. ಡೆತ್ ಓವರ್ಗಳಲ್ಲಿ ಅತ್ಯುತ್ತಮ ಬೌಲಿಂಗ್ ಕೊಡುಗೆ ನೀಡಿರುವ ಯಶ್, ಕಳೆದ ಆವೃತ್ತಿಯಲ್ಲಿ 13 ವಿಕೆಟ್ಗಳನ್ನು ಪಡೆದಿದ್ದಾರೆ. ಅವರ ಒಟ್ಟಾರೆ ಬೌಲಿಂಗ್ ಸರಾಸರಿ ಉನ್ನತ ಮಟ್ಟದಲ್ಲಿದೆ. ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್ವುಡ್ರಂತಹ ಅನುಭವಿ ಬೌಲರ್ಗಳ ಜತೆಗೆ ಕಣಕ್ಕಿಳಿಯುವ ದಯಾಳ್ ಸದ್ಯ ಆರ್ಸಿಬಿ ಅಭಿಮಾನಿಗಳ ವಿಶ್ವಾಸವನ್ನು ಗಳಿಸಿದ್ದಾರೆ. ಈ ಮಧ್ಯೆ ಅವರನ್ನು ರಿಟೈನ್ ಮಾಡಿಕೊಳ್ಳದೆ, ಕೈಬಿಡಲು ನಿರ್ಧರಿಸಿರುವುದು ಅಚ್ಚರಿಯೇ ನಡೆ ಎನ್ನಬಹುದು.
ಎಡಗೈ ಸ್ಪಿನ್ನರ್ ಸ್ವಪ್ನಿಲ್ ಸಿಂಗ್ಗೆ ಗೇಟ್ಪಾಸ್ ಸಿಗುವ ಎಲ್ಲ ಸಾಧ್ಯತೆಗಳಿವೆ. ಕಳೆದ ಆವೃತ್ತಿಯಲ್ಲಿ ಆರ್ಟಿಎಂ ಆಯ್ಕೆಯ ಮೂಲಕ ಅವರನ್ನು ಆಯ್ಕೆ ಮಾಡಿಕೊಂಡ ಫ್ರಾಂಚೈಸಿ, ಏಳು ಪಂದ್ಯಗಳಲ್ಲಿ ಆಡಲು ಅವರಿಗೆ ಅವಕಾಶ ಮಾಡಿಕೊಟ್ಟಿತು. ಇದರಲ್ಲಿ ಕೇವಲ ಆರು ವಿಕೆಟ್ಗಳನ್ನು ಮಾತ್ರ ಸ್ವಪ್ನಿಲ್ ಪಡೆದರು. ಇನ್ನು ಕೃನಾಲ್ ಪಾಂಡ್ಯ ಅದ್ಭುತ ಪ್ರದರ್ಶನದ ಮೂಲಕ ಆರ್ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದು ಆರ್ಸಿಬಿ ಅಭಿಮಾನಿಗಳಿಗೆ ಗೊತ್ತೇ ಇದೆ. ಎಡಗೈ ಸ್ಪಿನ್ನರ್ ಆಗಿ ಚಮತ್ಕಾರಿ ಬೌಲಿಂಗ್ ದಾಳಿ ಮಾಡಿದರು. ಅವರಂತೆ ಸ್ವಪ್ನಿಲ್ ಕೂಡ ಮಾಡದ ಹಿನ್ನೆಲೆ ಇದೀಗ ಈ ವರ್ಷದ ಹರಾಜಿನಲ್ಲಿ ಸಿಂಗ್ ಬದಲಿಗೆ ಮತ್ತೋರ್ವ ಸ್ಪಿನ್ನರ್ನನ್ನು ಕರೆತರಲು ಆರ್ಸಿಬಿ ಚಿಂತಿಸಿದೆ,(ಏಜೆನ್ಸೀಸ್).