

RCB : ಮುಂಬರುವ ಐಪಿಎಲ್ 18ನೇ ಆವೃತ್ತಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ( ಆರ್ಸಿಬಿ ) ತಂಡದ ನಾಯಕತ್ವದ ಜವಾಬ್ದಾರಿ ಯುವ ಆಟಗಾರ ರಜತ್ ಪಾಟೀದಾರ್ ಹೆಗಲಿಗೆ ಬಿದ್ದಿದೆ. ಇಂದು ಬೆಳಗ್ಗೆ 11.30ಕ್ಕೆ ಆರ್ಸಿಬಿ ತಂಡದ ಹೊಸ ನಾಯಕನಾಗಿ ರಜತ್ ಪಾಟೀದಾರ್ ಅವರ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಲಾಯಿತು.
ಮಧ್ಯಪ್ರದೇಶ ಮೂಲದ 31 ವರ್ಷದ ರಜತ್ ಪಾಟೀದಾರ್ ಇತ್ತೀಚೆಗೆ ದೇಶೀಯ ಟಿ20 ಕ್ರಿಕೆಟ್ ಟೂರ್ನಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ತನ್ನ ತವರು ರಾಜ್ಯ ತಂಡದ ನಾಯಕರಾಗಿ ಫೈನಲ್ಗೇರಿಸಿದ್ದರು. ಅಲ್ಲದೆ ಬ್ಯಾಟಿಂಗ್ನಲ್ಲೂ ಮಿಂಚಿ 428 ರನ್ಗಳೊಂದಿಗೆ ಟೂರ್ನಿಯ 2ನೇ ಗರಿಷ್ಠ ರನ್ ಸ್ಕೋರರ್ ಆಗಿದ್ದರು. ಅಲ್ಲದೆ, ಕಳೆದ ಐಪಿಎಲ್ ಸೀಸನ್ನಲ್ಲಿ ಆರ್ಸಿಬಿ ಪರ ಪಾಟೀದರ್ ಅತ್ಯುತ್ತಮ ಪ್ರದರ್ಶನ ನೀಡಿದರು. ಈ ಹಿನ್ನೆಲೆಯಲ್ಲಿ ರಜತ್ ಪಾಟೀದಾರ್, ಆರ್ಸಿಬಿ ನಾಯಕತ್ವದ ರೇಸ್ನಲ್ಲಿ ಮುಂಚೂಣಿಯಲ್ಲಿದ್ದರು. ಅಂತಿಮವಾಗಿ ಅವರನ್ನೇ ಅಧಿಕೃತವಾಗಿ ಆಯ್ಕೆ ಮಾಡಲಾಗಿದೆ.
ಕಳೆದ 3 ವರ್ಷಗಳಿಂದ ಆರ್ಸಿಬಿ ತಂಡದ ನಾಯಕರಾಗಿದ್ದ ಫಾಫ್ ಡು ಪ್ಲೆಸಿಸ್ ಈ ಬಾರಿ ತಂಡದಲ್ಲಿ ರಿಟೇನ್ ಆಗಿರಲಿಲ್ಲ. ಅಲ್ಲದೆ ಕಳೆದ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಾಗಿದ್ದರು. ಹೀಗಾಗಿ ಆರ್ಸಿಬಿ ಈ ಬಾರಿ ಹೊಸ ನಾಯಕನನ್ನು ನೇಮಿಸುವುದು ಅನಿವಾರ್ಯವಾಗಿತ್ತು. ಯಾರಾಗ್ತಾರೆ ಮುಂದಿನ ಕ್ಯಾಪ್ಟನ್ ಎಂಬ ಕುತೂಹಲ ಕೂಡ ಅಭಿಮಾನಿಗಳಲ್ಲಿ ಮೂಡಿತ್ತು. ಕೊನೆಗೂ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಇನ್ನು ಮುಂದೆ ಆರ್ಸಿಬಿ ಪಾಳಯವನ್ನು ರಜತ್ ಪಾಟೀದಾರ್ ಮುನ್ನಡೆಸಲಿದ್ದಾರೆ.
ಈ ಬಗ್ಗೆ ಮಾತನಾಡಿರುವ ಆರ್ಸಿಬಿ ಮುಖ್ಯ ಕೋಚ್ ಆ್ಯಂಡಿ ಫ್ಲವರ್, ರಜತ್ ತುಂಬಾ ಸರಳತೆಯನ್ನು ಹೊಂದಿದ್ದಾರೆ. ತಮ್ಮ ಸುತ್ತಮುತ್ತಲಿನ ಜನರ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ. ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮಧ್ಯಪ್ರದೇಶ ತಂಡವನ್ನು ಹೇಗೆ ಮುನ್ನಡೆಸಿದರು ಎಂಬುದನ್ನು ನಾವು ಹತ್ತಿರದಿಂದ ನೋಡಿದ್ದೇವೆ. ನಮಗೆ ಅದು ನಿಜವಾಗಿಯೂ ಇಷ್ಟವಾಯಿತು ಎಂದು ಹೇಳಿದರು.
ವಿರಾಟ್ ಕೊಹ್ಲಿ ಈ ಹಿಂದೆ 143 ಪಂದ್ಯಗಳಲ್ಲಿ ಆರ್ಸಿಬಿ ತಂಡವನ್ನು ಮುನ್ನಡೆಸಿದ್ದರು. ಆದರೆ ಒಮ್ಮೆಯೂ ತಂಡಕ್ಕೆ ಪ್ರಶಸ್ತಿ ಗೆದ್ದುಕೊಡದ ನಿರಾಸೆಯಲ್ಲಿ ಅವರು ನಾಯಕತ್ವ ತ್ಯಜಿಸಿದ್ದರು. ಅಲ್ಲದೆ 2021ರಲ್ಲಿ ಕೊಹ್ಲಿ ಬ್ಯಾಟಿಂಗ್ನತ್ತ ಹೆಚ್ಚಿನ ಗಮನಹರಿಸುವ ಸಲುವಾಗಿಯೂ ಈ ನಿರ್ಧಾರ ತೆಗೆದುಕೊಂಡಿದ್ದರು. ಆದರೆ ಸದ್ಯ ಅವರು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಿಂದ ನಿವೃತ್ತಿ ಹೊಂದಿರುವುದರಿಂದ ಹೆಚ್ಚಿನ ಒತ್ತಡವಿಲ್ಲದೆ ಆರ್ಸಿಬಿ ನಾಯಕತ್ವವನ್ನು ಮರಳಿ ವಹಿಸಿಕೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗಿತ್ತು. ಆದರೆ, ಆರ್ಸಿಬಿ ಫ್ರಾಂಚೈಸಿ ಯುವ ಆಟಗಾರನಿಗೆ ಮಣೆಹಾಕಿದೆ. (ಏಜೆನ್ಸೀಸ್)