

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ತವರಿನಾಚೆ ಆಡಿದ 4 ಪಂದ್ಯಗಳಲ್ಲೂ ಗೆದ್ದಿದ್ದರೂ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಿದ ಮೊದಲ ಎರಡೂ ಪಂದ್ಯಗಳಲ್ಲಿ ಸೋತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೀಗ ತನ್ನ ಮನೆಯಂಗಳದಲ್ಲೂ ಗೆಲುವು ಸಾಧಿಸುವ ಹಂಬಲದಲ್ಲಿದೆ. ಐಪಿಎಲ್ 18ನೇ ಆವೃತ್ತಿಯಲ್ಲಿ ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ಆರ್ಸಿಬಿಗೆ ಪಂಜಾಬ್ ಕಿಂಗ್ಸ್ ತಂಡದ ಸವಾಲು ಎದುರಾಗಲಿದೆ. ರಜತ್ ಪಾಟೀದಾರ್ ಪಡೆ ಟೂರ್ನಿಯ 5ನೇ ಜಯದೊಂದಿಗೆ ಪ್ಲೇಆಫ್ ಅವಕಾಶ ವೃದ್ಧಿಸಿಕೊಳ್ಳುವ ತವಕದಲ್ಲಿದೆ.
ಆರ್ಸಿಬಿ ತಂಡ ತವರಿನಲ್ಲಿ ಆಡಿದ ಮೊದಲೆರಡೂ ಪಂದ್ಯಗಳಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದಿತ್ತು ಮತ್ತು ಬ್ಯಾಟಿಂಗ್ ವಿಭಾಗದ ಕುಸಿತದಿಂದಾಗಿ ಸ್ಪರ್ಧಾತ್ಮಕ ಮೊತ್ತಕ್ಕೆ ತೃಪ್ತಿಪಟ್ಟಿತ್ತು. ಈ ಬಾರಿ ಆರ್ಸಿಬಿ ತವರಿನಲ್ಲೂ ತನ್ನ ಬ್ಯಾಟಿಂಗ್ ನಿರ್ವಹಣೆ ಸುಧಾರಿಸಿಕೊಳ್ಳಬೇಕಾದ ಅಗತ್ಯವಿದೆ. ಟಾಸ್ ಗೆದ್ದ ತಂಡಕ್ಕೆ ಅನುಕೂಲ ಮಾಡಿಕೊಡುವ ಚಿನ್ನಸ್ವಾಮಿ ಪಿಚ್ನಲ್ಲಿ ಆರ್ಸಿಬಿ ಸರ್ವಾಂಗೀಣ ನಿರ್ವಹಣೆ ತೋರುವುದು ಅಗತ್ಯವೆನಿಸಿದೆ.
ಸನ್ರೈಸರ್ಸ್ ಎದುರು 245 ರನ್ ರಕ್ಷಿಸಿಕೊಳ್ಳಲಾಗದೆ ಸೋತಿದ್ದ ಪಂಜಾಬ್ ಕಳೆದ ಪಂದ್ಯದಲ್ಲಿ 111 ರನ್ ರಕ್ಷಿಸಿಕೊಂಡು ಗೆದ್ದಿತ್ತು. ಹೀಗಾಗಿ ಈಡನ್, ಚೆಪಾಕ್, ವಾಂಖೆಡೆ, ಜೈಪುರದಲ್ಲಿ ತೋರಿದ ಬಲಿಷ್ಠ ನಿರ್ವಹಣೆಯನ್ನೇ ಆರ್ಸಿಬಿ ತವರಿನಲ್ಲೂ ಪುನರಾವರ್ತಿಸಿದರೆ, ತವರಿನಲ್ಲೂ ಗೆಲುವಿನ ಖಾತೆ ತೆರೆಯಬಹುದಾಗಿದೆ.
