ವಿರಾಟ್ ಕೊಹ್ಲಿ ಬಳಗಕ್ಕೆ ಸನ್‌ರೈಸರ್ಸ್‌ ಮೊದಲ ಸವಾಲು

virat kohli practice for web
Published on

ದುಬೈ: ಮರಳುಗಾಡಿನಲ್ಲಿ ಪ್ರಶಸ್ತಿ ಬರ ನೀಗಿಸಿಕೊಳ್ಳುವ ಯತ್ನದಲ್ಲಿರುವ ವಿರಾಟ್ ಕೊಹ್ಲಿ ಸಾರಥ್ಯದ ಆರ್‌ಸಿಬಿ ಹಾಗೂ ಮಾಜಿ ಚಾಂಪಿಯನ್ ಸನ್‌ರೈಸರ್ಸ್‌ ಹೈದರಾಬಾದ್ ತಂಡಗಳು ಸೋಮವಾರ ನಡೆಯಲಿರುವ ಐಪಿಎಲ್-13ರ ಪಂದ್ಯದಲ್ಲಿ ಎದುರಾಗಲಿವೆ.
ಕಳೆದ ಮೂರು ಆವೃತ್ತಿಗಳಲ್ಲೂ ಹೀನಾಯ ನಿರ್ವಹಣೆ ತೋರುತ್ತಾ ಬಂದಿರುವ ವಿರಾಟ್ ಕೊಹ್ಲಿ ಬಳಗ ಈ ಬಾರಿ ಟೂರ್ನಿ ಆರಂಭಕ್ಕೂ ಮುನ್ನ ಸಾಕಷ್ಟು ಜೋಶ್‌ನಲ್ಲಿದೆ. 2016ರಲ್ಲಿ ಕಡೇ ಬಾರಿಗೆ ಫೈನಲ್ ಪ್ರವೇಶಿಸಿದ್ದ ಕೊಹ್ಲಿ ಬಳಗದಲ್ಲಿ ಯುವ ಹಾಗೂ ಅನುಭವಿ ಪಡೆಯೇ ಇದೆ. ಕಳೆದ 6 ತಿಂಗಳಿಂದ ಕ್ರಿಕೆಟ್‌ನಿಂದ ದೂರ ಉಳಿದಿದ್ದ ಕೊಹ್ಲಿ, ಅಪ್ಪನಾಗುತ್ತಿರುವ ಖುಷಿಯೊಂದಿಗೆ ಮೈದಾನಕ್ಕಿಳಿಯಲಿದ್ದಾರೆ. ಎರಡು ತಂಡದಲ್ಲೂ ಬಲಿಷ್ಠ ಬ್ಯಾಟ್ಸ್‌ಮನ್‌ಗಳಿದ್ದು, ರನ್‌ಹೊಳೆ ಹರಿಸುವ ನಿರೀಕ್ಷೆಯಲ್ಲಿವೆ.
ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಸೌತ್ ಇಂಡಿಯನ್ ಡರ್ಬಿಗೆ ವೇದಿಕೆಯಾಗಿದೆ. ವಿರಾಟ್ ಕೊಹ್ಲಿ-ಎಬಿ ಡಿವಿಲಿಯರ್ಸ್‌ ಜೋಡಿಗೆ ಆರನ್ ಫಿಂಚ್ ಈ ಬಾರಿ ಕೈಜೋಡಿಸಿದ್ದು ತಂಡದ ಬ್ಯಾಟಿಂಗ್ ಬಲವನ್ನು ಮತ್ತಷ್ಟು ಹೆಚ್ಚಿಸಿದೆ. ಕಳೆದ ದೇಶೀಯ ಕ್ರಿಕೆಟ್ ಋತುವಿನಲ್ಲಿ ಉತ್ತಮ ನಿರ್ವಹಣೆ ತೋರಿದ್ದ ದೇವದತ್ ಪಡಿಕಲ್ ಐಪಿಎಲ್‌ಗೆ ಪದಾರ್ಪಣೆ ಮಾಡುವ ನಿರೀಕ್ಷೆಯಿದೆ.
ಮತ್ತೊಂದೆಡೆ, ಮೂರು ಬಾರಿ ಆರೆಂಜ್ ಕ್ಯಾಪ್ ಧರಿಸಿದ ದಾಖಲೆ ಹೊಂದಿರುವ ಸನ್‌ರೈಸರ್ಸ್‌ ತಂಡದ ನಾಯಕ ಡೇವಿಡ್ ವಾರ್ನರ್ ಮತ್ತೊಂದು ಸ್ಫೋಟಕ ಇನಿಂಗ್ಸ್‌ಗೆ ಸಜ್ಜಾಗಿದ್ದಾರೆ. ಎರಡೂ ತಂಡಗಳಿಗೂ ಆಸ್ಟ್ರೇಲಿಯಾದ ಮಾಜಿ ಆಟಗಾರರೇ ಮಾರ್ಗದರ್ಶಕರಾಗಿರುವುದು ವಿಶೇಷ. ಆರ್‌ಸಿಬಿ ತಂಡಕ್ಕೆ ಸೈಮನ್ ಕ್ಯಾಟಿಚ್ ಹಾಗೂ ಟ್ರೆವರ್ ಬೇಲಿಸ್ ಸನ್‌ರೈಸರ್ಸ್‌ ತಂಡಕ್ಕೆ ಕೋಚ್ ಆಗಿದ್ದಾರೆ. ಬೇಲಿಸ್ ಮಾರ್ಗದರ್ಶನದಲ್ಲಿಯೇ ಇಂಗ್ಲೆಂಡ್ ತಂಡ ಕಳೆದ ವರ್ಷ ಏಕದಿನ ವಿಶ್ವಕಪ್ ಟ್ರೋಫಿ ಜಯಿಸಿತ್ತು.

