

ನವದೆಹಲಿ: ತವರಿನಲ್ಲಿ ಮೊದಲ ಗೆಲುವು ದಾಖಲಿಸಿ ಆತ್ಮವಿಶ್ವಾಸ ವೃದ್ಧಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಐಪಿಎಲ್ 18ನೇ ಆವೃತ್ತಿಯಲ್ಲಿ ಭಾನುವಾರ ರಾತ್ರಿ ಮರುಮುಖಾಮುಖಿ ಆಗಲಿವೆ. ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದ ವಿಜೇತರು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶ ಹೊಂದಿದ್ದಾರೆ. ಹಾಲಿ ಸೀಸನ್‌ನ ಮೊದಲ ಕಾದಾಟದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಅಮೋಘ ಬ್ಯಾಟಿಂಗ್ ಎದುರು ರಜತ್ ಪಾಟೀದಾರ್ ಪಡೆ ನಿರಾಸೆ ಕಂಡಿತ್ತು. ಈಗ ಸೋಲಿಗೆ ಮುಯ್ಯಿ ತೀರಿಸುವ ಮೂಲಕ ತವರಿನಾಚೆಗಿನ ಅಜೇಯ ಓಟವನ್ನು ವಿಸ್ತರಿಸುವ ಹಂಬಲದಲ್ಲಿದೆ.
ಹಿಂದಿನ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಎದುರು ಸರ್ವಾಂಗೀಣ ನಿರ್ವಹಣೆಯೊಂದಿಗೆ ಗೆಲುವು ಒಲಿಸಿಕೊಂಡ ಆರ್‌ಸಿಬಿ, ಇದುವರೆಗೆ ಆಡಿರುವ 9 ಪಂದ್ಯಗಳಲ್ಲಿ 6 ಗೆಲುವು, 3 ಸೋಲಿನ ಸಹಿತ 12 ಅಂಕದೊಂದಿಗೆ ಮೂರನೇ ಸ್ಥಾನದಲ್ಲಿದೆ. ಆರಂಭಿಕ ಪಂದ್ಯಗಳ ಗೆಲುವಿನ ಬಳಿಕ ಕಳೆದ ನಾಲ್ಕು ಪಂದ್ಯಗಳಲ್ಲಿ ತಲಾ 2 ಸೋಲು-ಗೆಲುವು ಕಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ಸಹ 12 ಅಂಕ ಹೊಂದಿದ್ದು, ರನ್‌ರೇಟ್ ಆಧಾರದಲ್ಲಿ ಎರಡನೇ ಸ್ಥಾನದಲ್ಲಿದೆ. ಈ ಮುಖಾಮುಖಿಯ ವಿಜೇತರು ಅಗ್ರಸ್ಥಾನಕ್ಕೇರುವ ಜತೆಗೆ ಪ್ಲೇಆ್ಗೂ ಸನಿಹವಾಗಲಿದ್ದಾರೆ.
ಕೊಹ್ಲಿ ವರ್ಸಸ್ ರಾಹುಲ್!
ಹಾಲಿ ಋತುವಿನಲ್ಲಿ ಭರ್ಜರಿ ಾರ್ಮ್‌ನಲ್ಲಿರುವ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಪರಸ್ಪರ ಎದುರಾಗುತ್ತಿರುವುದು ಪಂದ್ಯದ ಮಹತ್ವ ಹೆಚ್ಚಿಸಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾದಾಟದಲ್ಲಿ ಅಜೇಯ 93 ರನ್‌ಗಳಿಸಿ ಡೆಲ್ಲಿ ಗೆಲ್ಲಿಸಿದ ನಂತರ ಕೆಎಲ್ ರಾಹುಲ್ ‘ಕಾಂತಾರ’ ಸಿನಿಮಾ ಶೈಲಿಯಲ್ಲಿ, ‘ಇದು ನನ್ನ ಮನೆ’ ಎಂದು ಸಂಭ್ರಮಿಸಿದ್ದರು.