ಆರ್ಸಿಬಿ, ಪಂಜಾಬ್ ತಂಡಗಳು ಇದುವರೆಗೆ ಆಡಿದ 6 ಪಂದ್ಯಗಳಲ್ಲಿ ತಲಾ 4 ಜಯ, 2 ಸೋಲಿನೊಂದಿಗೆ 8 ಅಂಕ ಕಲೆಹಾಕಿವೆ. ರನ್ರೇಟ್ ಲೆಕ್ಕಾಚಾರದಲ್ಲಿ ಆರ್ಸಿಬಿ ತುಸು ಮೇಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡಕ್ಕೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶವೂ ಒಲಿಯಬಹುದು. ಐಪಿಎಲ್ ಪ್ರಶಸ್ತಿ ವಿಜೇತ ನಾಯಕ ಶ್ರೇಯಸ್ ಅಯ್ಯರ್ ಎದುರು ರಜತ್ ಪಾಟೀದಾರ್ ಅನನುಭವಿ ನಾಯಕತ್ವಕ್ಕು ಸತ್ವ ಪರೀಕ್ಷೆ ಎದುರಾಗಲಿದೆ.
ರನ್ಮಳೆ ನಿರೀಕ್ಷೆ
ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ರಜತ್ ಪಾಟೀದಾರ್, ಜಿತೇಶ್ ಶರ್ಮ, ಟಿಮ್ ಡೇವಿಡ್ರಂಥ ಬ್ಯಾಟರ್ಗಳಿಂದ ಕೂಡಿರುವ ಆರ್ಸಿಬಿ ತಂಡಕ್ಕೆ ಎದುರಾಳಿ ತಂಡದ ಬ್ಯಾಟರ್ಗಳಿಂದಲೂ ನಿಕಟ ಪ್ರತಿಸ್ಪರ್ಧೆ ಎದುರಾಗುವ ನಿರೀೆ ಇದೆ. ಪ್ರಿಯಾಂಶ್ ಆರ್ಯ, ಪ್ರಭ್ಸಿಮ್ರನ್, ಶ್ರೇಯಸ್ ಅಯ್ಯರ್, ನೇಹಲ್ ವಧೇರ, ಶಶಾಂಕ್ ಸಿಂಗ್, ಮ್ಯಾಕ್ಸ್ವೆಲ್, ಸ್ಟೋಯಿನಿಸ್ರಂಥ ಬ್ಯಾಟರ್ಗಳು ಪಂಜಾಬ್ ತಂಡದಲ್ಲಿದ್ದಾರೆ. ವೇಗದ ಬೌಲಿಂಗ್ ವಿಭಾಗದಲ್ಲೂ ಉಭಯ ತಂಡಗಳು ಸಮಬಲ ಹೊಂದಿದ್ದು, ಆರ್ಸಿಬಿಗೆ ಭುವನೇಶ್ವರ್, ಹ್ಯಾಸಲ್ವುಡ್, ಯಶ್ ದಯಾಳ್ ಬಲ ತುಂಬಿದ್ದರೆ, ಪಂಜಾಬ್ಗೆ ಅರ್ಷದೀಪ್, ಮಾಕೋ ಜಾನ್ಸೆನ್ ಪ್ರಮುಖ ಅಸ್ತ್ರವೆನಿಸಿದ್ದಾರೆ. ಕರ್ನಾಟಕದ ವೇಗಿ ವೈಶಾಕ್ ವಿಜಯ್ಕುಮಾರ್ ಕೂಡ ಪಂಜಾಬ್ ತಂಡದಲ್ಲಿದ್ದು, ತವರಿನ ಅಂಗಣದಲ್ಲಿ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.