ಆರಂಭ: ರಾತ್ರಿ 7.30 
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

ಮುಖಾಮುಖಿ: 14
ಆರ್‌ಸಿಬಿ: 6
ಸನ್‌ರೈಸರ್ಸ್‌: 7
ರದ್ದು: 1

ಟೀಮ್ ನ್ಯೂಸ್:

ಸನ್‌ರೈಸರ್ಸ್‌: ಬಲಿಷ್ಠ ಅಗ್ರ ಕ್ರಮಾಂಕ ಹೊಂದಿದ್ದರೂ ಮಧ್ಯಮ ಕ್ರಮಾಂಕದ್ದೇ ದೊಡ್ಡ ಚಿಂತೆಯಾಗಿದೆ. ವಾರ್ನರ್-ಬೇರ್‌ಸ್ಟೋ ಜೋಡಿ ಕಳೆದ ವರ್ಷ ಆರ್‌ಸಿಬಿ ವಿರುದ್ಧವೇ ಗರಿಷ್ಠ ಜತೆಯಾಟವಾಡಿದ ದಾಖಲೆ ನಿರ್ಮಿಸಿತ್ತು. ವಿದೇಶಿ ಕೋಟಾವೇ ದೊಡ್ಡ ಗೊಂದಲದಲ್ಲಿದ್ದು, ವಾರ್ನರ್, ಬೇರ್‌ಸ್ಟೋ, ಆಲ್ರೌಂಡರ್ ಮೊಹಮದ್ ನಬಿ, ಸ್ಪಿನ್ನರ್ ರಶೀದ್ ಖಾನ್‌ಗೆ ಮೊದಲ ಆದ್ಯತೆ. ಹೀಗಾಗಿ ಕೇನ್ ವಿಲಿಯಮ್ಸ್‌ನ್ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವುದು ಸ್ವಲ್ಪ ಕಷ್ಟವೇ. ಕರ್ನಾಟಕದ ಮನೀಷ್ ಪಾಂಡೆ ಮೂರನೇ ಕ್ರಮಾಂಕದ ಬ್ಯಾಟಿಂಗ್ ಜವಾಬ್ದಾರಿ ಹೊತ್ತರೆ, ಮಧ್ಯಮ ಕ್ರಮಾಂಕದ ವಿಜಯ್ ಶಂಕರ್ ಹೋರಾಟ ಅನಿವಾರ್ಯವಾಗಲಿದೆ. ಉಳಿದಂತೆ ವೇಗದ ವಿಭಾಗವನ್ನು ಭುವನೇಶ್ವರ್ ಕುಮಾರ್, ಸ್ಪಿನ್ ವಿಭಾಗವನ್ನು ರಶೀದ್ ಖಾನ್ ಮುನ್ನಡೆಸಲಿದ್ದಾರೆ.

ಸಂಭಾವ್ಯ ತಂಡ: ಡೇವಿಡ್ ವಾರ್ನರ್ (ನಾಯಕ), ಜಾನಿ ಬೇರ್‌ಸ್ಟೋ (ವಿಕೀ), ಮನೀಷ್ ಪಾಂಡೆ, ಪ್ರಿಯಂ ಗಾರ್ಗ್/ವಿರಾಟ್ ಸಿಂಗ್, ವಿಜಯ್ ಶಂಕರ್, ಅಬ್ದುಲ್ ಸಮದ್/ಅಭಿಷೇಕ್ ಶರ್ಮ, ಮೊಹಮದ್ ನಬಿ, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಖಲೀಲ್ ಅಹಮದ್/ಸಿದ್ದಾರ್ಥ್ ಕೌಲ್, ಶಾಬಾಜ್ ನದೀಂ.

