

ಬೆಂಗಳೂರು: ಐಪಿಎಲ್ ಟೂರ್ನಿಯಲ್ಲಿ ಅತ್ಯಂತ ನಿಷ್ಠಾವಂತ ಅಭಿಮಾನಿಗಳನ್ನು ಹೊಂದಿರುವ ತಂಡವೆಂಬ ಹೆಗ್ಗಳಿಕೆ ಹೊಂದಿರುವ ಆರ್‌ಸಿಬಿ ತಂಡ ಈ ಬಾರಿಯೂ, ಸೋಲಿನ ನಡುವೆಯೂ ಅಭಿಮಾನಿಗಳ ಬೆಂಬಲ ಉಳಿಸಿಕೊಂಡಿದೆ.
‘ಈ ಸಲ ಕಪ್ ನಮ್ದೆ’ ಎನ್ನುತ್ತಿದ್ದ ತಂಡದ ಕಟ್ಟಾ ಅಭಿಮಾನಿಗಳು ಇದೀಗ, ‘13 ವರ್ಷವೇ ಕಾದಿದ್ದೇವಂತೆ, ಇನ್ನೊಂದು ವರ್ಷವೂ ಕಾಯುವೆವು’ ಎಂದು ಆರ್‌ಸಿಬಿ ಪರ ನಿಂತಿದ್ದಾರೆ. ಆರ್‌ಸಿಬಿ ತಂಡ ಈ ಸಲವೂ ಕಪ್‌ನಿಂದ ಸಾಮಾಜಿಕ ಅಂತರ ಕಾಯ್ದುಕೊಂಡಿದೆ ಎಂಬ ವಿರೋಧಿಗಳ ಟ್ರೋಲ್‌ಗಳ ನಡುವೆಯೂ ಕಟ್ಟಾ ಅಭಿಮಾನಿಗಳು, ‘ಈ ಬಾರಿ ಕಪ್ ಗೆದ್ದರೂ ಪಟಾಕಿ ಸಿಡಿಸಲು ಅವಕಾಶವಿಲ್ಲದ ಕಾರಣ 2021ಕ್ಕೆ ಗೆಲುವನ್ನು ಮುಂದೂಡಲಾಗಿದೆ’ ಎಂದು ಸಮಾಧಾನ ಮಾಡಿಕೊಳ್ಳುತ್ತಿದ್ದಾರೆ.
ಎಲ್ಲಕ್ಕಿಂತ ಹೆಚ್ಚಾಗಿ ತಂಡದ ಆಪದ್ಬಾಂಧವ ಎಬಿಡಿ ಐಪಿಎಲ್ ಟ್ರೋಫಿ ಗೆಲುವಿಗೆ ಅತ್ಯಂತ ಅರ್ಹರು ಎಂದೂ ಶ್ಲಾಘಿಸುತ್ತಿದ್ದಾರೆ. ಕ್ರಿಕೆಟ್ ಜನಕರ ನಾಡು ಇಂಗ್ಲೆಂಡ್ ತಂಡ ಏಕದಿನ ಕ್ರಿಕೆಟ್‌ನಲ್ಲಿ ವಿಶ್ವಕಪ್ ಜಯಿಸಲು 44 ವರ್ಷಗಳ ಕಾಲ ಕಾದಿತ್ತು. ನಾವಿನ್ನೂ 13 ವರ್ಷವಷ್ಟೇ ಕಾದಿದ್ದೇವೆ ಎನ್ನುವ ಆರ್‌ಸಿಬಿ ಅಭಿಮಾನಿಗಳಿಗೂ ಕಡಿಮೆ ಇಲ್ಲ.
60 ವರ್ಷ ಕಾದರೂ ಪರವಾಗಿಲ್ಲ. ಆರ್‌ಸಿಬಿ ಆಟ ಕಳಂಕರಹಿತವಾಗಿರಬೇಕು ಎಂಬುದೂ ಕೆಲ ಅಭಿಮಾನಿಗಳ ಆಶಯವಾಗಿದೆ. ಈ ಮೂಲಕ ಸಾಮಾಜಿಕ ಜಾಲತಾಣದಲ್ಲಿ ‘ಈ ಸಲ ಕಪ್ ನಮ್ದೇ’ ಎಂಬ ಹ್ಯಾಷ್‌ಟ್ಯಾಗ್ ಮತ್ತೊಮ್ಮೆ ಭರ್ಜರಿ ಟ್ರೆಂಡಿಂಗ್‌ಗೆ ಬಂದಿದೆ.