

ನವದೆಹಲಿ: ಇಂದು ಮತ್ತು ನಾಳೆ (ನ.24&25) ನಡೆಯಲಿರುವ ಐಪಿಎಲ್ ಹರಾಜಿನತ್ತ (IPL Auction) ಎಲ್ಲರ ಚಿತ್ತ ಮೂಡಿದ್ದು, ಯಾವ ಸ್ಟಾರ್ ಆಟಗಾರರನ್ನು ಫ್ರಾಂಚೈಸಿಗಳು ಖರೀದಿಸಲಿದೆ? ಎಷ್ಟು ಕೋಟಿ ಹಣಕ್ಕಾಗಿ ಬಿಡ್ ಮಾಡಲಿದೆ ಎಂಬ ಲೆಕ್ಕಾಚಾರಗಳು ಸದ್ಯ ನೋಡುಗರ ತಲೆಕೆಡಿಸಿದೆ. ಆದರೆ, ಮೊದಲ ದಿನದ ಹರಾಜು ಪ್ರಕ್ರಿಯೆ ಸದ್ಯ ಬಹುತೇಕರನ್ನು ಅಚ್ಚರಿಗೆ ದೂಡಿದೆ. ಲೆಕ್ಕಾಚಾರಗಳೆನೋ ಜೋರಾಗಿದ್ದರೂ, ಟಾರ್ಗೆಟ್ ಮಾಡಬೇಕಿದ್ದ ಆಟಗಾರರನ್ನು ಖರೀದಿ ಮಾಡುವಲ್ಲಿ ಆಯಾ ತಂಡಗಳು ವಿಫಲವಾಗಿರುವುದು ಕ್ರಿಕೆಟ್ ಪ್ರಿಯರಲ್ಲಿ (RCB Fans) ನಿರಾಸೆ ಮೂಡಿಸಿದೆ.
ರಿಷಭ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ದಾಖಲೆ ಮೊತ್ತಕ್ಕೆ ಖರೀದಿ ಆಗುವ ಮೂಲಕ ಕನ್ನಡಿಗ ದೇವದತ್ತ ಪಡಿಕ್ಕಲ್ ಮತ್ತು ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್ ಡೇವಿಡ್ ವಾರ್ನರ್ರನ್ನು ಅನ್ಸೋಲ್ಡ್ ಆಟಗಾರರ ಪಟ್ಟಿಗೆ ಸೇರುವಂತೆ ಮಾಡಿದ್ದಾರೆ. ಇನ್ನು ಮೊದಲ ದಿನದ ಅಂತ್ಯಕ್ಕೆ ಐಪಿಎಲ್ ಹರಾಜಿನ ಇತಿಹಾಸದಲ್ಲಿ ದಾಖಲೆ ನಿರ್ಮಿಸಿರುವ ಪಂತ್, 27 ಕೋಟಿ ರೂ.ಗೆ ಲಖನೌ ಸೂಪರ್ ಜೈಂಟ್ಸ್ ಪಾಲಾಗಿದ್ದಾರೆ. ಇದು ಕೆಲವರಿಗೆ ಸಂತಸ ತಂದರೆ, ಇನ್ನೂ ಕೆಲವರಿಗೆ ತೀರ ಅಸಮಾಧಾನ ನೀಡಿದೆ. ಕನ್ನಡಿಗ ಕೆ.ಎಲ್. ರಾಹುಲ್ಗೆ ಹೆಚ್ಚಿಸಬೇಕಿದ್ದ ಬಿಡ್ಡಿಂಗ್, ಯಾರಿಂದಲೂ ಬರದಿದ್ದು ಕ್ರಿಕೆಟ್ ಪ್ರಿಯರಿಗೆ ಭಾರೀ ಬೇಸರ ಉಂಟುಮಾಡಿದೆ.
ವರದಿಗಳು ಹಾಗೂ ಕ್ರಿಕೆಟ್ ಅಭಿಮಾನಿಗಳ ಪ್ರಕಾರ, ಕೆ.ಎಲ್. ರಾಹುಲ್ ಖಂಡಿತವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲಾಗುತ್ತಾರೆ. ಈ ಬಗ್ಗೆ ಎರಡನೇ ಮಾತಿಲ್ಲ ಎನ್ನಲಾಗಿತ್ತು. ಆರ್ಸಿಬಿ ಮ್ಯಾನೇಜ್ಮೆಂಟ್ ಕೂಡ ರಾಹುಲ್ರನ್ನು ಹರಾಜಿನಲ್ಲಿ ಕರೆದುಕೊಳ್ಳುವ ಪ್ಲ್ಯಾನ್ನಲ್ಲಿದ್ದು, ಬಿಡ್ಡಿಂಗ್ನಲ್ಲಿ ಪೈಪೋಟಿ ಕೊಡಲು ಮುಂದಾಗುವ ಇತರೆ ಫ್ರಾಂಚೈಸಿಗಳಿಗೆ ಬಿಟ್ಟುಕೊಡುವುದಿಲ್ಲ ಎಂದೇ ನಂಬಲಾಗಿತ್ತು. ಆದರೆ, ಎಲ್ಲಾ ಭರವಸೆ, ಲೆಕ್ಕಾಚಾರಗಳು ಇಂದು ನೋಡ ನೋಡುತ್ತಿದ್ದಂತೆಯೇ ಮಣ್ಣು ಪಾಲಾಯಿತು.