ಆರ್‌ಸಿಬಿ: ತಂಡದ ವಿಕೆಟ್ ಕೀಪಿಂಗ್ ಆಯ್ಕೆಯೇ ಗೊಂದಲದಲ್ಲಿದೆ. ಎಬಿ ಡಿವಿಲಿಯರ್ಸ್‌ ವಿಕೆಟ್ ಕೀಪಿಂಗ್ ಜವಾಬ್ದಾರಿ ಹೊಣೆ ಹೊತ್ತರೆ ಕಳೆದ ಆವೃತ್ತಿಯ ದೇಶೀಯ ಕ್ರಿಕೆಟ್ ಋತುವಿನಲ್ಲಿ ಉತ್ತಮ ನಿರ್ವಹಣೆ ತೋರಿರುವ ಕರ್ನಾಟಕದ ದೇವದತ್ ಪಡಿಕಲ್ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಬಹುದು. ಪಾರ್ಥಿವ್ ಪಟೇಲ್, ವಿಕೆಟ್ ಕೀಪಿಂಗ್ ಜಾಗದಲ್ಲಿ ಮುಂದುವರಿದರೆ ಗುರುಕೀರತ್ ಮಾನ್ ಸಿಂಗ್ ಅಥವಾ ಪಡಿಕಲ್ ಇಬ್ಬರಲ್ಲಿ ಒಬ್ಬರು ಕಣಕ್ಕಿಳಿಯಬಹುದು. ಉಳಿದಂತೆ, ಕೊಹ್ಲಿ-ಡಿವಿಲಿಯರ್ಸ್‌ ಜೋಡಿಗೆ ಫಿಂಚ್ ಸೇರ್ಪಡೆಗೊಂಡಿರುವುದು ಬ್ಯಾಟಿಂಗ್ ವಿಭಾಗದ ಬಲ ಹೆಚ್ಚಿಸಿದೆ. ಸ್ಪಿನ್ ವಿಭಾಗವನ್ನು ಯುಜುವೇಂದ್ರ ಚಾಹಲ್ ಮುನ್ನಡೆಸಿದರೆ, ಇವರೊಂದಿಗೆ ಚೆಂಡು ಹಂಚಿಕೊಳ್ಳಲು ವಾಷಿಂಗ್ಟನ್ ಸುಂದರ್, ಪವನ್ ನೇಗಿ, ಆಡಂ ಜಂಪಾ, ಮೊಯಿನ್ ಅಲಿ ನಡುವೆ ಪೈಪೋಟಿ ಏರ್ಪಟ್ಟಿದೆ. ಹೊಸದಾಗಿ ಸೇರ್ಪಡೆಗೊಂದಿರುವ ಕ್ರಿಸ್ ಮಾರಿಸ್ ಡೆತ್ ಓವರ್ ಸಮಸ್ಯೆ ನೀಗಿಸಬಹುದು.

ತಂಡ: ಆರನ್ ಫಿಂಚ್, ದೇವದತ್ ಪಡಿಕಲ್/ಪಾರ್ಥಿವ್ ಪಟೇಲ್, ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್‌ (ವಿಕೀ), ಮೊಯಿನ್ ಅಲಿ, ಶಿವಂ ದುಬೆ, ಕ್ರಿಸ್ ಮಾರಿಸ್, ವಾಷಿಂಗ್ಟನ್ ಸುಂದರ್, ಉಮೇಶ್ ಯಾದವ್, ನವದೀಪ್ ಸೈನಿ, ಯಜುವೇಂದ್ರ ಚಾಹಲ್.

ಪಿಚ್ ಹೇಗಿದೆ? 
ಬ್ಯಾಟಿಂಗ್ ಸ್ನೇಹಿಪಿಚ್ ಇದಾಗಿದ್ದು, ಪವರ್ ಪ್ಲೇನಲ್ಲಿ ಕಲೆಹಾಕುವ ರನ್ ಎರಡು ತಂಡಗಳಿಗೆ ಪ್ರಮುಖವಾಗಿರುತ್ತದೆ. ಟಾಸ್ ಜಯಿಸಿದ ತಂಡ ಫೀಲ್ಡಿಂಗ್ ಆಯ್ಕೆಗೆ ಪ್ರಾಮುಖ್ಯತೆ ಕೊಡಲಿದೆ. 35 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿರಲಿದೆ.

4: ಈ ಮೈದಾನದಲ್ಲಿ ಆಡಿದ ಕಡೇ 4 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡಗಳ ಸರಾಸರಿ ಮೊತ್ತ 138.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net