ಇದೀಗ ಮರುಮುಖಾಮುಖಿ ನವದೆಹಲಿ ಅಂದರೆ ವಿರಾಟ್ ಕೊಹ್ಲಿ ಅವರ ಮನೆಯಂಗಣದಲ್ಲಿ ನಡೆಯುತ್ತಿದೆ. ಹೀಗಾಗಿ ಕೊಹ್ಲಿ ತನ್ನ ತವರಿನಲ್ಲಿ ತಿರುಗೇಟು ನೀಡುವರೇ ಎಂಬ ನಿರೀಕ್ಷೆ ಅಭಿಮಾನಿಗಳದ್ದಾಗಿದೆ. ಈಗಾಗಲೆ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್‌ರನ್ನು ಅಣಕಿಸಿ ಮೈದಾನದಲ್ಲಿ ಸಂಭ್ರಮಿಸಿರುವ ಕೊಹ್ಲಿ, ಈ ಬಾರಿ ಬಾಲ್ಯದಿಂದಲೂ ಆಡಿ ಬೆಳೆದ ಅಂಗಣದಲ್ಲಿ, ತವರಿನ ತಂಡದ ಎದುರು ಮುಯ್ಯಿ ತೀರಿಸುವರೇ ಎಂಬುದು ಕುತೂಹಲ ಹೆಚ್ಚಿದೆ. ಕಳೆದ ವರ್ಷ ರಣಜಿ ಟೂರ್ನಿಯಲ್ಲಿ ಏಕೈಕ ಪಂದ್ಯ ಆಡಿದ ಬಳಿಕ ಕೊಹ್ಲಿ ಮನೆ ಅಂಗಣದಲ್ಲಿ ಕಣಕ್ಕಿಳಿಯಲ್ಲಿದ್ದಾರೆ. ಹಾಲಿ ವರ್ಷ 5 ಅರ್ಧಶತಕ ಸಿಡಿಸಿ ಆರೆಂಜ್ ಕ್ಯಾಪ್ ರೇಸ್‌ನಲ್ಲಿ 392 ರನ್‌ಗಳೊಂದಿಗೆ ಕೊಹ್ಲಿ 2ನೇ ಸ್ಥಾನದಲ್ಲಿದ್ದಾರೆ. ಡೆಲ್ಲಿ ತಂಡದ ಸ್ಟಾರ್ ಆಟಗಾರ ಎನಿಸಿರುವ ರಾಹುಲ್ 7 ಪಂದ್ಯಗಳಲ್ಲಿ 323 ರನ್‌ಗಳಿಸಿ 9ನೇ ಸ್ಥಾನದಲ್ಲಿದ್ದಾರೆ.
ಆಸೀಸ್ ವೇಗಿಗಳ ಆಕರ್ಷಣೆ
ಆಸ್ಟ್ರೇಲಿಯಾದ ಚಾಂಪಿಯನ್ ಬೌಲರ್‌ಗಳೆನಿಸಿರುವ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಹಾಗೂ ಜೋಶ್ ಹ್ಯಾಸಲ್‌ವುಡ್ ಈ ಪಂದ್ಯದ ಮತ್ತೊಂದು ಆಕರ್ಷಣೆ. ಒತ್ತಡದಲ್ಲಿಪಂದ್ಯದ ಗತಿ ಬದಲಾಯಿಸಬಲ್ಲ ಇಬ್ಬರೂ ಬೌಲರ್‌ಗಳು ಸೀಸನ್‌ನಲ್ಲಿ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಹ್ಯಾಸಲ್‌ವುಡ್ 16 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ (ಗರಿಷ್ಠ ವಿಕೆಟ್) ರೇಸ್‌ನಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಸ್ಟಾರ್ಕ್ 11 ವಿಕೆಟ್ ಕಬಳಿಸಿ 14ನೇ ಸ್ಥಾನದಲ್ಲಿದ್ದಾರೆ. ಸ್ಟಾರ್ಕ್ ಪವರ್ ಪ್ಲೇಯಲ್ಲಿ 11.10ರ ರನ್‌ರೇಟ್ ಹೊಂದಿದ್ದು, ಹ್ಯಾಸಲ್‌ವುಡ್ ಎದುರು ಕೆಎಲ್ ರಾಹುಲ್ ಉತ್ತಮ ದಾಖಲೆ ಕಾಪಾಡಿಕೊಂಡಿದ್ದಾರೆ.
3. ಭುವನೇಶ್ವರ್ ಕುಮಾರ್ (190) ಇನ್ನು 3 ವಿಕೆಟ್ ಪಡೆದರೆ ಐಪಿಎಲ್‌ನಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಪೀಯುಷ್ ಚಾವ್ಲಾ (192) ಅವರನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಲಿದ್ದಾರೆ. ಯಜುವೇಂದ್ರ ಚಾಹಲ್ (214) ಅಗ್ರಸ್ಥಾನದಲ್ಲಿದ್ದಾರೆ.
ಮುಖಾಮುಖಿ: 32
ಆರ್‌ಸಿಬಿ: 19
ಡೆಲ್ಲಿ ಕ್ಯಾಪಿಟಲ್ಸ್: 12
ರದ್ದು: 1
ಆರಂಭ:ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್