

ಬೆಂಗಳೂರು: ಸತತ ವೈಫಲ್ಯಗಳಿಂದ ಜರ್ಜರಿತವಾಗಿದ್ದ ಆರ್ಸಿಬಿ ಮಹಿಳಾ ತಂಡಕ್ಕೆ ಹೊಸ ಮುಖ್ಯ ಕೋಚ್ ನೇಮಕ ಮಾಡಲಾಗಿದೆ. ಇದರ ಜತೆಗೆ ಆರ್ಸಿಬಿ ಆಡಳಿತ ತನ್ನ ತಂಡದ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಯಲ್ಲಿ ಬದಲಾವಣೆ ಮಾಡಿದೆ.
ಮುಂದಿನ ಡಬ್ಯ್ಲುಪಿಎಲ್ ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾದ ಮಾಜಿ ಆಟಗಾರ ಮತ್ತು ಕೋಚ್ ಲ್ಯೂಕ್ ವಿಲಿಯಮ್ಸ್ ಅವರನ್ನು ಮಹಿಳಾ ತಂಡಕ್ಕೆ ಕೊಚ್ ಆಗಿ ಸೇರಿಸಿಕೊಂಡಿದೆ.
2024 ರ ಐಪಿಎಲ್ ಗೆ ಸಿದ್ಧತೆ ಮಾಡಿಕೊಳ್ಳುವ ಸಲುವಾಗಿ ಪುರುಷರ ತಂಡದಲ್ಲಿ ಸಾಕಷ್ಟು ಬದಲಾವಣೆ ಮಾಡಿರುವ ಆರ್ಸಿಬಿ ಇದೀಗ ಮಹಿಳಾ ತಂಡದಲ್ಲೂ ಪ್ರಮುಖ ಬದಲಾವಣೆ ಮಾಡಿದೆ.
ಕೆಲವು ದಿನಗಳ ಹಿಂದೆ ಪುರುಷರ ತಂಡದಲ್ಲಿ ಮುಖ್ಯ ಕೋಚ್ ಹಾಗೂ ನಿದೇಶಕರನ್ನಾಗಿ ಆಂಡಿ ಫ್ಲವರ್ ಮತ್ತು ಮೊ ಬೊಬಾಟ್ ಅವರನ್ನು ನೇಮಿಸಿಕೊಂಡಿತ್ತು. ಇದೀಗ ಮಹಿಳಾ ತಂಡದ ಮುಖ್ಯ ಕೋಚ್ ಆಗಿದ್ದ ಬೆನ್ ಸಾಯರ್ ರನ್ನು ಬದಲಿಸಿ ಮಹಿಳಾ ಬಿಗ್ ಬ್ಯಾಷ್ ಲೀಗ್ ವಿಜೇತ ಕೋಚ್ ಲ್ಯೂಕ್ ವಿಲಿಯಮ್ಸ್ ರನ್ನು ಆ ಸ್ಥಾನಕ್ಕೆ ನೇಮಕ ಮಾಡಿದೆ.
ಬ್ಯಾಡ್ ಲಕ್ ಟೀಂ: ಐಪಿಎಲ್‌ನ ದುರದೃಷ್ಟಕರ ತಂಡಗಳಲ್ಲಿ ಆರ್ಸಿಬಿ ತಂಡ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ತಂಡದಲ್ಲಿ ಸ್ಟಾರ್ ಆಟಗಾರರಿದ್ದರೂ ತಂಡವು ಒಮ್ಮೆಯೂ ಐಪಿಎಲ್ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ಇನ್ನು ಕಳೆದ ವರ್ಷದಿಂದ ಆರಂಭವಾಗಿರುವ ಮಹಿಳಾ ಪ್ರಿಮಿಯರ್ ಲೀಗ್ನಲ್ಲೂ ಸಹ ಆರ್ಸಿಬಿ ಒಡೆತನದ ತಂಡದ ಪ್ರದರ್ಶನ ತೀರಾ ಕಳಪೆಯಾಗಿತ್ತು. ಪುರುಷರ ತಂಡದಂತೆ ಮಹಿಳಾ ತಂಡದಲ್ಲೂ ಸ್ಟಾರ್ ಆಟಗಾರ್ತಿಯರ ದಂಡೇ ಇದ್ದರೂ ಆ ತಂಡಕ್ಕೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿರಲಿಲ್ಲ.
ಸಾಧಕ ವಿಲಿಯಮ್ಸ್: ಕೋಚ್ ಆಗಿ ಲ್ಯೂಕ್ ವಿಲಿಯಮ್ಸ್ ಸಾಧನೆ ಅದ್ಭುತವಾಗಿತ್ತು. ಅವರು ಮಹಿಳಾ ಬಿಗ್ ಬ್ಯಾಷ್ ಲೀಗ್‌ನಲ್ಲಿ ಅಡಿಲೇಡ್ ಸ್ಟ್ರೈಕರ್ಸ್ ತಂಡಕ್ಕೆ ತರಬೇತುದಾರರಾಗಿದ್ದು, ಅವರ ಮಾರ್ಗದರ್ಶನದಲ್ಲಿ ತಂಡವು 2022-23 ಆವೃತ್ತಿಯಲ್ಲಿ ಟ್ರೋಫಿ ಗೆದ್ದುಕೊಂಡಿತ್ತು. ಅಷ್ಟೇ ಅಲ್ಲ, ಅಲಿಡಾಡ್ ತಂಡವು ಎರಡು ಬಾರಿ ರನ್ನರ್ ಅಪ್ ಆಗಿತ್ತು. ಇವರು ದಿ ಹಂಡ್ರೆಡ್‌ನಲ್ಲಿ ಸದರ್ನ್ ಬ್ರೇವ್ ತಂಡದಲ್ಲಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ
ಭಾರೀ ಬದಲಾವಣೆ:ತಂಡದ ಕಳಪೆ ಪ್ರದರ್ಶನ ಹಿನ್ನೆಲೆಯಲ್ಲಿ ಆರ್ಸಿಬಿ ಆಡಳಿತವು ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್, ನಿರ್ದೇಶಕ ಮೈಕ್ ಹೆಸ್ಸನ್ ರನ್ನು ವಜಾಮಾಡಿ ಅವರ ಸ್ಥಾನಕ್ಕೆ ಕ್ರಮವಾಗಿ ಆಂಡಿ ಫ್ಲವರ್ ಹಾಗೂ ಮೊ ಬೊಬಾಟ್ ರನ್ನು ನೇಮಿಸಿತ್ತು.