ಒಂದೆಡೆ ಮೊಹಮ್ಮದ್ ಸಿರಾಜ್ ಹೆಸರು ಕೇಳಿದ ಆರ್ಸಿಬಿ ಪ್ರಾಯಶಃ ತಂಡಕ್ಕೆ ಖರೀದಿ ಮಾಡಕೊಳ್ಳಲಿದೆ ಎಂದು ನಿರೀಕ್ಷಿಸಲಾಯಿತು. ಆದರೆ, ಕಡೆಯದಾಗಿ ಒಂದು ಮಾತು ಫ್ರಾಂಚೈಸಿಗೆ ಕೇಳಿದಾಗಲೂ ನಮಗೆ ಸಿರಾಜ್ ಬೇಡ ಎಂದಿದ್ದು ಫ್ಯಾನ್ಸ್ಗೆ ಸರಿ ಅನಿಸಲಿಲ್ಲ. ಇವರ ನಂತರ ಬಂದ ಯಜುವೇಂದ್ರ ಚಹಲ್ಗೂ ಬಿಡ್ ಮಾಡದ ಮ್ಯಾನೇಜ್ಮೆಂಟ್ ಅಲ್ಲಿಯೂ ಪ್ಲ್ಯಾನಿಂಗ್ ಮಾಡಲಿಲ್ಲ. ಅವರನ್ನು ಸಹ ಕೈಬಿಟ್ಟರು. ಅಂತಿಮವಾಗಿ ಕೆ.ಎಲ್. ರಾಹುಲ್ ಹೆಸರು ಕೇಳಿಬಂದಾಗ ಖಂಡಿತವಾಗಿ ಖರೀದಿ ಮಾಡುತ್ತಾರೆ ಎಂಬ ಫ್ಯಾನ್ಸ್ ಭರವಸೆ ಸಂಪೂರ್ಣವಾಗಿ ಹುಸಿಯಾಯಿತು. ಇದು ಮ್ಯಾನೇಜ್ಮೆಂಟ್ಗೆ ಯಾರನ್ನು ಆಯ್ಕೆ ಮಾಡಿಕೊಳ್ಳಬೇಕು, ಹಣ ಹೇಗೆ ವ್ಯಯಿಸಬೇಕು ಅನ್ನೋದು ಗೊತ್ತಿಲ್ಲ ಎಂಬುದನ್ನು ಒತ್ತಿ ಹೇಳಿತು.
ಮೊದಲಿಗೆ ಬಿಡ್ಡಿಂಗ್ಗೆ ಇಳಿದ ಆರ್ಸಿಬಿ ಮ್ಯಾನೇಜ್ಮೆಂಟ್, ನಂತರದಲ್ಲಿ ರಾಹುಲ್ರನ್ನು ಡೆಲ್ಲಿ ಕ್ಯಾಪಿಟಲ್ಸ್ಗೆ ಬಿಟ್ಟುಕೊಟ್ಟರು. ಇದು ಫ್ರಾಂಚೈಸಿಯ ಅಭಿಮಾನಿಗಳಿಗೆ ಭಾರೀ ಬೇಸರವಾಯಿತು. ಯಾರನ್ನೂ ಖರೀದಿ ಮಾಡಲು ಹೆಜ್ಜೆಯಿಡದ ಮ್ಯಾನೇಜ್ಮೆಂಟ್, ಕೆ.ಎಲ್. ರಾಹುಲ್ ಹೆಸರು ಕರೆದಾಗ ಖಂಡಿತ ಅವರನ್ನು ತಂಡಕ್ಕೆ ಖರೀದಿ ಮಾಡಲು ಹೆಚ್ಚಿನ ಹಣ ಬಿಡ್ ಮಾಡಲಿದೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ, ಅಭಿಮಾನಿಗಳು ಯಾವುದು ಬೇಕು ಹಾಗೂ ಯಾವುದಕ್ಕಾಗಿ ಕಾತರ ವ್ಯಕ್ತಪಡಿಸಿದ್ದರೋ, ಅದು ಅಲ್ಲಿ ನಡೆಯಲಿಲ್ಲ. ಸದ್ಯ ಈ ಸಂಗತಿ ಆರ್ಸಿಬಿ ಅಭಿಮಾನಿಗಳನ್ನು ಕೆರಳಿಸಿದ್ದು, ಜಾಲತಾಣಗಳಲ್ಲಿ ಮ್ಯಾನೇಜ್ಮೆಂಟ್ ಸದಸ್ಯರ ವಿರುದ್ಧ ತೀವ್ರ ಅಸಮಾಧಾನ ಹೊರಹಾಕುವಂತೆ ಮಾಡಿದೆ.