ಚಾಹಲ್ ಸ್ಪಿನ್ ಸವಾಲು
ಕಳೆದ ಮೆಗಾ ಹರಾಜಿನಲ್ಲಿ 18 ಕೋಟಿ ರೂ.ಗೆ ಪಂಜಾಬ್ ಕಿಂಗ್ಸ್ ತಂಡ ಸೇರಿದ್ದ ಸ್ಪಿನ್ನರ್ ಯಜುವೇಂದ್ರ ಚಾಹಲ್, ಆಡಿದ ಮೊದಲ 5 ಪಂದ್ಯಗಳಲ್ಲಿ ಎರಡೇ ವಿಕೆಟ್ ಕಬಳಿಸಿದ್ದರು. ಆದರೆ ಕಳೆದ ಪಂದ್ಯದಲ್ಲಿ ಕೆಕೆಆರ್ ಎದುರು 4 ವಿಕೆಟ್ ಕಬಳಿಸುವ ಮೂಲಕ ಪಂಜಾಬ್ ತಂಡದ ಅಚ್ಚರಿಯ ಗೆಲುವಿನ ರೂವಾರಿ ಎನಿಸಿದ್ದರು. ಚಾಹಲ್ ಲಯಕ್ಕೆ ಮರಳಿರುವುದು ಈಗ ಆರ್ಸಿಬಿ ಬ್ಯಾಟರ್ಗಳಿಗೆ ಹೆಚ್ಚಿನ ಸವಾಲು ಒಡ್ಡಲಿದೆ. ಆರ್ಸಿಬಿ ತಂಡದ ಬ್ಯಾಟರ್ಗಳು ತವರಿನ ಕಳೆದೆರಡು ಪಂದ್ಯಗಳಲ್ಲಿ ಸಾಯಿ ಕಿಶೋರ್ (22ಕ್ಕೆ 2), ಕುಲದೀಪ್ (17ಕ್ಕೆ 2) ಮತ್ತು ವಿಪ್ರಜ್ ನಿಗಮ್ (18ಕ್ಕೆ 2) ಎದುರು ಪರದಾಡಿದ್ದರು. ಹೀಗಾಗಿ, ಈ ಹಿಂದೆ ಆರ್ಸಿಬಿ ತಂಡದ ಪರವೇ ಆಡಿ, ಅದರ ಪರ ಸರ್ವಾಧಿಕ 139 ವಿಕೆಟ್ ಕಬಳಿಸಿದ ದಾಖಲೆಯನ್ನೂ ಹೊಂದಿರುವ ಚಾಹಲ್, ಚಿನ್ನಸ್ವಾಮಿ ಸ್ಟೇಡಿಯಂ ಪಿಚ್ನಲ್ಲಿ ಹೆಚ್ಚಿನ ಪಂದ್ಯ ಆಡಿದ ಅನುಭವವನ್ನೂ ಹೊಂದಿದ್ದಾರೆ. ಇದರಿಂದ ಆರ್ಸಿಬಿ ಬ್ಯಾಟರ್ಗಳು ಚಾಹಲ್ ದಾಳಿಯನ್ನು ಎಚ್ಚರಿಕೆಯಿಂದ ಎದುರಿಸಬೇಕಾಗುತ್ತದೆ.
3 ದಿನಗಳ ಅಂತರದಲ್ಲಿ 2 ಬಾರಿ ಮುಖಾಮುಖಿ!
ಆರ್ಸಿಬಿ&ಪಂಜಾಬ್ ಕಿಂಗ್ಸ್ ತಂಡಗಳು ಈ ಬಾರಿ ಕೇವಲ 3 ದಿನಗಳ ಅಂತರದಲ್ಲಿ 2 ಬಾರಿ ಎದುರಾಗಲಿವೆ. ಶುಕ್ರವಾರ ಬೆಂಗಳೂರಿನಲ್ಲಿ ಆಡಿದ ಬೆನ್ನಲ್ಲೇ ಉಭಯ ತಂಡಗಳು ಸುಮಾರು 2 ಸಾವಿರ ಕಿಲೋಮೀಟರ್ ದೂರದ ಚಂಡೀಗಢಕ್ಕೆ 3 ಗಂಟೆಗೂ ಅಧಿಕ ಸಮಯದ ವಿಮಾನ ಪ್ರಯಾಣ ಮಾಡಿ ತೆರಳಲಿದ್ದು, ಭಾನುವಾರ ಮಧ್ಯಾಹ್ನ 3.30ರಿಂದ ಮುಲ್ಲನ್ಪುರದಲ್ಲಿ ಮತ್ತೆ ಪಂದ್ಯ ಆಡಲಿವೆ. ಅಂದರೆ 32 ಗಂಟೆಗಳ ಅಂತರದಲ್ಲೇ ಉಭಯ ತಂಡಗಳು 2 ಬಾರಿ ಕಾದಾಡಲಿವೆ. ಈ ಸಂದಿಗ್ಧ ವೇಳಾಪಟ್ಟಿಗೆ ಕ್ರಿಕೆಟ್ ಪ್ರೇಮಿಗಳು, "ಐಪಿಎಲ್ ನಡುವೆ ಬಿಸಿಸಿಐ, ಆರ್ಸಿಬಿ-ಪಂಜಾಬ್ ನಡುವೆ 2 ಪಂದ್ಯಗಳ ಸರಣಿ ಆಯೋಜಿಸಿದೆ' ಎಂದು ಕಾಲೆಳೆದಿದ್ದಾರೆ.
ಮಳೆ ಭೀತಿ
ಉದ್ಯಾನನಗರಿಯಲ್ಲಿ ಮಂಗಳವಾರ-ಬುಧವಾರ ಸಂಜೆ ಮಳೆಯಾಗಿದ್ದು, ಇನ್ನೂ ಕೆಲ ದಿನ ಮೋಡಕವಿದ ವಾತಾವರಣ ಮುಂದುವರಿಯಲಿದೆ. ಶುಕ್ರವಾರವೂ ಸಣ್ಣ ಮಳೆ ಸುರಿಯುವ ಭೀತಿ ಇದೆ. ಹೀಗಾಗಿ ಪಂದ್ಯಕ್ಕೆ ಮಳೆ ಅಡಚಣೆ ಎದುರಾದರೆ ಅಚ್ಚರಿ ಇಲ್ಲ. ಆದರೆ ಸಬ್ಏರ್ ಸಿಸ್ಟಮ್ನಂಥ ಮಳೆ ನೀರು ಇಂಗಿಸುವ ವ್ಯವಸ್ಥೆ ಹೊಂದಿರುವ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಳೆಯಿಂದಾಗಿ ಪಂದ್ಯ ಸಂಪೂರ್ಣ ರದ್ದಾಗುವ ಸಾಧ್ಯತೆ ಇಲ್ಲ.
*ಮುಖಾಮುಖಿ: 33
ಆರ್ಸಿಬಿ: 16
ಪಂಜಾಬ್: 17
ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್ಸ್ಟಾರ್.
*15: ರಜತ್ ಪಾಟೀದಾರ್ ಇನ್ನು 15 ರನ್ ಗಳಿಸಿದರೆ ಆರ್ಸಿಬಿ ಪರ ಸಾವಿರ ರನ್ ಗಳಿಸಿದ 3ನೇ ಭಾರತೀಯರೆನಿಸಲಿದ್ದಾರೆ. ಕೊಹ್ಲಿ, ಪಡಿಕ್ಕಲ್ ಮೊದಲಿಬ್ಬರು.
*1: ಅರ್ಷದೀಪ್ ಸಿಂಗ್ ಇನ್ನು 1 ವಿಕೆಟ್ ಕಬಳಿಸಿದರೆ ಪಂಜಾಬ್ ಕಿಂಗ್ಸ್ ಪರ ಸರ್ವಾಧಿಕ ವಿಕೆಟ್ ಪಡೆದ ಬೌಲರ್ ಎನಿಸಲಿದ್ದಾರೆ. ಸದ್ಯ ಪೀಯುಷ್ ಚಾವ್ಲಾ (84) ಜತೆ ಸಮಬಲದಲ್ಲಿದ್ದಾರೆ..